ಬಿಜೆಪಿ ಟಿಕೆಟ್ ವಂಚಿತರ ಮುನಿಸು ಶಮನಕ್ಕೆ ಯತ್ನ

ಬೆಂಗಳೂರು,ಮಾ.೨೬- ಬೆಳಗಾವಿ ಲೋಕಸಭೆ ಹಾಗೂ ಬಸವ ಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುತ್ತಿದ್ದಂತೆಯೇ ಈ ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್ ಬಯಸಿದ್ದ ನಾಯಕರುಗಳು ಅಸಮಾಧಾನಗೊಂಡಿದ್ದು, ಚುನಾವಣಾ ಸಂದರ್ಭದಲ್ಲಿ ಇವರುಗಳ ನಡೆ ಏನೆಂಬುದು ಕುತೂಹಲ ಕೆರಳಿಸಿದೆ.
ಟಿಕೆಟ್ ಕೈತಪ್ಪಿರುವ ಬಿಜೆಪಿ ನಾಯಕರುಗಳ ಅಸಮಾಧಾನವನ್ನು ಶಮನಗೊಳಿಸಿ ಪಕ್ಷದ ಪರವಾಗಿ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಬಿಜೆಪಿ ನಾಯಕರುಗಳು ಟಿಕೆಟ್ ಕೈತಪ್ಪಿರುವ ನಾಯಕರುಗಳ ಮನವೊಲಿಕೆ ಕಾರ್ಯದಲ್ಲಿ ನಿರತರಾಗಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಟಿಕೆಟ್‌ಗಾಗಿ ಸಚಿವ ಉಮೇಶ್‌ಕತ್ತಿ ಅವರ ಸಹೋದರ ರಮೇಶ್‌ಕತ್ತಿ,ಮಾಜಿ ಸಂಸದ ಪ್ರಭಾಕರ್ ಕೋರೆ, ಬಿಜೆಪಿ ಮುಖಂಡರುಗಳಾದ ಡಾ. ರವಿ ಪಾಟೀಲ್, ಗಿರೀಶ್ ಸೋನಾವಾಲ್ಕರ್ ಪ್ರಯತ್ನ ನಡೆಸಿದ್ದರು. ಆದರೆ, ಪಕ್ಷದ ವರಿಷ್ಠರು ದಿ. ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಅವರಿಗೆ ಟಿಕೆಟ್ ನೀಡಿದೆ. ಇದರಿಂದ ಟಿಕೆಟ್ ಕೈತಪ್ಪಿರುವ ರಮೇಶ್‌ಕತ್ತಿ, ಮಾಜಿ ಸಂಸದ ಪ್ರಭಾಕರ್ ಕೋರೆ, ಬಿಜೆಪಿ ಮುಖಂಡರುಗಳಾದ ಡಾ. ರವಿ ಪಾಟೀಲ್, ಗಿರೀಶ್ ಸೋನಾವಾಲ್ಕರ್ ಇವರುಗಳು ಮುನಿಸಿಕೊಂಡಿದ್ದು, ಇವರನ್ನು ಸಮಾಧಾನಪಡಿಸುವ ಕಾರ್ಯವನ್ನು ಬಿಜೆಪಿ ನಾಯಕರು ನಡೆಸಿದ್ದಾರೆ. ಹಾಗಾಗಿ. ಟಿಕೆಟ್ ಕೈ ತಪ್ಪಿರುವ ಈ ನಾಯಕರುಗಳನ್ನು ಸಮಾಧಾನಗೊಳಿಸಿ ಚುನಾವಣಾ ಕಾರ್ಯದಲ್ಲಿ ಸಕ್ರಿಯ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ, ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರು ಈ ನಾಯಕರುಗಳ ಜತೆ ಮಾತನಾಡಿದ್ದಾರೆ ಎನ್ನಲಾಗಿದೆ.
ಖೂಬಾಗೆ ಜೆಡಿಎಸ್ ಗಾಳ
ಬಸವಕಲ್ಯಾಣ ಟಿಕೆಟ್ ಕೈತಪ್ಪಿರುವ ಮಾಜಿ ಶಾಸಕ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಲ್ಲಿಕಾರ್ಜುನ ಖೂಬಾ ಅವರು ಟಿಕೆಟ್ ಸಿಗದೆ ಇದ್ದುದ್ದಕ್ಕೆ ಅಸಮಾಧಾನಗೊಂಡಿದ್ದು,ಇವರಿಗೆ ಜೆಡಿಎಸ್ ಗಾಳ ಹಾಕಿದೆ.
ಮಲ್ಲಿಕಾರ್ಜುನ ಖೂಬಾ ಅವರು ೨೦೦೬ ಮತ್ತು ೨೦೧೩ರಲ್ಲಿ ಜೆಡಿಎಸ್ ಪಕ್ಷದಿಂದಲೇ ಬಸವಕಲ್ಯಾಣದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ೨೦೧೮ ರಲ್ಲಿ ಅವರು ಬಿಜೆಪಿ ಸೇರಿ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಉಪಚುನಾವಣೆಯ ಟಿಕೆಟ್ ಕೈತಪ್ಪಿರುವ ಮಲ್ಲಿಕಾರ್ಜುನ ಖೂಬಾ ಅವರಿಗೆ ಜೆಡಿಎಸ್ ಗಾಳ ಹಾಕಿದ್ದು, ಪಕ್ಷ ಸೇರಿದರೆ ಬಸವ ಕಲ್ಯಾಣ ಟಿಕೆಟ್ ನೀಡುವ ಭರವಸೆ ನೀಡಲಾಗಿದೆ. ಈ ಸಂಬಂಧ ಖೂಬಾಅವರ ಜತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಬಂಡೆಪ್ಪ ಕಾಶ್ಯಂಪೂರ್ ಮಾತುಕತೆ ನಡೆಸಿದ್ದಾರೆ. ಆದರೆ ಖೂಬಾ ಅವರು ಇನ್ನು ತಮ್ಮ ತೀರ್ಮಾನ ಪ್ರಕಟಿಸಿಲ್ಲ.
ಬಸವಕಲ್ಯಾಣ ಕ್ಷೇತ್ರದಿಂದ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ ವಿಜಯೇಂದ್ರ ಅವರಿಗೆ ಆಪ್ತರಾದ ಶರಣ ಸಲಗಾರ ಅವರನ್ನು ಚುನಾವಣಾ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸಿದೆ.
ಈ ಕ್ಷೇತ್ರದಿಂದ ಟಿಕೆಟ್ ಬಯಸಿದ್ದ ಮಾಜಿ ಸಚಿವ ದಿ. ಗುರುಪಾದಪ್ಪ ಮಾದಪ್ಪ ನಾಗಮಾರಪಲ್ಲಿ ಅವರ ಪುತ್ರ ಸೂರ್ಯಕಾಂತ ನಾಗಮಾರಪಲ್ಲಿ ಅವರು ಟಿಕೆಟ್ ಕೈತಪ್ಪಿರುವುದಕ್ಕೆ ಅಸಮಾಧಾನಗೊಂಡಿದ್ದು, ಇವರನ್ನು ಸಮಾಧಾನಗೊಳಿಸುವ ಕೆಲಸವನ್ನು ಬಿಜೆಪಿ ನಾಯಕರು ನಡೆಸಿದ್ದಾರೆ.
ಉಪಚುನಾವಣೆಗಳಲ್ಲಿ ಭಿನ್ನಮತ ಬಂಢಾಯಕ್ಕೆ ಅವಕಾಶವಾಗದಂತೆ ನೋಡಿಕೊಳ್ಳಿ ಎಂದು ಸ್ಥಳೀಯ ನಾಯಕರುಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ಸೂಚನೆ ನೀಡಿದ್ದು, ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸುವಂತೆ ಕಿವಿಮಾತು ಹೇಳಿದ್ದಾರೆ.
ಮಸ್ಕಿ ವಿಧಾನಸಭಾ ಕ್ಷೇತ್ರದಿಂದ ಮಾಜಿ ಶಾಸಕ ಪ್ರತಾಪ್‌ಗೌಡ ಪಾಟೀಲ್ ಅವರಿಗೆ ಟಿಕೆಟ್ ನೀಡುವುದು ನಿಶ್ಚಿತವಾಗಿದ್ದರಿಂದ ಈ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಅಂತಹ ಹೇಳಿಕೊಳ್ಳುವ ಅಸಮಾಧಾನಗಳು ಇಲ್ಲ.ಈ ಕ್ಷೇತ್ರದಲ್ಲಿ ಈಗಾಗಲೇ ಬಿ.ವೈ ವಿಜಯೇಂದ್ರ ಮೊಕ್ಕಾಂ ಹೂಡಿ ಬಿಜೆಪಿ ಪರ ಬಿರುಸಿನ ಪ್ರಚಾರ ನಡೆಸಿದ್ದಾರೆ.