ಬಿಜೆಪಿ ನಾಯಕರ ಜತೆ ಸಿದ್ದು ಒಳ ಒಪ್ಪಂದ

ಪ್ರತಾಪ್ ಬಾಂಬ್
ಮೈಸೂರು,ಜೂ.೧೩-ಬಿಜೆಪಿಯ ಕೆಲವು ಅತಿರಥ ಮಹರಥರ ನಾಯಕರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಪ್ರತಾಪ ಸಿಂಹ ಹೊಸ ಬಾಂಬ್ ಸಿಡಿಸಿದ್ದಾರೆ.ಸ್ವಪಕ್ಷೀಯ ಮುಖಂಡರ ವಿರುದ್ಧವೇ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿರುವ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ೪೦% ಕಮಿಷನ್ ಆರೋಪದ ಬಗ್ಗೆ ಯಾರೂ ದೂರು ಕೊಟ್ಟಿರಲಿಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಬರೆದ ಪತ್ರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕರು ಡಂಗುರ ಬಾರಿಸಿದರು ಎಂದು ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ವಿರುದ್ಧ ಆರ್ಕಾವತಿ ಡಿನೋಟಿಫಿಕೇಶನ್,ರಿಡೋ, ಕೆಂಪಣ್ಣ ಆಯೋಗದ ವರದಿ ಬಗ್ಗೆ ಅಬ್ಬರಿಸಲಾಗುತ್ತಿತ್ತು. ಆದರೆ ಪಕ್ಷದ ಮುಖಂಡರು ಒಂದು ದಿನವೂ ಹಾವಿನ ಪೆಟ್ಟಿಗೆಯಿಂದ ಹಾವನ್ನು ಹೊರಗೆ ಬಿಡಲೇ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಆದರೆ, ಸಿದ್ದರಾಮಯ್ಯರವರು ಬಿಜೆಪಿ ವಿರುದ್ಧ ಬಿಟ್ ಕಾಯಿನ್ ಹಗರಣ, ಪಿಎಸ್‌ಐ ಕರ್ಮಕಾಂಡದ ವಿರುದ್ಧ ಅಬ್ಬರಿಸುತ್ತಿದ್ದರು. ಆದರೆ ಈ ಬಗ್ಗೆ ಪಕ್ಷದ ನಾಯಕರು ಯಾರೂ ಕೂಡ ತುಟಿ ಬಿಚ್ಚುತ್ತಿಲ್ಲ. ಸಿದ್ದರಾಮಯ್ಯ ಮತ್ತು ಬಿಜೆಪಿಯ ಕೆಲ ನಾಯಕರ ಜೊತೆ ಹೊಂದಾಣಿಕೆ ಇಲ್ಲವೆಂದರೆ ನೀವು ಮಾಡುತ್ತಿದ್ದ ಗಂಭೀರ ಆರೋಪಗಳ ಬಗ್ಗೆ ತನಿಖೆಗೆ ಆದೇಶ ಮಾಡುವಂತೆ ಸವಾಲು ಹಾಕಿದರು.ಸಿದ್ದರಾಮಯ್ಯನವರ ಬಗ್ಗೆ ಬಿಜೆಪಿಯ ಕೆಲವು ನಾಯಕರು ಹೇಳಿಕೆ ನೀಡದೇ ಇರಬಹುದು ಕೆಲವರು ಶಾಮೀಲು ಆಗಿರಬಹುದು ಆದರೆ, ಬಿಜೆಪಿ ಕಾರ್ಯಕರ್ತರು ಎಂದಿಗೂ ನಿಮ್ಮ ಜೊತೆ ಶಾಮೀಲಾಗುವುದಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಕೆಲ ಶಾಸಕರು ಸೋತಿದ್ದಾರೆ. ಆದರೆ ಪಕ್ಷದ ಕಾರ್ಯಕರ್ತರು ಸೋತಿಲ್ಲ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಸರ್ಕಾರ ೫ ಗ್ಯಾರಂಟಿಗಳನ್ನು ಎಷ್ಟೇ ಕಷ್ಟವಾದರೂ ಜಾರಿ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಈ ಗ್ಯಾರಂಟಿ ಯೋಜನೆಗಳಿಗೆ ಹಣ ಎಲ್ಲಿಂದ ತರುತ್ತೀರಿ ಎಂಬುದನ್ನು ಮೊದಲು ಸ್ಪಷ್ಟ ಪಡಿಸಬೇಕು ಜನರನ್ನು ಸುಲಿಗೆ ಮಾಡಿ ಉಚಿತ ಯೋಜನೆ ಜಾರಿ ಮಾಡುವುದು ಕಾಂಗ್ರೆಸ್ ಪಕ್ಷದ ಸಂಸ್ಕೃತಿಯೇ ಎಂದು ಪ್ರಶ್ನಿಸಿದ ಅವರು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ್ ತಮ್ಮ ಸ್ವಂತ ಆಸ್ತಿ ಮಾರಿ ಉಚಿತ ಗ್ಯಾರಂಟಿ ಕೊಡುತ್ತಾರಾ ಎಂದು ವ್ಯಂಗ್ಯವಾಡಿದರು.
ವಿದ್ಯುತ್ ದರ ಏರಿಕೆ ಮಾಡಿರುವುದು ಬಿಜೆಪಿ ಸರ್ಕಾರ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿತ್ತು, ಈ ಕಾಯ್ದೆಗಳನ್ನು ಮುಂದುವರೆಸುವುದನ್ನು ಬಿಟ್ಟು ರಾಜ್ಯದ ಜನರ ದಾರಿ ತಪ್ಪಿಸುತ್ತಿದೆ. ವಿದ್ಯುತ್ ದರ ಏರಿಕೆಯನ್ನು ಕೆಇಆರ್‌ಸಿ ಶಿಫಾರಸ್ಸು ಮಾಡಿದೆ. ಅದನ್ನು ತಡೆಯುವ ಇಲ್ಲವೇ ತಿರಸ್ಕರಿಸುವ ಹಕ್ಕು ರಾಜ್ಯ ಸರ್ಕಾರಕ್ಕೆ ಇದೇ ಎಂದರು.
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಟೋಲ್ ದರ ಏರಿಕೆಯನ್ನು ಸಮರ್ಥಿಸಿಕೊಂಡರು. ಈ ಟೋಲ್ ದರ ಏಪ್ರಿಲ್‌ನಲ್ಲೇ ಹೆಚ್ಚಳವಾಗಬೇಕಿತ್ತು. ಈಗ ಟೋಲ್ ದರವನ್ನು ಶೇ.೨೨ರಷ್ಟು ಏರಿಕೆ ಮಾಡಲಾಗಿದೆ ಎಂದು ಪ್ರತಾಪ ಸಿಂಹ ತಿಳಿಸಿದರು.