ಬಿಜೆಪಿ ತಂತ್ರ ಫಲಿಸದು: ಎಸ್.ಎಂ. ಪಾಟೀಲ ಗಣಿಹಾರ

ವಿಜಯಪುರ,ಏ.19:ಕೇವಲ ಧಾರ್ಮಿಕ ಭಾವನೆಗಳನ್ನು ಕೆದಕಿ ಬಿಜೆಪಿಯವರು ಚುನಾವಣೆ ಅಖಾಢಕ್ಕೆ ಇಳಿಯುವುದನ್ನು ಮೈಗೂಢಿಸಿಕೊಂಡಿದ್ದಾರೆ. ಆದರೆ ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯ ಈ ತಂತ್ರ ಫಲಿಸುವುದಿಲ್ಲ. ಜನರು ಬದಲಾವಣೆ ಬಯಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಹೇಳಿದರು.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ಬಿಜೆಪಿ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಬಿಜೆಪಿ ಮುಂದೆ ಅಭಿವೃದ್ಧಿ ಅಜೆಂಡಾ ಇಲ್ಲ. ಹಾಗಾಗಿ ಕೇವಲ ಧರ್ಮ, ದೇವರ ಹೆಸರಿನಲ್ಲಿ ಜನರನ್ನು ಮರಳು ಮಾಡಲು ಹೊರಟಿದೆ. ಜನರು ಪ್ರಜ್ಞಾವಂತರಿದ್ದಾರೆ. ಈ ಸಲ ಬಿಜೆಪಿ ತಂತ್ರಕ್ಕೆ ಮಾರು ಹೋಗಲ್ಲ ಎಂದರು.
ರಾಹುಲ್ ಗಾಂಧಿ ಪಿಎಂ ಆದರೆ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಕಾಂಗ್ರೆಸ್ ರಾಹುಲ್ ಅವರನ್ನು ಪಿಎಂ ಅಭ್ಯರ್ಥಿ ಎಂದು ಹೇಳಿಯೇ ಇಲ್ಲ. ಆದರೂ ರಾಹುಲ್ ಭೀತಿ ಬಿಜೆಪಿಗರನ್ನು ಕಾಡುತ್ತಿದೆ ಎಂದು ಗಣಿಹಾರ ವ್ಯಂಗ್ಯವಾಡಿದರು.
ಬಿಜೆಪಿಗರಿಗೆ ನರೇಂದ್ರ ಮೋದಿ ಅವರನ್ನು ಹೊರತುಪಡಿಸಿದರೆ ಬೇರೆ ನಾಯಕರೇ ಇಲ್ಲ. ಅದಕ್ಕಾಗಿ ಮೋದಿ, ಮೋದಿ ಎಂದು ಮೋದಿ ಹೆಸರಿನಲ್ಲಿ ಮತ ಕೇಳುತ್ತಿದೆ ಎಂದರು.
ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ. ಬಿಜೆಪಿ ದುರಾಡಳಿತಕ್ಕೆ ಬೇಸತ್ತು ಇಂಡಿಯಾ ಮೈತ್ರಿಕೂಟಕ್ಕೆ ಬೆಂಬಲಿಸಲು ಮುಂದಾಗಿದ್ದಾರೆ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಹಾದೇವಿ ಗೋಕಾಕ, ಸುಭಾಷ ಕಾಲೇಬಾಗ, ಸತೀಶ ಅಡವಿ, ವಸಂತ ಹೊನಮೋಡೆ, ಬೀರಪ್ಪ ಜುಮನಾಳ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.