ಬಿಜೆಪಿ ಟಿಕೆಟ್ ಗಾಗಿ ನಿತೀನ್ ಬೆಂಬಲಿಗರಿಂದ ಉರುಳು ಸೇವೆ

ಅಫಜಲಪುರ:ಎ.3: ಮುಂಬರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಾಗಿದ್ದೆ ತಡ ಚುನಾವಣೆ ಕಾವು ಮತ್ತಷ್ಟು ರಂಗೇರಿದೆ.
ಒಂದು ಕಡೆ ಟಿಕೇಟ್ ಆಕಾಂಕ್ಷಿಗಳು ಟೆಂಪಲ್ ರನ್ ಮಾಡುತ್ತಿದ್ದರೆ ಕಾರ್ಯಕರ್ತರು ಹಾಗೂ ಬೆಂಬಲಿಗರು ತಮ್ಮ ನಾಯಕನಿಗೆ ಟಿಕೆಟ್ ಒಲಿದು ಗೆದ್ದು ಬರಬೇಕೆಂದು ದೇವರ ಮೊರೆ ಹೋಗಿದ್ದಾರೆ.
ಈ ಎಲ್ಲ ಬೆಳವಣಿಗೆಗಳಿಗೆ ಪೂರಕ ಎಂಬಂತೆ ಕಲ್ಯಾಣ ನಾಡಿನ ಅಫಜಲಪುರ ವಿಧಾನಸಭಾ ಮತಕ್ಷೇತ್ರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಟಿಕೆಟ್ ಗಾಗಿ ಆಕಾಂಕ್ಷಿಗಳ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ.
ರಾಜ್ಯದ ಗಮನ ಸೆಳೆದು ಕೇಂದ್ರ ಮತ್ತು ರಾಜ್ಯದ ಹೈ ಕಮಾಂಡ್ ಗೆ ಬಿಸಿ ತುಪ್ಪವಾಗಿ ಪರಿಣಮಿಸಿರುವ ಅಫಜಲಪುರ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ್ ಹಾಗೂ ಜಿ.ಪಂ ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ್ ಸಹೋದರರ ನಡುವೆ ತೀವ್ರ ಪೈಪೆÇೀಟಿ ಏರ್ಪಟ್ಟಿದೆ.
ಇನ್ನೇನೂ ಏಪ್ರಿಲ್ ಮೊದಲ ವಾರದಲ್ಲಿ ಟಿಕೆಟ್ ಘೋಷಣೆಯಾಗುವ ಸಂಭವ ಇರುವುದರಿಂದ ನಿತೀನ್ ಗುತ್ತೇದಾರ್ ಅಭಿಮಾನಿಗಳು ಚೌಡಾಪುರ ಕ್ರಾಸ್ ನಿಂದ ಸುಕ್ಷೇತ್ರ ದೇವಲ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದವರೆಗೆ ಬಿಜೆಪಿ ಟಿಕೆಟ್ ಸಿಗಲೆಂದು ಅಭಿಮಾನಿಗಳು ಉರುಳು ಸೇವೆ ಮಾಡಿದ್ದಾರೆ.
ಇದೇ ಕ್ಷೇತ್ರದಿಂದ ಸತತ 6 ಬಾರಿ ಶಾಸಕರಾಗಿ, ಸಚಿವರಾಗಿ ಸೇವೆ ಸಲ್ಲಿಸಿರುವ ಮಾಲೀಕಯ್ಯಾ ಗುತ್ತೇದಾರ್ ಅವರು ಇದು ನನ್ನ ಕೊನೆಯ ಚುನಾವಣೆಯಾಗಿದೆ. ಹೀಗಾಗಿ ಇದೊಂದು ಬಾರಿ ನನಗೆ ಅವಕಾಶ ಮಾಡಿಕೊಡಬೇಕೆಂದು ಪಕ್ಷದ ವರಿಷ್ಠರಿಗೆ ಹಾಗೂ ಕ್ಷೇತ್ರದ ಮತದಾರರಿಗೆ ಮನವಿ ಮಾಡಿಕೊಂಡಿದ್ದಾರೆ. ಆದರೆ ನಿತೀನ್ ಗುತ್ತೇದಾರ್ ನಡೆಯನ್ನು ಗಮನಿಸಿದರೆ ಒಂದು ವೇಳೆ ಟಿಕೆಟ್ ಸಿಗದೇ ಇದ್ದರೂ ಕೂಡ ಪಕ್ಷೇತರ ಅಭ್ಯರ್ಥಿಯಾಗಿ ಕ್ಷೇತ್ರದ ಜನರ ಸೇವೆಗೈಯಲು ಚುನಾವಣೆ ಅಖಾಡಕ್ಕೆ ಇಳಿಯುತ್ತೇನೆ ಎಂದು ಗಟ್ಟಿ ನಿಲುವು ತಾಳಿದ್ದಾರೆ ಮತ್ತು ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತಿಲ್ಲ ಎಂದು ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿರುವ ಹಿನ್ನೆಲೆ ಗುತ್ತೇದಾರ ಸಹೋದರರ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ.