ಬಿಜೆಪಿ ನಾಯಕರು ಅಭಿವೃದ್ಧಿಗೆ ಕೈಜೋಡಿಸಲಿ

ಅರಸೀಕೆರೆ, ಸೆ. ೧೭- ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುತ್ತಾ ಕ್ಷೇತ್ರದಲ್ಲಿ ಬಿಜೆಪಿ ನಾಯಕರು ಗಿಮಿಕ್ ರಾಜಕಾರಣ ಮಾಡಲು ಹೊರಟಿರುವುದಷ್ಟೇ ಅಲ್ಲದೆ ನಗರವನ್ನು ಸ್ವಚ್ಛ ಮಾಡುತ್ತೇವೆ ಎಂಬ ಪ್ರಚಾರ ಬಯಸುವುದನ್ನು ಬಿಟ್ಟು ಶಾಸಕರ ಅಭಿವೃದ್ಧಿ ಚಿಂತನೆಗೆ ಕೈಜೋಡಿಸುವಂತೆ ಜೆಡಿಎಸ್ ನಗರಸಭೆ ಸದಸ್ಯರು ಹಾಗೂ ಮುಖಂಡರು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.
ನಗರದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಗರಸಭೆ ಹಿರಿಯ ಸದಸ್ಯರಾದ ಬಿ.ಎನ್ ವಿದ್ಯಾಧರ್, ಜಿ.ಟಿ ಗಣೇಶ್, ನಫೆಡ್ ಮೂಲಕ ರಾಗಿ ಖರೀದಿಸಿ ಗೋದಾಮಿನಲ್ಲಿ ಸಂಗ್ರಹಿಸಿ ಇಟ್ಟಿದ್ದ ರಾಗಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಪಡೆದ ನಮ್ಮ ಪಕ್ಷದ ಮುಖಂಡರು ಖುದ್ದು ಹೋಗಿ ತಡೆದು ನಿಲ್ಲಿಸಿದರಲ್ಲದೆ ಶಾಸಕರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಮಾಧ್ಯಮದವರಿಗೆ ಮಾಹಿತಿ ನೀಡಿದರು ಎಂದರು.
ಸುದ್ದಿ ತಿಳಿದ ಶಾಸಕರು ಸಂಬಂಧಪಟ್ಟ ಇಲಾಖೆಯ ಮೇಲಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಅಕ್ರಮವಾಗಿ ಸಾಗಾಣಿಕೆಯಲ್ಲಿ ಪಾಲ್ಗೊಂಡ ಯಾರೇ ಆದರೂ ಅಂತಹವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಅಂದೇ ಸೂಚನೆ ನೀಡಿದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದ್ದು ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದರು.
ತಿನ್ನುವ ಅನ್ನಕ್ಕೆ ಕನ್ನ ಹಾಕಿದವರ ವಿಷಯದಲ್ಲಿ ನಮ್ಮ ಪಕ್ಷ ಹಾಗೂ ಮುಖಂಡರು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಆದರೆ ಈ ವಿಷಯದಲ್ಲಿ ಬಿಜೆಪಿ ನಾಯಕರು ರಾಜಕೀಯ ಮಾಡಲು ಹೊರಟಿರುವುದಲ್ಲದೆ ಕ್ಷೇತ್ರದಲ್ಲಿ ಅಕ್ರಮ ಕಾಮಗಾರಿಗಳು ನಡೆಯುತ್ತಿವೆ ಎಂದು ದಾಖಲೆ ರಹಿತ ಹೇಳಿಕೆ ನೀಡುವ ಮೂಲಕ ಸಣ್ಣತನದ ರಾಜಕಾರಣ ಮಾಡಲು ಹೊರಟಿರುವುದು ಸರಿಯಲ್ಲ. ಕ್ಷೇತ್ರದ ಜನತೆ ಪ್ರಜ್ಞಾವಂತರಿದ್ದು ಇವರ ಗಿಮಿಕ್ ಹೇಳಿಕೆಗೆ ಹಾಗೂ ಪ್ರಚಾರದ ಆಸೆಗೆ ಬೆರಗಾಗುವುದಿಲ್ಲ ಎಂದು ಹೇಳಿದರು.
ನಗರಸಭೆಗೆ ಚುನಾವಣೆ ನಡೆದು ಎರಡು ವರ್ಷ ಕಳೆದರೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಸರ್ಕಾರ ನಿಗದಿಪಡಿಸದೆ ಇರುವುದರಿಂದ ನಗರ ವ್ಯಾಪ್ತಿಯಲ್ಲಿ ಸ್ವಚ್ಛತೆ ಸೇರಿದಂತೆ ಕೆಲವು ಸಣ್ಣ ಪುಟ್ಟ ಲೋಪದೋಷ ಆಗಿರಬಹುದು. ಚುನಾಯಿತ ಮಾಡಿ ಅಸ್ತಿತ್ವದಲ್ಲಿ ಇಲ್ಲದೇ ಹೋದರೂ ವಾರ್ಡ್ ವಾರು ಭೇಟಿ ಮಾಡಿ ಚುನಾಯಿತ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಸಕರು ನಗರ ವ್ಯಾಪ್ತಿಯಲ್ಲಿ ಆಗಬೇಕಿರುವ ಕೆಲಸ ಕಾರ್ಯಗಳನ್ನು ಮಾಡಿಸುತ್ತಿದ್ದಾರೆ. ಈ ನಡುವೆ ನಗರ ವ್ಯಾಪ್ತಿಯಲ್ಲಿ ನಾವು ಸ್ವಚ್ಛ ಮಾಡುತ್ತೇವೆ ಎಂದು ಬಿಜೆಪಿಯ ಕೆಲನಾಯಕರು ಪ್ರಚಾರದ ಆಸೆಗಾಗಿ ಹೊರಟಿರುವುದು ಹಾಸ್ಯಾಸ್ಪದವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಸಿಕಂದರ್, ರಾಘವೇಂದ್ರ, ಮಲ್ಲಿಕಾರ್ಜುನ್, ನಗರಸಭಾ ಸದಸ್ಯರಾದ ಚಂದ್ರಶೇಖರ್, ಹರ್ಷವರ್ಧನ್, ಮೇಲಗಿರಿಗೌಡ ಮತ್ತಿತರರು ಉಪಸ್ಥಿತರಿದ್ದರು.