
ಬೀದರ್:ನ.8: ಅಧಿಕಾರಕ್ಕಾಗಿ ಬಿಜೆಪಿ ಯಾವ ಮಟ್ಟಕ್ಕಾದರೂ ಇಳಿಯುತ್ತದೆ ಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಏನು ಬೇಕಾದರೂ ಮಾಡಬಹುದು.ಹೀಗಾಗಿ ಪಕ್ಷದ ಕಾರ್ಯಕರ್ತರು ಎಚ್ಚರಿಕೆಯಿಂದ ಇರಬೇಕೆಂದು ಕಾರ್ಮಿಕ ಸಚಿವರು ಹಾಗೂ ಬೀದರ್ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ವೀಕ್ಷಕ ಸಂತೋಷ ಲಾಡ್ ನುಡಿದರು.
ಅವರು ಬರುವ ಲೋಕಸಭೆ ಚುನಾವಣೆಯ ಬೀದರ್ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತು ಪಕ್ಷದ ಮುಖಂಡರೊಂದಿಗೆ ಚರ್ಚಿಸಲು ನಗರದ ಎ.ಕೆ. ಕಾಂಟಿನೆಂಟಲ್‍ನಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಮಾತನಾಡಿ,ಡಾ. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಹಿಂದು ಸೇರಿದಂತೆ ಎಲ್ಲರಿಗೂ ಸಮಾನ ಅಧಿಕಾರ ನೀಡಿದ್ದಾರೆ.
ಅವರು ಎಲ್ಲ ಮಹಿಳೆಯರಿಗೆ ಸಮಾನ ಆಸ್ತಿ ನೀಡಬೇಕೆಂಬುವದನ್ನು ಆಗಲೇ ಹೇಳಿದ್ದಾರೆ, ಅದನ್ನು ಕಾಂಗ್ರೆಸ್ ಪಕ್ಷ ಮಾಡಿದೆ. ಬಿಜೆಪಿಯವರು ಹಿಂದುಗಳಿಗಾಗಿ ಏನು ಮಾಡಿಲ್ಲ ಕೇವಲ ಹಿಂದು ಎಂಬ ಶಬ್ದ ಮಾತ್ರ ಬಳಸುತ್ತಾರೆ ಎಂದು ತಿಳಿಸಿದರು.
ಪ್ರಧಾನಿ ಮೋದಿ ಅವರ ಮನ್ ಕೀ ಬಾತ್, ವಾಟ್ಸಪ್, ಫೇಸ್ಬುಕ್ ಸೇರಿದಂತೆ ಇನ್ನಿತರ ಪ್ರಚಾರ ಮಾಡಲು ಸುಮಾರು 15 ಸಾವಿರ ಜನರು ವಿವಿಧ ರೀತಿಯಲ್ಲಿ ಹಾಗೂ ವಿವಿಧ ಏಜೆನ್ಸಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಬರುವ ದಿನಗಳಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಬಹಳ ಎಚ್ಚರಿಕೆಯಿಂದ ಇದ್ದು, ನಮ್ಮ ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಿ ತಿಳಿಸುವ ಕೆಲಸ ಮಾಡಬೇಕಿದೆ ಎಂದರು.