ಬಿಜೆಪಿ ಪರ ಅಧಿಕಾರಿ ಮತ ಚಲಾವಣೆ: ಉದ್ವಿಗ್ನ ಸ್ಥಿತಿ

ಕಲಬುರಗಿ :ಮೇ.10: ಚುನಾವಣಾ ಅಧಿಕಾರಿಯೊಬ್ಬರು ದೃಷ್ಟಿ ವಿಕಲಚೇತನ ಮಹಿಳಾ ಮತದಾರರೊಬ್ಬರಿಗೆ ಸಹಾಯ ಮಾಡುವ ನೆಪದಲ್ಲಿ ಬಿಜೆಪಿ ಪರ ಬಟನ್ ಒತ್ತಿದ ಘಟನೆ ಚಿತ್ತಾಪುರ ತಾಲ್ಲೂಕಿನ ಚಾಮನೂರು ಗ್ರಾಮದಲ್ಲಿ ನಡೆದಿದೆ. ಹೀಗಾಗಿ ಕೆಲಕಾಲ ಮತಗಟ್ಟೆ ಬಳಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

ಬಿ.ಸಿ. ಚವ್ಹಾಣ ಎಂಬ ಚುನಾವಣಾ ಅಧಿಕಾರಿ ಮೇಲೆ ಆರೋಪ ಬಂದಿದ್ದು ಸ್ಥಳಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಚಿತ್ತಾಪುರ ಚುನಾವಣಾಧಿಕಾರಿ ನವೀನ್ ಕುಮಾರ್ ಯು. ಅಧಿಕಾರಿಯನ್ನು ಬದಲಾಯಿಸಿದರು.

ಬಸಮ್ಮ ಎಂಟಮನ್ ಎಂಬ ಮಹಿಳೆ ಮತಗಟ್ಟೆಗೆ ಹೋಗಿ ಕಾಂಗ್ರೆಸ್ ಅಭ್ಯರ್ಥಿಯ ಚಿಹ್ನೆಗೆ ಬಟನ್ ಒತ್ತುವಂತೆ ಮನವಿ ಮಾಡಿದ್ದಾರೆ. ಆದರೆ ಚುನಾವಣಾಧಿಕಾರಿ ಬಿಜೆಪಿ ಅಭ್ಯರ್ಥಿಯ ಮುಂದಿರುವ ಬಟನ್ ಒತ್ತಿದ್ದಾರೆ. ಅದು ಮಹಿಳೆ ಗಮನಕ್ಕೆ ಬಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗಾಗಿ, ಘಟನೆ ಬಯಲಿಗೆ ಬಂದಿದೆ.

ಇದಕ್ಕೂ ಮೊದಲು ಮತಯಂತ್ರ ಪರೀಕ್ಷೆ ಸಮಯದಲ್ಲಿ ಸಹ ಬಿಜೆಪಿಯ ಸುಮಾರು ಐವತ್ತಕ್ಕೂ ಅಧಿಕ ಅಧಿಕ ಮತ ಹಾಕಲಾಗಿದೆ ಎಂದು ಹೇಳಲಾಗಿದ್ದು, ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ನಂತರ ಅದನ್ನು ಡಿಲೀಟ್ ಮಾಡಲಾಗಿದೆ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡ ಭಗವಾನ್ ಆರೋಪಿಸಿದ್ದಾರೆ.

ಸ್ಥಳಕ್ಕೆ ಬಂದ ಪ್ರಿಯಾಂಕ್ ಖರ್ಗೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಬದಲಾಯಿಸುವಂತೆ ಚುನಾವಣಾ ಅಧಿಕಾರಿ ಮೇಲೆ ಒತ್ತಡ ಹೇರಿದ ಮೇಲೆ ಅವರನ್ನು ಬದಲಾಯಿಸಿದ ನಂತರ
ಆರೋಪಿಯನ್ನು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.