ಬಿಜೆಪಿ ಪಕ್ಷ ಸಂವಿಧಾನ ವಿರೋಧಿಪಕ್ಷವಾಗಿದೆ – ಮಹೇಂದ್ರ ಕುಮಾರ ಮಿತ್ರ

ರಾಯಚೂರು,ಏ೧- ಭಾರತ ಸಂವಿಧಾನದ ಅನುಚ್ಛೇದ ೧೪೧ ಮತ್ತು ೧೪೪ ರ ಪ್ರಕಾರ ಸುಪ್ರೀಂ ಕೋಟ್ ಆದೇಶವನ್ನು ಈ ದೇಶದ ಪ್ರತಿ ಪ್ರಜೆಯು ಗೌರವಿಸಬೇಕು ಮತ್ತು ಪಾಲನೆ ಮಾಡಬೇಕು ಆದರೆ ಬಿಜೆಪಿ ಪಕ್ಷವು ಸುಪ್ರೀಂ ಕೋರ್ಟ್ ಆದೇಶವನ್ನು ತಿರಸ್ಕರಿಸಿದೆ. ಹೀಗಾಗಿ ಬಿಜೆಪಿ ಪಕ್ಷವು ಭಾರತ ಸಂವಿಧಾನ ವಿರೋಧಿಪಕ್ಷವಾಗಿದೆ ಎಂದು ಡಾ. ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮಹೇಂದ್ರಕುಮಾರ ಮಿತ್ರ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಾದಿಗ ಮತ್ತು ಹೊಲೆಯ ಸಮಾಜದವರು ಬಿಜೆಪಿ ಪಕ್ಷಕ್ಕೆ ತಮ್ಮ ಮತವನ್ನು ನೀಡಿದರೆ ತಮ್ಮ ಮಕ್ಕಳಿಗೆ ಸರ್ಕಾರಿ ಸವಲತ್ತುಗಳನ್ನು ನೀವೇ ತಪ್ಪಿಸಿದ ಹಾಗೆ ಬಿಜೆಪಿ ಉತ್ತರ ಕನ್ನಡದ ಲೋಕಸಭಾ ಸದಸ್ಯ ಅನಂತಕುಮಾರ ಹೆಗಡೆ ದಿ.೨೬.೧೨.೨೦೧೭ರಂದು ಕೊಪ್ಪಳದ ಒಂದು ಕಾರ್ಯಕ್ರಮದಲ್ಲಿ ನಾವು ಸಂವಿಧಾನವನ್ನು ಬದಲಿಸಲು ಬಂದಿದ್ದೇವೆ ಎಂದು ಹೇಳಿದ್ದರು ದಿನಾಂಕ ೧೬.೦೨.೨೦೨೩ ರಂದು ಕರ್ನಾಟಕ ರಾಜ್ಯದ ಮುಖ್ಯಕಾರ್ಯದರ್ಶಿಗಳು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಅಧಿಕಾರಿಗಳಿಗೆ ಸುಪ್ರೀಂಕೋರ್ಟ್ ಆದೇಶವನ್ನು ಜಾರಿ ಮಾಡುವುದಿಲ್ಲ ಎಂದು ಪತ್ರ ಬರೆದು ಇದನ್ನು ಸಾಬೀತುಪಡಿಸಿದ್ದಾರೆ ಹಾಗಾಗಿ ಬಿಜೆಪಿ ಸಂವಿಧಾನ ವಿರೋಧಿಯಾಗಿದೆ ಎಂದು ಆರೋಪಿಸಿದರು.
ನಮ್ಮ ವಕೀಲರ ತಂಡ ಅನುಚ್ಛೇದ ೩೨ ರಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಅಸಂವಿಧಾನಿಕವಾಗಿ ೪(ಲಮಾಣಿ, ಭೋವಿ, ಕೊರಚ ಮತ್ತು ಕೊರಮ) ಓ.ಬಿ.ಸಿ ಜಾತಿಗಳನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ಕೈ ಬಿಡಲು ಆದೇಶ ನೀಡಬೇಕೆಂದು ರಿಟ್ ಅರ್ಜಿ ಸಲ್ಲಿಸಿದ್ದೆವು. ದಿನಾಂಕ ೧೪.೦೨.೨೦೨೦ ರಂದು ಸವೋಚ್ಛ ನ್ಯಾಯಾಲಯವು ನಮ್ಮ ಅರ್ಜಿಯನ್ನು ಒಪ್ಪಿಕೊಂಡು ನಾಲ್ಕುವಾರದೊಳಗೆ ಈ ನಾಲ್ಕು ಓಬಿಸಿ ಜಾತಿಗಳನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ಕೈ ಬಿಡಲು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ಅರ್ಜಿ ಸಲ್ಲಿಸಲು ಆದೇಶಿಸಿತು. ಅದರಂತೆ ನಾವು ಆಯೋಗಕ್ಕೆ ನಾಲ್ಕು ಓಬಿಸಿ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈ ಬಿಡಲು ಮನವಿ ಸಲ್ಲಿಸಿದೆವು. ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವು ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಈ ನಾಲ್ಕು ಓಬಿಸಿ ಜಾತಿಗಳನ್ನು ಪರಿಶಿಷ್ಟ ಜಾತಿಯ ಪಟ್ಟಿಯಿಂದ ಕೈ ಬಿಡಲು ಶಿಫಾರಸ್ಸನ್ನು ಅತೀ ಶೀಘ್ರದಲ್ಲಿ ಆಯೋಗಕ್ಕೆ ಸಲ್ಲಿಸಬೇಕೆಂದು ತಿಳಿಸಿರುತ್ತದೆ. ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿ ಈ ವಿಷಯವನ್ನು ಸಮಾಜ ಕಲ್ಯಾಣ ಇಲಾಖೆಗೆ ಕಳುಹಿಸಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕಡತವೊಂದನ್ನು ಸಿದ್ದಪಡಿಸಿದ್ದರು. ನಂತರ ಸುಪ್ರೀಂ ಕೋರ್ಟ್ ಆದೇಶ ಜಾರಿಮಾಡದವರ ವಿರುದ್ಧ ನ್ಯಾಯಾಂಗ ನಿಂದನೆ ದಾವೆ ಹೂಡುವುದಾಗಿ ಪತ್ರ ಬರೆದ ನಂತರ ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿ ಮಾಡುವುದಿಲ್ಲ ಎಂದು ರಾಜ್ಯ ಮುಖ್ಯಕಾರ್ಯದರ್ಶಿಗಳು ರಾಷ್ಟ್ರೀಯ
ಪರಿಶಿಷ್ಟ ಜಾತಿಗಳ ಆಯೋಗದ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇದರ ವಿರುದ್ಧ ನಾವು ನ್ಯಾಯಾಲಯಕ್ಕೆ ಮತ್ತೆ ಮೊರೆ ಹೋಗುತ್ತಿದ್ದೇವೆ. ಹೀಗಾಗಿ ಸಂವಿಧಾನ ವಿರೋಧಿ ನೀತಿ ಅನುಸರಿಸುವ ಬಿಜೆಪಿಗೆ ದಲಿತರು ಮತ ಹಾಕಿದರೆ ಮಕ್ಕಳಿಗೆ ಸರಕಾರಿ ಸವಲತ್ತುಗಳನ್ನು ಅವರೇ ತಪ್ಪಿಸಿದಂತಾಗುತ್ತದೆ ಎಂದು ಕಿವಿಮಾತು ಹೇಳಿದ್ದಾರೆ.
ಜಿಲ್ಲಾಧ್ಯಕ್ಷ ಕಮಲ್ ಆಂಜನೇಯ ಇದ್ದರು.