ಬಿಜೆಪಿ ದುರಾಡಳಿತ ಮುಂದುವರೆದರೆ ಭಾರತಕ್ಕೆ ಶ್ರೀಲಂಕಾ ಪರಿಸ್ಥಿತಿ: ಖಂಡ್ರೆ

ಕಲಬುರಗಿ,ಜು.22: ಕೇಂದ್ರ ಹಾಗೂ ರಾಜ್ಯಗಳಲ್ಲಿರುವ ಬಿಜೆಪಿ ಸರ್ಕಾರಗಳು ದುರಾಡಳಿತ ನಡೆಸಿದರೆ ಶ್ರೀಲಂಕಾ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ ಅವರು ಹೇಳಿದರು.
ಶುಕ್ರವಾರ ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದನ್ನು ತಡೆಯಲು ಬಿಜೆಪಿ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಎಐಸಿಸಿಐ ಅಧ್ಯಕ್ಷೆ ಶ್ರೀಮತಿ ಸೋನಿಯಾಗಾಂಧಿ ಹಾಗೂ ರಾಹುಲ್‍ಗಾಂಧಿ ಅವರ ವಿರುದ್ಧ ಇಡಿ ತನಿಖೆಯನ್ನು ಕೈಗೊಂಡಿದೆ ಎಂದು ದೂರಿದರು.
ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ಹಣ ವರ್ಗಾವಣೆಯಾಗಿಲ್ಲ ಎಂದ ಮೇಲೆ ಅಕ್ರಮ ಎಲ್ಲಿ ಬಂತು? ಎಂದು ಪ್ರಶ್ನಿಸಿದ ಅವರು, ಇದೆಲ್ಲ ಕಾಂಗ್ರೆಸ್ ನಾಯಕರನ್ನು ಕುಗ್ಗಿಸಲು ಕೈಗೊಂಡ ತನಿಖೆಯಾಗಿದೆ ಎಂದು ಆಕ್ರೋಶ ಹೊರಹಾಕಿದರು.
ವಿರೋಧ ಪಕ್ಷವಿದ್ದಾಗ ಏನೆಲ್ಲ ಭರವಸೆಗಳನ್ನು ಕೊಟ್ಟು ಅಚ್ಚೇ ದಿನ್ ಎಂದು ಬಿಜೆಪಿಯವರು ಘೋಷಿಸಿದರು. 40ರೂ.ಗಳು, 50ರೂ.ಗಳಿಗೆ ಪೆಟ್ರೋಲ್, ಡೀಸೆಲ್ ದರ ವಿಧಿಸುವುದಾಗಿ ಹೇಳಿದರು. ಆದಾಗ್ಯೂ, ಈಗ ಅಧಿಕಾರಕ್ಕೆ ಬಂದ ಮೇಲೆ ಯಾವ ರೀತಿ ಬೆಲೆ ಏರಿಕೆಗಳು ಆಗಿವೆ ಎಂಬುದು ಇಡೀ ದೇಶದ ಜನತೆಗೆ ಗೊತ್ತಿದೆ. ಇಂತಹ ಜನವಿರೋಧಿ ನೀತಿಗಳನ್ನು ಮರೆಮಾಚಲು ಶ್ರೀಮತಿ ಸೋನಿಯಾಗಾಂಧಿ ಹಾಗೂ
ರಾಹುಲ್‍ಗಾಂಧಿ ಅವರ ವಿರುದ್ಧ ಇಡಿ ಪ್ರಕರಣವನ್ನು ಕೇಂದ್ರ ಸರ್ಕಾರವು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಬಿಜೆಪಿಯು ದ್ವೇಷದ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ಸಿನವರ ಆತ್ಮಸ್ಥೈರ್ಯ ಕುಗ್ಗಿಸುವ ಒಂದೇ ಉದ್ದೇಶದಿಂದ ಈ ರೀತಿ ಮಾಡುತ್ತಿದೆ. ನ್ಯಾಯಾಂಗದ ಮೇಲೆಯೂ ದಬ್ಬಾಳಿಕೆ ಮಾಡುವ ಕೆಲಸವನ್ನೂ ಮಾಡುತ್ತಿದೆ. ಮನಿ ಲಾಂಡ್ರಿಂಗ್ ಆಗಿದೆ ಅಂತಿದ್ದಾರೆ. ನಯಾ ಪೈಸೆ ವರ್ಗಾವಣೆ ಆಗಿದೆಯಾ? ಎಂದು ಪ್ರಶ್ನಿಸಿದರು.
ಕೋಟ್ಯಾಂತರ ರೂ.ಗಳನ್ನು ಕೊಟ್ಟು ಮಧ್ಯಪ್ರದೇಶ್, ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ್ ಮಾಡಿದರಲ್ಲ. ಆ ಕುರಿತು ಯಾಕೆ ಇಡಿ ತನಿಖೆ ಮಾಡುತ್ತಿಲ್ಲ? ಒಬ್ಬ ಬಿಜೆಪಿ ಮೆಲೆ ಇಡಿ ತನಿಖೆ ಮಾಡಿದ್ದೀರಾ? ಎಂದು ಆಕ್ರೋಶ ಹೊರಹಾಕಿದ ಅವರು, ಎಷ್ಟೇ ಬಾರಿ ಶ್ರೀಮತಿ ಸೋನಿಯಾಗಾಂಧಿ ಮತ್ತು ರಾಹುಲ್‍ಗಾಂಧಿ ಅವರನ್ನು ವಿಚಾರಣೆ ಮಾಡಿದರೂ ಸಹ ನಾವು ಯಾರಿಗೂ ಹೆದರುವುದಿಲ್ಲ ಎಂದರು.
ದೇಶದಲ್ಲಿ ಸಾವಿರಾರು ಇಡಿ ಪ್ರಕರಣಗಳಿವೆ. ಅವುಗಳಲ್ಲಿ ಇಲ್ಲಿಯವರೆಗೂ ಒಂದಾದರೂ ಶಿಕ್ಷೆ ಆಗಿದೆಯೇ? ಇದೆಲ್ಲ ಕೇವಲ ಕಾಂಗ್ರೆಸ್ ಹೆದರಿಸುವ ತಂತ್ರವಾಗಿದೆ. ಕಾಲಚಕ್ರ ಬದಲಾಗುತ್ತದೆ. ಈಗ ಅಧಿಕಾರದಲ್ಲಿರುವ ಬಿಜೆಪಿ ಅಧಿಕಾರ ಕಳೆದುಕೊಳ್ಳುತ್ತದೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಇಂತಹ ಅಧಿಕಾರಕ್ಕೆ ಬರುವುದು ಮತ್ತು ಕಳೆದುಕೊಳ್ಳುವುದು ಕಾಂಗ್ರೆಸ್ಸಿಗೆ ಹಲವಾರು ಬಾರಿ ಆಗಿದೆ ಎಂದು ಅವರು ಎಚ್ಚರಿಕೆ ನಿಡಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ವಿಧಾನಸಭೆಯಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯಸಿಂಗ್, ಶಾಸಕರಾದ ಎಂ.ವೈ. ಪಾಟೀಲ್, ಕನೀಜ್ ಫಾತಿಮಾ, ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್, ಪಕ್ಷದ ಜಿಲ್ಲಾಧ್ಯಕ್ಷ ಜಗದೇವ್ ಗುತ್ತೇದಾರ್ ಕಾಳಗಿ, ಮಾಜಿ ಮೇಯರ್ ಶರಣಕುಮಾರ್ ಮೋದಿ ಮುಂತಾದವರು ಉಪಸ್ಥಿತರಿದ್ದರು.