ಬಿಜೆಪಿ ನಾಯಕರಿಗೆ ನಾನೇ ಮನೆ ದೇವರು: ಪ್ರಿಯಾಂಕ್ ಲೇವಡಿ

ಕಲಬುರಗಿ,ಮಾ. 12: ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರಿಂದ ಹಿಡಿದು ಬಿಜೆಪಿಯ ಬಹುತೇಕ ನಾಯಕರಿಗೆ ನಾನೇ ಮನೆ ದೇವರು ಇದ್ದ ಹಾಗೆ. ನಿತ್ಯ ಬೆಳಗ್ಗೆ ನನ್ನನ್ನು ನೆನಪಿಸಿಕೊಂಡು ಏನಾದರೂ ಟೀಕಿಸದೆ ಹೋದರೆ ಅವರಿಗೆ ತಿಂದದ್ದು ಜೀರ್ಣವಾಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ-ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಕಲಬುರಗಿ ಬ್ರ್ಯಾಂಡ್ ರೊಟ್ಟಿ ಲೋಕಾರ್ಪಣೆಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಟೀಕಿಸದೆ ಹೋದರೆ ಅವರಿಗೆ ಹೊತ್ತು ಹೋಗುವುದಿಲ್ಲ ಎಂದರು.
ಸಂವಿಧಾನ ಬದಲಿಸುವ ಕುರಿತು ಸಂಸದ ಅನಂತಕುಮಾರ ಹೆಗ್ಡೆ ನೀಡಿರುವ ಹೇಳಿಕೆ ಪ್ರಸ್ತಾಪಿಸಿದ ಅವರು, ಅವರಿಗೆ ತಲೆ ಕೆಟ್ಟಿದ್ದು, ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.
ಕಲಬುರಗಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ಕುರಿತು ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರಕಾರ ಇದ್ದಾಗ ಜಿಲ್ಲೆಯಲ್ಲಿ 28 ಕೊಲೆಗಳಾಗಿದ್ದವು. ಈ ಕುರಿತು ಗಮನ ಹರಿಸದ ಸಂಸದ ಉಮೇಶ್ ಜಾಧವ್, ತಮ್ಮ ಸರಕಾರದ ಅವಧಿಯಲ್ಲಿ ಆಗಿರುವ 28 ಕೊಲೆಗಳ ಬಗ್ಗೆ ಮಾತನಾಡದ ಜಾಧವ್ ಈಗ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುತ್ತಿರುವುದು ಹಾಸ್ಯಾಸ್ಪದ ಎಂದರು.ಜಿಲ್ಲೆಯಲ್ಲಿ ನಡೆದಿರುವ 13 ಕೊಲೆಗಳಲ್ಲಿ ಬಹುತೇಕ ಪ್ರಕರಣಗಳಲ್ಲಿ ಜಾಧವ್ ಅವರ ಚಿರಪರಿಚಿತರೇ ಆರೋಪಿಗಳಿದ್ದಾರೆ. ಅಫಜಲಪುರದಲ್ಲಿ ರಾಜ್ಯ ಸರಕಾರಿ ಅಧಿಕಾರಿಯೊಬ್ಬರ ಮೇಲೆ ಟ್ರ್ಯಾಕ್ಟರ್ ಹರಿಸಲು ಯತ್ನಿಸಿದ್ದು ಯಾರು? ಎಂಬುದನ್ನು ಸಂಸದ ಜಾಧವ್ ನಿಧಾನವಾಗಿ ಯೋಚಿಸಲಿ ಎಂದು ಸವಾಲು ಹಾಕಿದರು.
ಬಿಜೆಪಿ ಸರಕಾರದ ಅವಧಿಯಲ್ಲಿ 28 ಕೊಲೆಗಳಾಗಿದ್ದವು ಎಂದು ಪುನರುಚ್ಚರಿಸಿದ ಸಚಿವ ಪ್ರಿಯಾಂಕ್, ಗುಜರಾ???ನಲ್ಲಿ ಕಳೆದ ವರ್ಷ 2209 ಅತ್ಯಾಚಾರ ಪ್ರಕರಣಗಳು ನಡೆದಿದ್ದು, 36 ಗ್ಯಾಂಗ್ ರೇಪ್‍ಗಳಾಗಿವೆ. ಕಾನೂನು ಸುವ್ಯವಸ್ಥೆ ಕುಸಿದಿರುವುದಕ್ಕೆ ಇದು ನಿದರ್ಶನ. ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೇ ಎಬಿವಿಪಿ ಕಾರ್ಯಕರ್ತರು ಕೇಂದ್ರ ಸಚಿವ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ಕಾರಿಗೆ ಅಡ್ಡ ಹಾಕಿದ್ದರು. ಅದನ್ನು ಕಾನೂನು ಸುವ್ಯವಸ್ಥೆ ಕುಸಿದಿದೆ ಎನ್ನಲಾಗುತ್ತದೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಆಳಂದದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಪೂಜೆ ಮಾಡುವ ವಿಚಾರದಲ್ಲಿ ಗಲಾಟೆಗಳಾಗಿದ್ದವು. ಆಗ ಕಾನೂನು ಸುವ್ಯವಸ್ಥೆ ಕುಸಿದಿತ್ತು. ಈ ಸಲ ಅಂತಹ ಯಾವುದೇ ಘಟನೆ ನಡೆಯದಂತೆ ನೋಡಿಕೊಂಡಿದ್ದೇವೆ ಎಂದು ಮಾರುತ್ತರ ನೀಡಿದರು.


ಅಪರಂಜಿ ಎಲ್ಲಿ?
ಚಿತ್ತಾಪುರದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಹೆಸರು ಪ್ರಸ್ತಾಪಿಸದೆ, ಸಂಸದರ ‘ಚಿತ್ತಾಪುರದ ಅಪರಂಜಿ ಈಗ ಎಲ್ಲಿದ್ದಾರೆ?’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.ಅಪಘಾತ ಪ್ರಕರಣಕ್ಕೆ ಹಲ್ಲೆಯ ಸ್ವರೂಪ ನೀಡಲು ಯತ್ನಿಸಲಾಗಿತ್ತು. ಪೆÇಲೀಸ್ ತನಿಖೆಯ ನಂತರ ಅದು ಸುಳ್ಳು ಎಂಬುದು ಸಾಬೀತಾಯಿತು. ಆ ಘಟನೆ ಬಳಿಕ ಜಾಧವ್ ಅವರ ಅಪರಂಜಿ ನಾಪತ್ತೆಯಾಗಿದ್ದಾನೆ ಎಂದು ಕುಟುಕಿದರು.
ನಮ್ಮ ಸರ್ಕಾರದಲ್ಲಿ ರೌಡಿಗಳನ್ನು ನಿಯಂತ್ರಣ ಮಾಡಲಾಗುತ್ತಿದೆ ಎಂಬುದು ಬಿಜೆಪಿಗರಿಗೆ ಸಂಕಷ್ಟ ತಂದಿಟ್ಟಿದೆ. ಸಂಸದರಾಗಿ ಜಾಧವ್ ಏನು ಅಭಿವೃದ್ದಿ ಮಾಡಿದ್ದಾರೆ ಹೇಳಲಿ ಎಂದು ಅವರು ಸವಾಲು ಹಾಕಿದರು.
ಸಿಯುಕೆಗೆ ಸುಣ್ಣ ಬಣ್ಣ ಬಳಿಸಿಲ್ಲ. ಮಂಜೂರಾಗಿದ್ದ ರೇಲ್ವೆ ವಲಯ ವಾಪಸ್ ತರಲು ಆಗಿಲ್ಲ. ನಿಮ್ಝ್ , ಟೆಕ್ಸ್‍ಟೈಲ್ ಪಾರ್ಕ್ ಮೊದಲಾದ ಯೋಜನೆಗಳು ವಾಪಸ್ ಹೋಗಿವೆ. ಈ ಸಲದ ರೇಲ್ವೆ ಬಜೆಟ್‍ನಲ್ಲಿ ಕಲಬುರಗಿಗೆ ಕೇವಲ ಒಂದು ಸಾವಿರ ರೂಪಾಯಿ ಮೀಸಲಿಟ್ಟಿದ್ದಾರೆ. ಇವತ್ತು ವಂದೇ ಭಾರತ ಡಕೋಟಾ ರೇಲ್ವೆಗೆ ಉದ್ಘಾಟನೆ ಮಾಡಿದ್ದಾರೆ. ಜಾಧವ್ ವಾಸ್ತವದ ಮೇಲೆ ಮಾತನಾಡಲಿ ಎಂದು ಕುಟುಕಿದರು.


ಸೂಲಿಬೆಲೆ ಗ್ರಾಪಂ ಎಲೆಕ್ಷನ್ ಗೆದ್ದು ತೋರಿಸಲಿ
ನನಗೆ ಮಾಡಲು ಸಾಕಷ್ಟು ಕೆಲಸ ಇರುವುದರಿಂದ ಬಾಡಿಗೆ ಭಾಷಣಕಾರರ ಕುರಿತು ಮಾತನಾಡಲು ಸಮಯವಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹಿಂದೂಪರ ಹೋರಾಟಗಾರ ಚಕ್ರವರ್ತಿ ಸೂಲಿಬೆಲೆ ಕುರಿತು ಟೀಕಿಸಿದರು.
ಸೂಲಿಬೆಲೆಗೆ ಜಿಲ್ಲೆಯ ಪ್ರವೇಶ ನಿರಾಕರಣೆ ಬಗ್ಗೆ ಕೇಳಲಾದ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದ ಸಚಿವರು, ನನಗೆ ಮಾಡಲು ಬಹಳಷ್ಟು ಕೆಲಸಗಳಿವೆ. ಬಾಡಿಗೆ ಭಾಷಣಕಾರನ ಬಗ್ಗೆ ಮಾತನಾಡಲು ಸಮಯವಿಲ್ಲ. ಆತ ಇಲ್ಲಿಯವರೆಗೆ ಒಂದೇ ಒಂದು ಗ್ರಾಮ ಪಂಚಾಯತಿ ಚುನಾವಣೆ ಸಹ ಗೆದ್ದಿಲ್ಲ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.