ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ: ಕೆ.ಸಿ.ಎನ್‍

ಕೆ.ಆರ್.ಪೇಟೆ.ಜ.20: ನಾರಾಯಣಗೌಡ ಕಾಂಗ್ರೆಸ್ಸಿಗೆ ಬಂದರೆ ನಾವು ಪಕ್ಷದಲ್ಲಿ ಮೂಲೆಗುಂಪಾಗುತ್ತೇವೆಂಬ ಭಯ ಕೆಲವು ಸ್ಥಳೀಯ ಮುಖಂಡರನ್ನು ಕಾಡುತ್ತಿದೆ. ಆದ್ದರಿಂದಲೇ ಅವರು ಪದೇ ಪದೇ ನಾನು ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂಬ ಪ್ರಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ. ನಾನು ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ ಎಂದು ಕ್ಷೇತ್ರದ ಶಾಸಕ ಸಚಿವ ಕೆ.ಸಿ.ನಾರಾಯಣಗೌಡ ಸ್ಪಷ್ಟಪಡಿಸಿದರು.
ಪಟ್ಟಣದ ತಮ್ಮ ನಿವಾಸದಲ್ಲಿಂದು ಬಿಜೆಪಿಯ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮದ ಕರಪತ್ರಗಳನ್ನು ಬಿಡುಗಡೆ ಮಾಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ನನ್ನ ನಡುವೆ ವೈಯಕ್ತಿಕ ಭಾಂದವ್ಯವಿದೆ. ಆದರೆ ನಮ್ಮ ವೈಯಕ್ತಿಕ ಭಾಂದವ್ಯಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಡಿ.ಕೆ.ಶಿವಕುಮಾರ್ ನನ್ನ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದ್ದಾರೆ. ಅದೇ ರೀತಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಕೂಡ ನನ್ನ ಕೆಲಸ ಕಾರ್ಯಗಳಿಗೆ ಸ್ಪಂಧಿಸಿದ್ದಾರೆ.
ನಾನು ಸಚಿವನಾಗಿದ್ದು ಸಿದ್ದರಾಮಯ್ಯ ಅವರು ಕೇಳಿದ ಕೆಲಸ ಕಾರ್ಯಗಳನ್ನು ಮಾಡಿಕೊಟ್ಟಿದ್ದೇನೆ. ಮಾಜಿ ಸಚಿವ ಹೆಚ್.ವಿಶ್ವನಾಥ್ ಮತ್ತು ನಾನು ಒಂದೇ ಪಕ್ಷದಲ್ಲಿರುವವರು. ನಮ್ಮ ಪಕ್ಷದ ನಾಯಕರಾದ ಬಿ.ಎಸ್.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನನಗೆ ಮಂತ್ರಿ ಸ್ಥಾನ ನೀಡಿದ್ದು ನನ್ನ ಕ್ಷೇತ್ರದ ಸರ್ವ ಅಭಿವೃದ್ದಿಗೂ ಸಹಕರಿಸುತ್ತಿದ್ದಾರೆ. ನಾನು ಬಿಜೆಪಿ ತ್ಯಜಿಸುವ ಪ್ರಶ್ನೆಯೇ ಇಲ್ಲ. ನಾನು ಕಾಂಗ್ರೆಸ್ ಪಕ್ಷ ಸೇರಿದರೆ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಬರುತ್ತದೆ ಎನ್ನುವ ಆಸೆಯಿಂದ ಕೆಲವರು ಉದ್ದೇಶ ಪೂರ್ವಕವಾಗಿ ನನ್ನ ಹೆಸರು ಕಾಂಗ್ರೆಸ್ ಅಂಗಳದಲ್ಲಿ ಚಲಾವಣೆಯಲ್ಲಿರುವಂತೆ ಮಾಡುತ್ತಿದ್ದಾರೆ.
ನನ್ನ ಕೆಲಸ ಕಾರ್ಯಗಳನ್ನು ಬೆಂಬಲಿಸಿ ಕೆಲವು ಕಾಂಗ್ರೆಸ್ಸಿಗರು ಬಿಜೆಪಿಗೆ ಬರಲು ಉತ್ಸುಕರಾಗಿದ್ದಾರೆ. ನಾರಾಯಣಗೌಡರೇ ಕಾಂಗ್ರೆಸ್ಸಿಗೆ ಬರುತ್ತಾರೆಂಬ ಕಾದು ನೋಡುವ ತಂತ್ರದಲ್ಲಿ ಅವರಿದ್ದಾರೆ. ಕಾಂಗ್ರೆಸ್ಸಿಗರು ಪಕ್ಷ ತ್ಯಜಿಸದಂತೆ ನೋಡಿಕೊಳ್ಳಲು ನನ್ನ ವಿರುದ್ದ ಕಾಂಗ್ರೆಸ್ ಸೇರುತ್ತಾರೆಂಬ ವದಂತಿಯನ್ನು ಕೆಲವರು ಹಬ್ಬಿಸುತ್ತಿದ್ದಾರೆಂದು ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.
ಕೆ.ಆರ್.ಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮೂಲೆಗುಂಪಾಗಿ ಮೂರುವರೆ ವರ್ಷಗಳು ಕಳೆದಿವೆ. ಅವರಿಗೆ ನನ್ನ ಅಭಿವೃದ್ದಿಯ ಸಾಧನೆಗಳು ಮರೆತಂತಿವೆ. ನನ್ನ ಜೊತೆ ಆತ್ಮೀಯರಾಗಿದ್ದ ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ ಅವರೇ ನನ್ನ ವಿರುದ್ದ ಅಪಪ್ರಚಾರ ನಡೆಸುತ್ತಿರುವುದು ನನಗೆ ನೋವುಂಟು ಮಾಡುತ್ತಿದೆ. ನನ್ನ ಅಭಿವೃದ್ದಿ ಕೆಲಸಗಳನ್ನು ಜನರ ಮುಂದಿಡಲು ಈಗಾಗಲೇ ಇಲಾಖಾವಾರು ಪ್ರಗತಿಯ ವಿವರಗಳನ್ನು ಒಳಗೊಂಡ ಪುಸ್ತಕಗಳನ್ನು ಮುದ್ರಿಸುತ್ತಿದ್ದು ಪತ್ರಕರ್ತರ ಸಮ್ಮುಖದಲ್ಲಿ ಅಭಿವೃದ್ದಿಯ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ದನಿದ್ದೇನೆಂದರು..
ಜನವರಿ 21 ರಿಂದ 29 ರವರೆಗೆ ರಾಜ್ಯದ ಪ್ರತಿ ವಿಧಾನ ಸಬಾ ಕ್ಷೇತ್ರದಲ್ಲೂ ಬೂತ್ ಮಟ್ಟದಲ್ಲಿ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಅಭಿಯಾನ ನಡೆಯಲಿದೆ. ನರೇಮದ್ರ ಮೋದಿ ಸರ್ಕಾರದ ಜನಪರ ಕಾರ್ಯಕ್ರಮಗಳು ಮತ್ತು ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿಯವರ ಸಾಧನೆಗಳನ್ನು ಒಳಗೊಂಡ ಕರಪತ್ರಗಳನ್ನು ತಾಲೂಕಿನಾದ್ಯಂತ ಪ್ರತಿ ಮನೆ ಮನೆಗೂ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಮುಂಬರುವ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಳ್ಳಲಾಗಿದೆ. ನಮ್ಮ ಡಬ್ಬಲ್ ಎಂಜಿನ್ ಸರ್ಕಾರದ ಯೋಜನೆಗಳ ಫಲಾನುಭವಿಗಳ ಪಟ್ಟಿ ತಯಾರಿಸಿ ಅವರನ್ನು ಸಂಪಕಿಸುವ ಕೆಲಸ ಮಾಡಲಾಗುವುದು. ಮನೆ ಮನೆಗೆ ಕರಪತ್ರ ಹಂಚಿಕೆ, ಬಿಜೆಪಿಯ ಸ್ಟಿಕರ್ ಹಚ್ಚಲು ಪ್ರೇರೇಪಿಸುವುದು, ಗೋಡೆಗಳ ಮೇಲೆ ಬಿಜೆಪಿ ಬಿಂಬಿಸುವ ಪೇಂಟಿಂಗ್ ಮತ್ತು ಸದಸ್ಯತ್ವ ನೊಂದಣಿ ಮಾಡುವುದು ನಮ್ಮ ವಿಜಯ ಸಂಕಲ್ಪ ಅಭಿಯಾನದ ಪ್ರಮುಖ ಗುರಿಯಾಗಿದೆ ಎಂದು ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.
ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್, ಮುಖಂಡರಾದ ಕೆ.ಜಿ.ತಮ್ಮಣ್ಣ, ಬಿ.ಜವರಾಯಿಗೌಡ, ಕೆ.ಕಾಳೇಗೌಡ,ಕೆ.ವಿನೋದ್, ಕುಮಾರ್,ಪುಟ್ಟಣ್ಣ ಸೇರಿದಂತೆ ಮತ್ತಿತರರಿದ್ದರು.