ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಶಂಕಾಸ್ಪದ ಸಾವು ಪ್ರಕರಣ ಸಿಬಿಐಗೆ

ನವದೆಹಲಿ,ಸೆ.೧೨-ಬಿಜೆಪಿ ನಾಯಕಿ ಹಾಗೂ ನಟಿ ಸೋನಾಲಿ ಫೋಗಟ್ ಅವರ ಸಾವಿನ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸುವಂತೆ ಕೋರಿ ರಾಜ್ಯ ಸರ್ಕಾರವು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆಯಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.ಸಿಬಿಐ ತನಿಖೆಗೆ ಸೋನಾಲಿ ಫೋಗಟ್ ಅವರ ಪುತ್ರ ಹಾಗೂ ಕುಟುಂಬದವರ ಬೇಡಿಕೆಯನ್ನು ಪರಿಗಣಿಸಿ ಪ್ರಕರಣವನ್ನು ಇಂದು ಸಿಬಿಐಗೆ ಹಸ್ತಾಂತರಿಸುತ್ತಿದ್ದೇವೆ ಎಂದು ತಿಳಿಸಿದರು.ಪ್ರಕರಣದ ಹಸ್ತಾಂತರಕ್ಕಾಗಿ ನಾನು ಗೃಹ ಸಚಿವರಿಗೆ ಪತ್ರ ಬರೆಯುತ್ತಿದ್ದೇನೆ. ನಾವು ನಮ್ಮ ಪೊಲೀಸರು ಉತ್ತಮ ತನಿಖೆ ನಡೆಸುತ್ತಾರೆ ಎಂದು ನಂಬುತ್ತೇವೆ. ಇದು ಜನರ ಬೇಡಿಕೆಯಾಗಿದೆ ಎಂದು ಸಿಎಂ ಸಾವಂತ್ ತನ್ನ ಅಧಿಕೃತ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.ಹರಿಯಾಣದ ಜನರಿಂದ ಪುನರಾವರ್ತಿತ ಬೇಡಿಕೆಗಳ ನಂತರ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ಗೃಹ ಸಚಿವ ಅಮಿತ್ ಷಾ ಅವರಿಗೆ ಪತ್ರ ಬರೆಯುವುದಾಗಿ ಅವರು ಹೇಳಿದ್ದಾರೆ . ಫೋಗಟ್ ಸಾವು ಹೇಗೆ ಸಂಭವಿಸಿತು ಎಂದು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದ ಕುಟುಂಬ ಈ ಪ್ರಕರಣದ ಬಗ್ಗೆ ಕೇಂದ್ರ ಏಜೆನ್ಸಿ ತನಿಖೆಗೆ ಒತ್ತಾಯಿಸುತ್ತಿದ್ದಾರೆ.