ಬಿಜೆಪಿ ನಾಯಕರಿಂದ ಖರ್ಗೆ, ಸಿದ್ಧರಾಮಯ್ಯ ವಿರುದ್ಧ ಹಾಸ್ಯಾಸ್ಪದ ಹೇಳಿಕೆ

ಕಲಬುರಗಿ.ಅ.31: ಬಿಜೆಪಿಯವರು ತಮ್ಮ ಪಕ್ಷದಲ್ಲಿ ಹತ್ತಿಕೊಂಡಿರುವ ಬೆಂಕಿ ಜ್ವಾಲೆಯನ್ನು ಶಮನಗೊಳಿಸುವ ಕುರಿತು ಚಿಂತಿಸದೇ ಕಾಂಗ್ರೆಸ್ ಪಕ್ಷದ ಕಡೆ ಬೊಟ್ಟು ಮಾಡಿ ತೋರಿಸುತ್ತಾ ಕಾಂಗ್ರೆಸ್ ಪಕ್ಷದ ಬಗ್ಗೆ ಚಿಂತೆ ಮಾಡುತ್ತಿರುವದು ನೋಡಿದರೆ ಹಾಸ್ಯಾಸ್ಪದವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಜಗದೇವ್ ಗುತ್ತೇದಾರ್ ಕಾಳಗಿ ಅವರು ಟೀಕಿಸಿದ್ದಾರೆ.
ಆರ್‍ಎಸ್‍ಎಸ್ ಸಂಘಟನೆ ಅತೀ ಸುಳ್ಳು ಹೇಳುವ ಮೂಲಕ ದೇಶದಲ್ಲಿ ಭಾವನಾತ್ಮಕ ವಿಷಯಗಳ ಮೂಲಕ ಜನರ ಮೇಲೆ ಪರಿಣಾಮವನ್ನು ಬೀರುತ್ತಾ ಒಡೆದಾಳುವ ಅತೀ ಸುಳ್ಳಿನ ಸಂಘಟನೆಯಾಗಿದೆ. ಇಂತಹ ಸಂಘಟನೆಯ ಮೂಲಕ ಬಂದ ಬಿಜೆಪಿ ನಾಯಕರು ತಮ್ಮ ಮಹಾ ಸುಳ್ಳಿನ ಚಾಳಿಯ ಮೂಲಕ ಕಾಂಗ್ರೆಸ್ ರಾಷ್ಟ್ರೀಯ ಮತ್ತು ರಾಜ್ಯ ವರಿಷ್ಠ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಸಿದ್ದರಾಮಯ್ಯನವರ ಕುರಿತು ಬಾಯಿಗೆ ಬಂದಂತೆ ಸುಳ್ಳಿನ ಹೇಳಿಕೆಗಳನ್ನು ನೀಡುತ್ತಾರೆ ಎಂದು ಅವರು ಹೇಳಿಕೆಯಲ್ಲಿ ಆಕ್ಷೇಪಿಸಿದ್ದಾರೆ.
ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ನೀಡಿರುವುದು ಚುನಾವಣೆ ನಡೆಯುವ ಮೂಲಕ ಪ್ರಚಂಡ ಬಹುಮತದಿಂದ ಚುನಾಯಿತರಾಗಿದ್ದಾರೆ. ಅವರು ಹಿರಿಯ ಅನುಭವಿ ಮೆಧಾವಿ ನಾಯಕರು. 9 ಬಾರಿ ಶಾಸಕರಾಗಿ, 2 ಬಾರಿ ಲೋಕಸಭೆ ಸದಸ್ಯರಾಗಿ, ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವನ್ನು ಕಿವಿ ಹಿಂಡುವ ಮೂಲಕ ಸದನದಲ್ಲಿ ಗುಡುಗಿದವರು. ಈಗ ರಾಜ್ಯಸಭಾ ಸದಸ್ಯರಾಗಿ ಕೆಲಸ ಮಾಡುತ್ತಲಿದ್ದಾರೆ. ಅವರ ರಾಜಕೀಯ ಅನುಭವ ಹಾಗೂ ಪಕ್ಷನಿಷ್ಠೆಯಿಂದ ಇವರಿಗೆ ಎಐಸಿಸಿ ಅಧ್ಯಕ್ಷ ಹುದ್ದೆ ದೊರೆತಿದೆ ಎಂದು ಅವರು ಬಿಜೆಪಿಯವರಿಗೆ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯನವರು ಹಿಂದುಳಿದ ವರ್ಗದವರ ಹಿತಕ್ಕಾಗಿ ಜೀವನಪೂರ್ತಿ ಕೆಲಸ ಮಾಡುತ್ತಲಿದ್ದಾರೆ. ಅವರು ಮುಖ್ಯಮಂತ್ರಿಯಾಗಿರುವ ಅವಧಿಯಲ್ಲಿ ಹಿಂದುಳಿದ ವರ್ಗದವರಿಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಹಿಂದುಳಿದ ಪ್ರತಿಭಾವಂತ ನಾಯಕನೆಂದು ಪ್ರಸಿದ್ದಿ ಪಡೆದಿದ್ದಾರೆ. ಅವರು ಹೋದಲೆಲ್ಲ ಜನಕಾರ್ಷಣೆ ಕಂಡು ಬಿಜೆಪಿಯವರು ಏನು ತೋಚದೇ ಬಾಯಿಗೆ ಬಂದಂತೆ ಹುಚ್ಚರಂತೆ ಮಾತನಾಡುತ್ತಿದ್ದಾರೆ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡುವ ಬಿಜೆಪಿಯವರು ದೇಶಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ. ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರ ತತ್ವ ಸಿದ್ದಾಂತದ ಮೇಲೆ ನಡೆದು ಬಂದಂತ ಪಕ್ಷ ಕಾಂಗ್ರೆಸ್ ಪಕ್ಷವಾಗಿದೆ. ಜಾತ್ಯಾತಿಯತೆ, ಐಕ್ಯತೆ, ಶಾಂತಿ ಸಂದೇಶದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಪಕ್ಷ ಕಾಂಗ್ರೆಸ್ ಪಕ್ಷವಾಗಿದೆ. ಒಡೆದಾಳುವ ಕೋಮುವಾದಿ ಬಿಜೆಪಿ ಪಕ್ಷದಿಂದ ನಾವು ಕಲಿಯಬೇಕಾಗಿಲ್ಲ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ವೇದಿಕೆ ಮೇಲೆ ಸುಳ್ಳಿನ ಭಾಷಣ ಮಾಡುವದನ್ನು ಬಿಟ್ಟು ರೈತರಿಗೆ ಬೆಳೆ ಪರಿಹಾರ ನೀಡುವುದು, ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನೀಡುವುದು, ದೇಶದ ಬೆನ್ನೆಲುಬಾದ ರೈತರ ಬಗ್ಗೆ ವಿಶೇಷ ಕಾಳಜಿವಹಿಸುವುದು ಮಾಡಲಿ ಎಂದು ಅವರು ಸವಾಲು ಹಾಕಿದ್ದಾರೆ.
ಸುಳ್ಳು ಹೇಳುವದು ಬಿಟ್ಟುಬಿಡಲಿ. ಕಾಂಗ್ರೆಸ್ ಪಕ್ಷದ ಬಗ್ಗೆ ಚಿಂತೆ ಬಿಟ್ಟು ಮೊದಲು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಗ್ಗೆ ಚಿಂತೆ ಮಾಡಲಿ, ಇನ್ನೂ ಮುಂದಾದರೂ ಎಚ್ಚೆತ್ತುಕೊಳ್ಳಲಿ ಎಂದು ಅವರು ಒತ್ತಾಯಿಸಿದ್ದಾರೆ.