ಬಿಜೆಪಿ ನಾಯಕರಿಂದ ಒಳ ಮೀಸಲಾತಿ ಚರ್ಚೆ;  ಮಾದಿಗರ ಸ್ವಾಭಿಮಾನಕ್ಕೆ ಧಕ್ಕೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಜು.೪: ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಹೊಸ್ತಿಲಲ್ಲಿ ಬಿಜೆಪಿ ಸರ್ಕಾರ ಒಳ ಮೀಸಲಾತಿ ವರ್ಗಿಕರಣ ಪ್ರಕಟಿಸಿದ್ದು ಚುನಾವಣೆ ಗಿಮಿಕ್ ಅಗಿದ್ದು, ಅದಕ್ಕೆ ತಕ್ಕ ಫಲನನ್ನು ಅನುಭವಿಸುತ್ತಿದ್ದು, ಈ ಕೂಡಲೇ ಬಿಜೆಪಿ ಪಕ್ಷದ ವರಿಷ್ಠರು ಅವರಿಗೆ ಬುದ್ದಿ ಹೇಳಬೇಕು. ಇಲ್ಲವಾದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಹೆಗ್ಗೆರೆ ರಂಗಪ್ಪ ಎಚ್ಚರಿಕೆ ನೀಡಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದಲಿತ ಸಮುದಾಯಗಳನ್ನು ತುಳಿಯುವ ಪಕ್ಷಗಳನ್ನು ಮುಂಬರುವ ತಾಲ್ಲೂಕು ಪಂಚಾಯತ, ಜಿಲ್ಲಾ ಪಂಚಾಯತ, ಲೋಕಸಭಾ ಚುನಾವಣೆಯಲ್ಲಿ ತಿರಸ್ಕರಿಸಲಾಗುವುದು. ಹರಿಹರದ ಬಿ.ಪಿ.ಹರೀಶ್, ಹೊನ್ನಾಳಿಯ ಎಂ.ಪಿ.ರೇಣುಕಾಚಾರ್ಯ ಹಾಗೂ ಹೊಳಲ್ಕೆರೆಯ ಚಂದ್ರಪ್ಪ ಇತರರು ಮಾದಿಗ ಸಮುದಾಯವನ್ನು ವಿರೋಧ ಮಾಡಿ, ಇತರೆ ಸಮುದಾಯಗಳನ್ನು ಓಲೈಕೆ ಮಾಡುವ ಕ್ರಮ ಸರಿಯಲ್ಲ ಎಂದು ಕಿಡಿಕಾರಿದರು.ಒಳ ಮೀಸಲಾತಿ ವರ್ಗಿಕರಣದಿಂದ ದಮನಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೊಡಿಸುವ ಸದುದ್ದೇಶದಿಂದ ಡಿಎಸ್ ಎಸ್ ಹೋರಾಡುತ್ತಾ ಬಂದ ಫಲವಾಗಿ ನ್ಯಾಯಮೂರ್ತಿ ಸದಾಶಿವ ಆಯೋಗ ರಚನೆಯಾಗಿ ಅಧ್ಯಾಯನಾತ್ಮಕ ವರದಿ ಸಲ್ಲಿಸಲಾಯಿತು. ಆದರೂ  ಅದನ್ನು ಮೂಲೆಗುಂಪು ಮಾಡಿ ಸದನದ ಉಪ ಸಮಿತಿಯ ವರದಿಯನ್ನು ಆಧರಿಸಿ ಒಳ ಮೀಸಲಾತಿ ನೀಡುತ್ತೇವೆಂದು ಬೊಬ್ಬೆ ಹೊಡೆದ ಬಿಜೆಪಿಗರು ತಮ್ಮದೇ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಲು ಏಕೆ ಚಕಾರ ಎತ್ತುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಬಾಯಿ ಚಪಲ ತೀರಿಸಿಕೊಳ್ಳಲು ಪರಿಶಿಷ್ಟ ಜಾತಿಯೊಳಗಿನ‌ ಸ್ಪರ್ಶ ಸಮುದಾಯಗಳನ್ನು ಓಲೈಸಲು ಮಾದಿಗ ಸಮುದಾಯವನ್ನು ಗುರಿಯಾಗಿಸಿ ಟೀಕೆ ಮಾಡುತ್ತಿರುವುದು ಸರಿಯಲ್ಲ. ಬಿ.ಜೆ.ಪಿ.ಯಲ್ಲೂ ಮಾದಿಗ ಸಮುದಾಯದ ಪ್ರಭಾವಿ ನಾಯಕರಿದ್ದು ಅವರಿಗೆ ಪಕ್ಷದಲ್ಲಿ ಇರುಸು ಮುರುಸಾಗುತ್ತದೆ. ಆದ್ದರಿಂದ ಇಂತಹ ಬಾಯಿ ಬಡುಕರಿಗೆ ಬಿ.ಜೆ.ಪಿ.ಯ ಹಿರಿಯ ನಾಯಕರು ಬುದ್ದಿ ಹೇಳುವ ಅವಶ್ಯಕತೆ ಇದೆ ಎಂದು ಹೇಳಿದರು.ಸುದ್ದಿಗೋಷ್ಟಿಯಲ್ಲಿ ಡಿಎಸ್ ಎಸ್ ನ ಗುಮ್ಮನೂರು ರಾಮಚಂದ್ರಪ್ಪ, ಲೋಕಿಕೆರೆ ಕರಿಯಪ್ಪ, ಅಳಗವಾಡಿ ನಿಂಗರಾಜ, ರವಿಬಾಬು, ಪರಮೇಶ್ ಪುರದಾಳು, ಶಶಿಕುಮಾರ್  ಇದ್ದರು.