ಅಫಜಲಪುರ:ಎ.7: ಈ ಬಾರಿ ನಡೆಯುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದೇನೆ. ಒಂದು ವೇಳೆ ಟಿಕೆಟ್ ಸಿಗದೆ ಇದ್ದ ವೇಳೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಚುನಾವಣೆಯಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ಜಿ.ಪಂ ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ್ ತಿಳಿಸಿದರು.
ತಾಲೂಕಿನ ಸ್ಟೇಷನ್ ಗಾಣಗಾಪುರದಲ್ಲಿ ನಡೆದ ಜನಾಭಿಪ್ರಾಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ ಹಿರಿಯ ಸಹೋದರ ಮಾಲೀಕಯ್ಯಾ ಗುತ್ತೇದಾರ್ ಅವರು 2018ರ ಚುನಾವಣೆ ಸಂದರ್ಭದಲ್ಲಿ 2023ರ ಉತ್ತರಾಧಿಕಾರಿ ನೀನೇ ಎಂದು ನನಗೆ ಭರವಸೆ ನೀಡಿ ಈಗ ಕೊಟ್ಟ ಮಾತಿಗೆ ತಪ್ಪಿದ್ದಾರೆ.
ಹೀಗಾಗಿ ಅವರು ಕೊಟ್ಟ ಮಾತಿನಂತೆ ಈ ಬಾರಿ ನನಗೆ ಆಶೀರ್ವದಿಸಿ ಎಂದು ಅವರಿಗೆ ನಾನು ಮನವಿ ಮಾಡಿ ಕೇಳಿಕೊಂಡಾಗ ತಮ್ಮ ಮನಸ್ಸಿಗೆ ಬಂದ ಹಾಗೆ ಮಾತನಾಡಿ ಈ ಬಾರಿಯೂ ನಾನೇ ಚುನಾವಣೆಗೆ ನಿಲ್ಲುತ್ತೇನೆ ಮತ್ತು ಕ್ಷೇತ್ರದಲ್ಲಿ ನನ್ನ ಪರ ಕೂಗಿದೆ ಎಂದು ಪಟ್ಟು ಹಿಡಿದಿದ್ದಾರೆ.
ಹೀಗಾಗಿ ನಾನು ಕೂಡ ಮತಕ್ಷೇತ್ರದ ಜನರ ಮುಂದೆ ಹೋದಾಗ ಎಲ್ಲರೂ ನನಗೂ ಕೂಡ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ನಾನು ಚುನಾವಣೆಗೆ ನಿಲ್ಲುತ್ತಿರುವುದು ಅಧಿಕಾರಕ್ಕಾಗಿ ಅಲ್ಲ, ಅಭಿವೃದ್ಧಿಗಾಗಿ.
ಈಗಾಗಲೇ ಬಿಜೆಪಿ ಪಕ್ಷದ ವರಿಷ್ಠರಿಗೆ ಭೇಟಿಯಾಗಿ ಟಿಕೆಟ್ ಕೇಳಿದ್ದು ಟಿಕೆಟ್ ಸಿಗುವ ನಿರೀಕ್ಷೆ ಇದೆ. ಒಂದು ವೇಳೆ ಟಿಕೆಟ್ ಸಿಗದೆ ಇದ್ದರೂ ಸಹ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ. ಹೀಗಾಗಿ ಕ್ಷೇತ್ರದ ಮತದಾರರು ತಮ್ಮ ಮನೆಯ ಮಗನೆಂದು ಭಾವಿಸಿ ಆಶೀರ್ವದಿಸುತ್ತಾರೆ ಎಂಬ ಭರವಸೆಯಲ್ಲಿದ್ದೇನೆ.
ಇಂದು ನನ್ನ ಬೆಂಬಲಕ್ಕೆ ನಿಂತಿರುವ ಕೆಲವು ಮುಖಂಡರ ಬಗ್ಗೆ ನಮ್ಮ ಸಹೋದರ ಮಾಲೀಕಯ್ಯಾ ಗುತ್ತೇದಾರ್ ಹಾಗೂ ನಮ್ಮ ಚಿರಂಜೀವಿ ಹಗುರವಾಗಿ ಮಾತನಾಡುತ್ತಿದ್ದಾರೆ. ಇದರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಬೇಡಿ. ನಾನು ನಿಮ್ಮ ಜೊತೆ ಇರುತ್ತೇನೆ. ಈ ಹಿಂದೆಯೂ ನಿಮ್ಮ ಸುಖ ದುಃಖದಲ್ಲಿ ಭಾಗಿಯಾಗಿದ್ದೇನೆ. ಅದರಂತೆ ಮುಂದೆಯೂ ಸಹ ನುಡಿದಂತೆ ನಡೆದು ನಿಮ್ಮ ಭರವಸೆ ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮಾಲೀಕಯ್ಯ ಗುತ್ತೇದಾರ್ ಅವರು ಸಂಬಂಧಗಳ ಜತೆ ಚೆಲ್ಲಾಟವಾಡುತ್ತಿದ್ದಾರೆ. ಇದು ಸರಿಯಲ್ಲ. ಇಂದು ಕ್ಷೇತ್ರದ ಎಲ್ಲಾ ಸಮಾಜದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳ ಬೆಂಬಲವನ್ನು ನಾನು ಎಂದಿಗೂ ಮರೆಯುವುದಿಲ್ಲ. ನನಗೆ ಟಿಕೆಟ್ ಸಿಗಬೇಕೆಂದು ಕೆಲವರು ಉರುಳು ಸೇವೆ, ಶ್ರೀಶೈಲ ವರೆಗೆ ಪಾದಯಾತ್ರೆ ಮಾಡುತ್ತಿದ್ದಾರೆ. ಇದು ಕ್ಷೇತ್ರದ ಜನ ನನ್ನ ಮೇಲೆ ಇಟ್ಟಿರುವ ನಂಬಿಕೆ ಎಂದು ಹೇಳಿದರು.
ಸಾಷ್ಟಾಂಗ ನಮಸ್ಕಾರ ಹಾಕಿದ ನಿತೀನ್
ಕ್ಷೇತ್ರದ ಮತದಾರರು ನಿರೀಕ್ಷೆಗೂ ಮೀರಿ ಬೆಂಬಲ ನೀಡಿದ್ದಕ್ಕೆ ನಿಮ್ಮೆಲ್ಲರ ಪಾದಗಳಿಗೆ ನಮಸ್ಕಾರ ಸಲ್ಲಿಸುತ್ತೇನೆ ಎಂದು ನಿತೀನ್ ಗುತ್ತೇದಾರ್ ಭಾವನಾತ್ಮಕವಾಗಿ ಸಾಷ್ಟಾಂಗ ನಮಸ್ಕಾರ ಹಾಕಿದಾಗ ಸಭೆಯಲ್ಲಿ ನೆರೆದಿದ್ದ ಸಾವಿರಾರು ಜನರು ಮುಂದಿನ ಶಾಸಕ ನಿತೀನ್ ಗುತ್ತೇದಾರ್ ಎಂದು ಘೋಷಣೆ ಕೂಗಿ ನೀವು ಚುನಾವಣೆಗೆ ನಿಲ್ಲಿ ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಕೈ ಮೇಲೆತ್ತಿ ಬೆಂಬಲ ಸೂಚಿಸಿದರು.
ಸಭೆಯಲ್ಲಿ ಈರಯ್ಯ ಸ್ವಾಮಿ, ಮಹಾದೇವ ಗುತ್ತೇದಾರ್, ಕಲ್ಯಾಣರಾವ್ ನಾಗೋಜಿ, ಬಸವಣ್ಣಪ್ಪ ಪಾಟೀಲ್ ಅಂಕಲಗಿ, ಶಿವಪುತ್ರಪ್ಪ ಕೆರೂರ, ಗುರಣ್ಣಾ ಪಡಶೇಟ್ಟಿ, ವಿಶ್ವನಾಥ ರೇವೂರ, ರಾಜಕುಮಾರ ಜಿಡ್ಡಗಿ, ರಮೇಶ ನೀಲಗಾರ, ರಮೇಶ ಬಾಕೆ, ಲತೀಫ್ ಜಾಗಿರದಾರ, ಸಾಯಬಣ್ಣಾ ಪೂಜಾರಿ, ಭಗವಂತ ವಗ್ಗೆ, ಮಹಾಂತೇಶ್ ಬಡದಾಳ, ವೈಜುನಾಥ ನಿಂಗದಳ್ಳಿ, ಶಿವರಾಜ್ ಸಜ್ಜನ್, ಡಾ.ಕೇಶವ ಕಾಬಾ, ಮಡಿವಾಳ ದೇವತ್ಕಲ್, ಪಾಶಾ ಮಣ್ಣೂರ, ಧಾನು ಪತಾಟೆ, ಮಹಾಂತೇಶ್ ಉಜನಿ, ಸಚಿನ್ ರಾಠೋಡ, ಸುನೀಲ್ ಶೆಟ್ಟಿ, ಅನೀಲ ಕುರೂಟಿ, ಸಿದ್ದು ರಾಣೆ, ವೀರೇಶ ಖೇಳಗಿ, ಸಿದ್ದು ಮ್ಯಾಕೇರಿ, ಮಲ್ಲಿಕಾರ್ಜುನ ಗೋಳಸಾರ ಉಪಸ್ಥಿತರಿದ್ದರು.