ಬಿಜೆಪಿ ಪಕ್ಷದಿಂದ ಓಟಿಗಾಗಿ ದಲಿತರಿಗೆ ಮೋಸ

ರಾಯಚೂರು,ಮಾ.೨೮- ರಾಜ್ಯಸರ್ಕಾರದ ಶಾಸನ ಸಭೆಗೆ ಒಳ ಮೀಸಲಾತಿ ನೀಡಲು ಅಧಿಕಾರವಿಲ್ಲ ಆದರೂ ಬಿಜೆಪಿ ಸರ್ಕಾರ ಕೊನೆ ಸಂಪುಟ ಸಭೆಯಲ್ಲಿ ಏಕಾಏಕಿ ಒಳ ಮೀಸಲಾತಿ ಜಾರಿಗೆ ತರುವ ಹುನ್ನಾರ ಮಾಡಿರುವುದು ಮಹಾ ದ್ರೋಹದ ಕಾರ್ಯವಾಗಿದೆ ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಎಂ. ವಿರೂಪಾಕ್ಷಿ ತಿಳಿಸಿದರು.
ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಆರ್‌ಎಸ್‌ಎಸ್ ಹಾಗೂ ಬಿಜೆಪಿ ಸೇರಿಕೊಂಡು ಹಿಂದುತ್ವ ಮಾಡಲು ಹೋರಟಿದ್ದಾರೆ. ಹಾಗಾಗಿ ದಲಿತರಿಗೆ, ಹಾಗೂ ಅಲ್ಪಸಂಖ್ಯಾತರಾದ ಮುಸ್ಲಿಂರಿಗೆ ಒಳ ಮೀಸಲಾತಿ ಮಾಡಿ ಅನ್ಯಾಯ ಮಾಡುತ್ತಿರುವುದು ಖಂಡನೀಯ ಎಂದರು.
೨೦೧೨ರಲ್ಲಿ ಸದಾಶಿವ ಅಯೋಗದ ವರದಿ ಹಾಗೂ ನಾಗಮೋಹನ್ ದಾಸ್ ಅವರ ವರದಿ ರಾಜ್ಯಸರ್ಕಾರಕ್ಕೆ ಎಲ್ಲವನ್ನು ಪರಿಶೀಲನೆ ಮಾಡಿ ಯಾರಿಗೂ ಅನ್ಯಾಯವಾಗದಂತೆ ವರದಿಯನ್ನು ಸಲ್ಲಿಸಿದರು ಸಹ ಅವರ ವರದಿಗಳನ್ನು ಒಪ್ಪದೇ ತಮಗೆ ತಿಳಿದಂತೆ ಅವರು ಮೀಸಲಾತಿ ಪ್ರಕಟ ಮಾಡಿದ್ದರಿಂದ ದಲಿತರಿಗೆ, ಅಲ್ಪಸಂಖ್ಯಾತರಿಗೆ ಭಾರಿ ಅನ್ಯಾಯ ಮಾಡಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.
ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿ ಇಲ್ಲದಿರುವುದರಿಂದ ೨ಬಿ ಪ್ರವರ್ಗದಲ್ಲಿ ಮುಸ್ಲಿಂ ಸಮುದಾಯವನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ವರ್ಗವೆಂದು ಅನೇಕ ವೈಜ್ಞಾನಿಕ ವರದಿಗಳಿದ್ದ ಪರಿಣಾಮ ಮೀಸಲಾತಿ ನೀಡಲಾಗಿತ್ತು, ಅದನ್ನು ತಮಗೆ ತೋಚಿದಂತೆ ಅರ್ಥೈಸುವಿಕೆಯಿಂದ ದಾರಿ ತಪ್ಪಿಸುವ ಪ್ರಯತ್ನವನ್ನು ಬಿಜೆಪಿ ಸರ್ಕಾರದವರು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಚುನಾವಣೆ ಹೊಸ್ತಿಲಲ್ಲಿ ಸರ್ಕಾರ ಒಳ ಮೀಸಲಾತಿ ನೀಡಿರುವುದು ಅಸಂಬದ್ಧವಾಗಿದೆ ತಿಳಿಸಿದರು. ಈ ಸಂಧರ್ಭದಲ್ಲಿ ಜೆಡಿಎಸ್ ಮಹಿಳಾ ಜಿಲ್ಲಾಧ್ಯಕ್ಷರಾದ ಫಾತಿಮ,ಜಿಲ್ಲಾ ಗೌರವ ಕಾರ್ಯದರ್ಶಿ ರಾಜ್ಯ ವಕ್ತಾರರಾದ ಶಿವಶಂಕರ್, ನಗರ ಜೆಡಿಎಸ್ ಅಭ್ಯರ್ಥಿ ಈ ವಿನಯ್ ಕುಮಾರ್, ಹಿಂದುಳಿದ ವರ್ಗಗಳ ಅಧ್ಯಕ್ಷರಾದ ವಿಶ್ವನಾಥ್ ಪಟ್ಟಿ ಇನ್ನಿತರರು ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ್ದರು.