
ಬೆಂಗಳೂರು,ಏ.೧೮:ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದ ಬೆನ್ನಲ್ಲೆ ಜಗದೀಶ್ ಶೆಟ್ಟರ್ ಅವರ ಕ್ಷೇತ್ರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಇಂದು ಮತ್ತು ನಾಳೆ ಬಿಜೆಪಿ ಸಭೆಗಳನ್ನು ನಡೆಸುವರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಕಾಂಗ್ರೆಸ್ ಸೇರ್ಪಡೆಯಿಂದ ಆಗಿರುವ ಡ್ಯಾಮೇಜ್‌ನ್ನು ಸರಿಪಡಿಸಿ ಜಗದೀಶ್ ಶೆಟ್ಟರ್‌ರವರಿಗೆ ತಿರುಗೇಟು ನೀಡಲು ಬಿಜೆಪಿ ನಾಯಕರು ಇಂದು ಹುಬ್ಬಳ್ಳಿಯಲ್ಲಿ ಜೆ.ಪಿ. ನಡ್ಡಾ ಅವರೊಂದಿಗೆ ಸಭೆ ನಡೆಸಲಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಇಂದು ಸಂಜೆ ೪.೩೦ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಸಂಜೆ ೫.೩೦ಕ್ಕೆ ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಸಭಾಂಗಣದಲ್ಲಿ ಪ್ರಬುದ್ಧರ ಜತೆ ಸಂವಾದದಲ್ಲಿ ಪಾಲ್ಗೊಳ್ಳುವರು. ನಂತರ ರಾತ್ರಿ ೭ ಗಂಟೆಗೆ ಗೋಕುಲ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿಯ ಧಾರವಾಡ ವಿಭಾಗದ ಶಕ್ತಿ ಕೇಂದ್ರದ ಜಿಲ್ಲಾ ಹಾಗೂ ಮಂಡಲ ಪದಾಧಿಕಾರಿಗಳ ಸಭೆಯಲ್ಲಿ ಭಾಗಿಯಾಗುವರು.
ನಾಳೆ ಬೆಳಿಗ್ಗೆ ಹುಬ್ಬಳ್ಳಿಯ ಶ್ರೀ ಸಿದ್ಧಾರೂಡ ಮಠ, ಶ್ರೀ ಮೂರು ಸಾವಿರ ಮಠಕ್ಕೆ ತೆರಳಿ ಪೂಜೆ ಸಲ್ಲಿಸುವ ಅವರು, ಮಧ್ಯಾಹ್ನ ೧೨ ಗಂಟೆಗೆ ಶಿಗ್ಗಾವಿಗೆ ತೆರಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಾರ್ವಜನಿಕ ಸಭೆಯಲ್ಲೂ ಪಾಲ್ಗೊಳ್ಳುವರು.