ಬಿಜೆಪಿ ತೊಲಗಿಸಲು ಸಜ್ಜಾಗಲು ಸಚಿವ ಖಂಡ್ರೆ ಕರೆ

ಬೀದರ್ :ಫೆ.21: ರಾಜ್ಯದಲ್ಲಿ ನಮ್ಮ ನಾಯಕರ ಕೈ ಬಲಪಡಿಸಲು ಭೃಷ್ಟ, ಕೋಮುವಾದಿ ಬಿಜೆಪಿಯನ್ನು ಬುಡಸಮೇತ ಕಿತ್ತಿ ಹಾಕಲು `ಏಳಿ ಎದ್ದೇಳಿ ಬಿಜೆಪಿ ತೊಲಗಿಸಲಿಕ್ಕೆ ತಾವೇಲ್ಲರೂ ಸಜ್ಜಾಗಬೇಕು. ತೊಲಗಿಸುವವರೆಗೆ ನಿದ್ರೆ ಮಾಡಬಾರದೆಂಬ ಸಂಕಲ್ಪ ಮಾಡಬೇಕು ಎಂದು ಬೀದರ್ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಇಲ್ಲಿ ಕರೆ ನೀಡಿದರು.

ಮಂಗಳವಾರ ಜಿಲ್ಲಾ ಕಾಂಗ್ರೆಸ್ ಸಮಿತಿ, ಪ್ರಗತಿಪರ, ದಲಿತಪರ ಹಾಗೂ ಕನ್ನಡಪರ ಸಂಘಟನೆಗಳು ವತಿಯಿಂದ ಇಲ್ಲಿ ಹಮ್ಮಿಕೊಂಡ 371(ಜೆ) ಜಾರಿ ರೂವಾರಿ ಡಾ. ಮಲ್ಲಿಕಾರ್ಜುನ ಖರ್ಗೆಯವರ ಅಭಿನಂದನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಡೀ ದೇಶ ಕವಲು ದಾರಿಯಲ್ಲಿದೆ. ಬಿಜೆಪಿ ಮಾಡುತ್ತಿರುವ ದ್ವೇಷ ರಾಜಕಾರಣ ಹೋಗಲಾಡಿಸಲು ರಾಹುಲ್ ಗಾಂಧಿ ದೇಶಾದ್ಯಂತ ನ್ಯಾಯಯಾತ್ರೆ, ಭಾರತ ಜೋಡೋ ಯಾತ್ರೆ ಮಾಡುತ್ತಿದ್ದರೆ, ಮಲ್ಲಿಕಾರ್ಜುನ ಖರ್ಗೆ ಅವರು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಡಾ. ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನ, ಪ್ರಜಾಪ್ರಭುತ್ವವನ್ನು ಮೊಟಕುಗೊಳಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಇ.ಡಿ, ಸಿಬಿಐ, ಚುನಾವಣಾ ಆಯೋಗ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಕೊಟ್ಟ ಒಂದೇ ಒಂದು ಭರವಸೆ ಈಡೇರಿಸಿಲ್ಲ. ದೇಶದ ಆಸ್ತಿ ಮಾರಾಟ ಮಾಡುತ್ತಿದ್ದಾರೆ. ಚುನಾವಣಾ ಸಮಯದಲ್ಲಿ ಭಾವನಾತ್ಮಕ ವಿಷಯಗಳನ್ನು ಕೆರಳಿಸುವ ಕೆಲಸ ಮಾಡುತ್ತಾರೆ. ಬಿಜೆಪಿಯ ಕಾರ್ಯಕಾಲದಲ್ಲಿ ಪ್ರಜಾಪ್ರಭುತ್ವ, ಸಂವಿಂಧಾನ ಅಪಾಯದಲ್ಲಿದೆ ಎಂದರು.

`ಬುಡಸಮೇತ ಕಿತ್ತು ಹಾಕಿ’
ರಾಜ್ಯಕ್ಕೆ ಬರಬೇಕಾದ ತೆರಿಗೆ ಬರುತ್ತಿಲ್ಲ. ದ್ರೋಹ, ಅನ್ಯಾಯ ಮಾಡುತ್ತಿದ್ದಾರೆ. ಬರಬೇಕಾದ ಲಕ್ಷಾಂತರ ಕೋಟಿ ನಮ್ಮ ತೆರಿಗೆ ತೆಗೆದುಕೊಂಡು ನಮ್ಮ ನ್ಯಾಯಯುತ ಅನುದಾನವೇ ನಮಗೆ ಕೊಟ್ಟಿಲ್ಲ. ಇಂತಹ ಅನ್ಯಾಯ ಮಾಡಿದ ಬಿಜೆಪಿ ಸರ್ಕಾರವನ್ನು ಕೇಂದ್ರದಲ್ಲಿ ಬುಡಸಮೆತ ಕಿತ್ತು ಹಾಕಬೇಕು ನೆರೆದಿದ್ದ ಜನರಿಗೆ ಎಂದು ಕರೆ ನೀಡಿದರು. ಮುಂಬರುವ ಲೋಕಸಭಾ ಚುನಾವಣೆ ನಮ್ಮೆಲ್ಲರಿಗೆ ಸವಾಲಾಗಿದೆ. ಬೀದರ್ ಜಿಲ್ಲೆಯ ಕೇಂದ್ರ ಮಂತ್ರಿ 10 ವರ್ಷಗಳಲ್ಲಿ ಒಂದಾದರು ಕೊಟ್ಟ ಭರವಸೆ ಈಡೇರಿಸಿಲ್ಲ. ಎಫ್‍ಎಮ್ ಕೇಂದ್ರ ಇನ್ನೂ ಪ್ರಾರಂಭವಾಗಿಯೇ ಇಲ್ಲ. ನವೀಕರಿಸುವ ಇಂಧನದ ಸಚಿವರಾಗಿರುವ ಖೂಬಾ ಅವರಿಗೆ ಜಿಲ್ಲೆಯಲ್ಲಿ ಬರಬೇಕಾದ ಸೋಲಾರ್ ಪಾರ್ಕ್ ತರಲಿಕ್ಕೆ ಆಗಿಲ್ಲ ಎಂದ ಅವರು, ನಾವು ಕೊಟ್ಟಿರುವುದನ್ನು ಬಿಜೆಪಿ ಸರ್ಕಾರ ವಾಪಸ್ ಪಡೆಯುತ್ತದೆ. ಬಿಎಸ್‍ಎಸ್‍ಕೆಯನ್ನು ಪುನಶ್ಚೇತನ ಮಾಡುತ್ತೇವೆ ಎಂದು ಗೃಹಮಂತ್ರಿ ಅಮಿತ್ ಶಾ ಅವರು ಹೇಳಿದ್ದರು. ಆ ಕಾರ್ಖಾನೆಯನ್ನೂ ಬಂದ್ ಮಾಡಿ ದ್ರೋಹ ಮಾಡಿದ್ದಾನೆ ಎಂದು ಕೇಂದ್ರ ಸಚಿವರ ವಿರುದ್ಧ ಖಾರವಾಗಿ ನುಡಿದ ಅವರು, ಜನರು ಸಚಿವರಿಂದ ಉತ್ತರ ಪಡೆಯಬೇಕು ಎಂದು ಹೇಳಿ ಬರುವ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಲೇಬೇಕಾಗಿದೆ ಎಂದು ಕರೆ ನೀಡಿದರು.

ಭಾಲ್ಕಿಯ ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಬೆಲ್ದಾಳ್ ಶರಣರು, ಶ್ರೀ ವರಜ್ಯೋತಿ ಭಂತೆ, ನೆಲ್ಸನ್ ಸುಮಿತ್ರ, ಗ್ಯಾನಿ ದರ್ಬಾರಸಿಂಗ್, ಮಂತ್ರಿ ರಹೀಂ ಖಾನ್, ಶಾಸಕ ಬಿ.ಆರ್.ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಅರವಿಂದ ಕುಮಾರ ಅರಳಿ, ಡಾ. ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ಮಾಜಿ ಶಾಸಕರಾದ ರಾಜಶೇಖರ ಪಾಟೀಲ್, ಅಶೋಕ ಖೇಣಿ, ಮುಖಂಡರಾದ ನರಸಿಂಗರಾವ್ ಸೂರ್ಯವಂಶಿ, ಬಸರವರಾಜ ಬುಳ್ಳಾ, ಮಾವಲಿ ಶಂಕರ್, ಕೆ. ಪುಂಡಲಿಕರಾವ್, ಡಾ. ಭೀಮಸೇನರಾವ್ ಶಿಂದೆ, ಯುವ ಮುಖಂಡ ಸಾಗರ್ ಖಂಡ್ರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ ಮತ್ತಿತರಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಸ್ವಾಗತಿಸಿದರು.


ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ ಜನರು ಕಾಂಗ್ರೆಸ್‍ಗೆ ಮತ್ತು ಖರ್ಗೆಯವರನ್ನು ಯಾವತ್ತೂ ಮರೆಯಬಾರದು. 10 ವರ್ಷಗಳ ಅವಧಿಯಲ್ಲಿ ಸಾವಿರಾರು ಕೋಟಿ ರೂ. ಹೆಚ್ಚುವರಿ ಅನುದಾನ ಬಂದಿದೆ. ಶಿಕ್ಷಣದಲ್ಲಿ ಯುವಕರಿಗೆ 10 ವರ್ಷದಲ್ಲಿ 7 ಸಾವಿರ ತಜ್ಞ ವೈದ್ಯರಾಗುತ್ತಿದ್ದಾರೆ. ಇದಕ್ಕೆ ಕಾರಣ ಕಾಂಗ್ರೆಸ್, ಮಲ್ಲಿಕಾರ್ಜುನ ಖರ್ಗೆ ಹಾಗೂ ಧರಂಸಿಂಗ್ ಅವರು ಕಾರಣರಾಗಿದ್ದಾರೆ.
:- ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಮಂತ್ರಿ ಬೀದರ್.