
ಬೆಂಗಳೂರು,ಏ.೧೧:ಗಜ ಪ್ರಸವದಂತಾಗಿರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿಗೆ ಇಂದು ಮೋಕ್ಷ ಸಿಗುವುದು ನಿಶ್ಚಿತವಾಗಿದ್ದು, ಅರುಣಾಚಲ ಪ್ರದೇಶ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇಂದು ಸಂಜೆ ದೆಹಲಿಗೆ ವಾಪಸ್ಸಾದ ನಂತರ ರಾಜ್ಯದ ವಿಧಾನಸಭೆಗೆ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳ್ಳಲಿದೆ. ಇಂದು ರಾತ್ರಿ ಇಲ್ಲವೇ ನಾಳೆ ಪಟ್ಟಿ ಬಿಡುಗಡೆಯಾಲಿದೆ.ಹೊಸ ಮುಖಗಳಿಗೆ ಟಿಕೆಟ್ ಹಾಗೂ ೩-೪ ಬಾರಿ ಗೆದ್ದಿರುವ ೩-೪ ಪ್ರಭಾವಿ ಸಚಿವರುಗಳು ಈಗಿನ ಕ್ಷೇತ್ರದ ಬದಲು ತಮ್ಮ ಸಮುದಾಯದ ಬಲ ಹೆಚ್ಚಿರುವ ಹೊಸ ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಎಂಬ ವರಿಷ್ಠರ ಸೂತ್ರ ರಾಜ್ಯ ನಾಯಕರಲ್ಲಿ ತಳಮಳಕ್ಕೆ ಕಾರಣವಾಗಿದೆ. ಈ ಸೂತ್ರ ಬೇಡ, ಇದರಿಂದ ಪಕ್ಷಕ್ಕೆ ಹಿನ್ನಡೆಯಾಗಬಹುದು, ಸಾಂಪ್ರಾದಾಯಕ ಸೂತ್ರದಂತೆ ಗೆಲ್ಲುವ ಮಾನದಂಡದ ಮೇಲೆ ಟಿಕೆಟ್ ನೀಡೋಣ ಎಂಬ ರಾಜ್ಯ ನಾಯಕರ ಸಲಹೆಗೆ ವರಿಷ್ಠರು ಒಪ್ಪಿಲ್ಲ. ಇದು ಅಭ್ಯರ್ಥಿಗಳ ಆಯ್ಕೆ ವಿಳಂಬವಾಗಲು ಕಾರಣ ಎನ್ನಲಾಗಿದೆ. ವರಿಷ್ಠರ ಸೂತ್ರ ಜಾರಿಯಾದರೆ ಹಲವು ಹಿರಿಯರಿಗೆ ಕ್ಷೇತ್ರ ಬದಲಾಗುವ ಜತೆಗೆ ಹೊಸ ಕ್ಷೇತ್ರದಲ್ಲಿ ಅವರು ಗೆಲ್ಲುವ ಸಾಧ್ಯತೆಗಳು ಕಡಿಮೆ. ಹಾಗಾಗಿ, ಈ ರೀತಿಯ ಪ್ರಯೋಗ ಸದ್ಯ ಬೇಡ ಎಂದು ರಾಜ್ಯ ನಾಯಕರು ವರಿಷ್ಠರ ಮನವೊಲಿಸುವ ಕೆಲಸ ನಡೆಸಿದ್ದರಾದರೂ ವರಿಷ್ಠರು ಇನ್ನೂ ತಮ್ಮ ನಿಲುವು ಬದಲಿಸಿಲ್ಲ. ಹೀಗಾಗಿ, ಅಭ್ಯರ್ಥಿಗಳ ಆಯ್ಕೆ ಗಜಪ್ರಸವದಂತಾಗಿದೆ.ವರಿಷ್ಠರು ಸಿದ್ಧಪಡಿಸಿರುವ ಪಟ್ಟಿಯಂತೆ ೨೫-೩೦ ಕ್ಷೇತ್ರಗಳಲ್ಲಿ ಹೊಸಬರಿಗೆ ಅವಕಾಶ ನೀಡುವುದು, ಹಾಗೆಯೇ, ಮಕ್ಕಳಿಗೆ ಟಿಕೆಟ್ ನೀಡದೆ ಬಿಜೆಪಿ ವಂಶಪಾರಂಪರ್ಯ ರಾಜಕಾರಣಕ್ಕೆ ಅವಕಾಶ ನೀಡುವುದಿಲ್ಲ ಎಂಬ ಸಂದೇಶವನ್ನು ರವಾನಿಸುವ ಉದ್ದೇಶ ವರಿಷ್ಠರದ್ದಾಗಿದೆ. ಇದಕ್ಕೆ ರಾಜ್ಯ ನಾಯಕರು ಸುತಾರಾಂ ಒಪ್ಪಿಲ್ಲ, ಹೀಗಾದರೆ ಬಹುಮತ ಕಷ್ಟ, ಮಕ್ಕಳಿಗೆ ಟಿಕೆಟ್ ಕೈತಪ್ಪಿದರೆ ಪ್ರಭಾವಿ ನಾಯಕರು ಸುಮ್ಮನಿರಲ್ಲ, ಹಾಗೆಯೇ, ಹಾಲಿ ಶಾಸಕರನ್ನು ಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕಿದರೆ ಅಲ್ಲಿ ಹಾಲಿ ಶಾಸಕರು ತಮ್ಮ ’ಕೈ’ಚಳಕ ತೋರಿಸುತ್ತಾರೆ. ಇದೆಲ್ಲ ಪಕ್ಷದ ಹಿನ್ನಡೆಗೆ ಕಾರಣವಾಗುತ್ತದೆ. ಯಾವುದೇ ಹೊಸ ಪ್ರಯೋಗ ಮಾಡದೆ ಗೆಲುವಿನ ಮಾನದಂಡದ ಮೇಲೆ ಟಿಕೆಟ್ ನೀಡಿ ಎಂದು ರಾಜ್ಯ ನಾಯಕರು ಪಟ್ಟು ಹಿಡಿದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಇದನ್ನು ನಡ್ಡಾ ಅವರ ಜತೆ ಚರ್ಚಿಸಿದ್ದಾರೆ. ಅಂತಿಮವಾಗಿ ಇಂದು ಅಮಿತ್ ಶಾ ಜತೆ ಸಭೆ ನಡೆಸಿ ಎಲ್ಲ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಿ ಅಭ್ಯರ್ಥಿಗಳ ಆಯ್ಕೆಯನ್ನು ಪೂರ್ಣಗೊಳಿಸುವರು ಎಂದು ಹೇಳಲಾಗಿದೆ.ಕೇಂದ್ರ ಗೃಹ ಸಚಿವ ಅಮಿತ್ ಶಾರವರು ಅರುಣಾಚಲ ಪ್ರದೇಶದ ಪ್ರವಾಸದಲ್ಲಿದ್ದು, ಇಂದು ಸಂಜೆ ದೆಹಲಿಗೆ ವಾಪಸ್ಸಾಗುವರು, ಇಂದು ದೆಹಲಿಗೆ ವಾಪಸ್ಸಾದ ನಂತರ ಸಂಜೆ ಅಂತಿಮ ಸುತ್ತಿನ ಸಭೆ ನಡೆಯಲಿದ್ದು, ಅಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿಗೆ ಮೋಕ್ಷ ಸಿಗಲಿದೆ ಎಂದು ಬಿಜೆಪಿ ಮೂಲಗಳೂ ಹೇಳಿವೆ.
ಕಳೆದ ೫ ದಿನಗಳಿಂದ ನವದೆಹಲಿಯಲ್ಲಿ ನಿರಂತರ ಸಭೆಗಳು ನಡೆದರೂ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ಕೆಲ ಕ್ಷೇತ್ರಗಳಿಗೆ ಯಾರನ್ನು ಅಭ್ಯರ್ಥಿಯನ್ನಾಗಿಸಬೇಕು ಎಂಬುದು ಕಗ್ಗಂಟಾಗಿರುವುದರಿಂದ ಪಟ್ಟಿ ಬಿಡುಗಡೆ ತಡವಾಗಿದೆ.
ಎಲ್ಲವೂ ಅಂದುಕೊಂಡಂತಾಗಿದ್ದರೆ ನಿನ್ನೆ ರಾತ್ರಿಯೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಬೇಕಿತ್ತು. ಆದರೆ, ವರಿಷ್ಠರ, ಅದರಲ್ಲೂ ಪ್ರಧಾನಿ ನರೇಂದ್ರಮೋದಿ ಅವರು, ಹೊಸ ಮುಖಗಳಿಗೆ ಆದ್ಯತೆ ಕೊಡಿ, ವಂಶಪಾರಂಪರ್‍ಯ ರಾಜಕಾರಣಕ್ಕೆ ಮಣೆ ಹಾಕಬೇಡಿ ಎಂದು ಹೇಳಿರುವುದು ಅಭ್ಯರ್ಥಿಗಳ ಆಯ್ಕೆ ವಿಳಂಬವಾಗಲು ಕಾರಣ ಎನ್ನಲಾಗಿದೆ.ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯ ನಾಯಕರೊಂದಿಗೆ ಸತತ ಸಭೆಗಳನ್ನು ನಡೆಸಿದರೂ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿಯೇ ಉಳಿದಿದೆ.ಅಮಿತ್ ಶಾರವರ ಜತೆ ನಡೆಯುವ ಸಭೆಯಲ್ಲಿ ಈ ಕಗ್ಗಂಟಿಗೆ ಪರಿಹಾರ ಸಿಗಲಿದೆ. ಎಲ್ಲ ಗೊಂದಲಗಳು ಬಗೆಹರಿಯಲಿದೆ ಎಂದು ಬಿಜೆಪಿ ನಾಯಕರೊಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಟ್ಟಿ ಬಿಡುಗಡೆ ಇನ್ನು ತಡವಾಗುವುದಿಲ್ಲ. ಇಂದು ರಾತ್ರಿಯೇ ಪಟ್ಟಿ ಬಿಡುಗಡೆಯಾಗುತ್ತದೆ ಎಂದು ತಮ್ಮನ್ನು ಸಂಪರ್ಕಿಸಿದ ’ಸಂಜೆ ವಾಣಿ’ಗೆ ತಿಳಿಸಿದರು.
ಬಿಎಸ್‌ವೈ ಹಠಾತ್ ವಾಪಸ್ ಕುತೂಹಲಕ್ಕೆಡೆ
ದೆಹಲಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳದಿದ್ದರೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ದಿಢೀರ್ ಎಂದು ಬೆಂಗಳೂರಿಗೆ ವಾಪಸ್ಸಾಗಿರುವುದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದ್ದು, ಅಭ್ಯರ್ಥಿಗಳ ಆಯ್ಕೆ ಬಗ್ಗೆ ವರಿಷ್ಠರ ಸೂತ್ರ ಯಡಿಯೂರಪ್ಪರವರಲ್ಲಿ ಬೇಸರ, ಅಸಂತೋಷ ತರಿಸಿದೆ ಎಂದು ಹೇಳಲಾಗಿದೆ.
ಅಭ್ಯರ್ಥಿಗಳ ಆಯ್ಕೆ ಸಂಬಂಧ ದೆಹಲಿಯಲ್ಲಿ ನಡೆದ ನಿರಂತರ ಸಭೆಗಳಲ್ಲಿ ಭಾಗಿಯಾಗಲು ಕಳೆದ ಶುಕ್ರವಾರ ದೆಹಲಿಗೆ ತೆರಳಿದ್ದ ಯಡಿಯೂರಪ್ಪರವರು, ಪಟ್ಟಿ ಅಂತಿಮಗೊಳ್ಳುವ ಮುನ್ನವೇ ರಾಜ್ಯಕ್ಕೆ ವಾಪಸ್ಸಾಗಿದ್ದಾರೆ.ಕೆಲ ಹಿರಿಯ ನಾಯಕರ ಪುತ್ರರಿಗೆ ಟಿಕೆಟ್ ಬೇಡ ಎಂಬ ವರಿಷ್ಠರ ನಿಲುವು ಯಡಿಯೂರಪ್ಪರವರಲ್ಲಿ ಅಸಮಾಧಾನ ತರಿಸಿದೆ. ಜತೆಗೆ ಯಡಿಯೂರಪ್ಪರವರನ್ನು ಬಿಟ್ಟು ನಿನ್ನೆ ಜೆ.ಪಿ. ನಡ್ಡಾ ಹಾಗೂ ಅಮಿತ್ ಶಾ ಸಭೆ ನಡೆಸಿರುವುದು ಯಡಿಯೂರಪ್ಪರವರ ಅಸಮಾಧಾನಕ್ಕೆ ಕಾರಣವಾಗಿದ್ದು, ಅವರು ದೆಹಲಿಯಿಂದ ದಿಢೀರ್ ಎಂದು ವಾಪಸ್ಸಾಗಿದ್ದಾರೆ.ಯಡಿಯೂರಪ್ಪರವರ ದಿಢೀರ್ ನಿರ್ಗಮನದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಅವರ ವೈಯಕ್ತಿಕ ಕಾರಣದಿಂದ ಬೆಂಗಳೂರಿಗೆ ಹೋಗಿದ್ದಾರೆ. ಅಸಮಾಧಾನಗೊಂಡು ಅಲ್ಲ ಎಂದು ತಿಪ್ಪೆ ಸಾರಿಸುವ ಮಾತುಗಳನ್ನಾಡಿದ್ದಾರೆ.
ದೆಹಲಿಯಿಂದ ವಾಪಸ್ಸಾಗುವ ಮುನ್ನ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ್ದ ಯಡಿಯೂರಪ್ಪ, ಅವರಿಗೆ ಏನು ಹೇಳಬೇಕೋ ಅದನ್ನು ಹೇಳಿ ವಾಪಸ್ಸಾಗಿದ್ದಾರೆ. ಯಡಿಯೂರಪ್ಪರವರ ಪುತ್ರ ಬಿ.ವೈ. ವಿಜಯೇಂದ್ರ ರವರಿಗೆ ಟಿಕೆಟ್ ಸಿಗುತ್ತದೆ. ಅವರಿಗೆ ಟಿಕೆಟ್ ಸಿಗಲ್ಲ ಎಂಬುದೆಲ್ಲ ಊಹಾ-ಪೋಹಾ ಎಂದು ಬಿಜೆಪಿ ಸ್ಪಷ್ಟಪಡಿಸಿದೆಯಾದರೂ ಯಡಿಯೂರಪ್ಪರವರ ದಿಢೀರ್ ವಾಪಾಸಾತಿ ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ಸ್ಪಷ್ಟನೆ
ನಾನು ಅಸಮಾಧಾನಗೊಂಡಿದ್ದೇನೆ. ಬೇಸರಗೊಂಡಿದ್ದೇನೆ ಎನ್ನುವುದೆಲ್ಲ ಸುಳ್ಳು, ೫ ದಿನಗಳಿಂದ ದೆಹಲಿಯಲ್ಲಿದ್ದೆ. ವರಿಷ್ಠರಿಗೆ ಎಲ್ಲವನ್ನೂ ಹೇಳಿದ್ದೇನೆ. ವರಿಷ್ಠರು ಇಂದು ಇಲ್ಲವೇ ನಾಳೆ ಪಟ್ಟಿ ಬಿಡುಗಡೆ ಮಾಡಲಿದ್ದಾರೆ. ನನಗೆ ಯಾವ ಬೇಸರವೂ ಇಲ್ಲ ಎಂದು ಸ್ಪಷ್ಟನೆ ನೀಡಿದರಾದರೂ. ಅವರ ಆಪ್ತ ಮೂಲಗಳ ಪ್ರಕಾರ ಯಡಿಯೂರಪ್ಪ ಬೇಸರಗೊಂಡಿರುವುದು ನಿಜ.
ಇಂದೇ ಪಟ್ಟಿ ಬಿಡುಗಡೆ:ಸಿಎಂ
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ಬಿಡುಗಡೆಯಾಗುತ್ತದೆ ಎಂಬ ಸುಳಿವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ.
ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಳ್ಳಬಹುದು ಎಂದು ಹೇಳುವ ಮೂಲಕ ಇಂದೇ ಪಟ್ಟಿ ಬಿಡುಗಡೆಯ ಸುಳಿವು ನೀಡಿದರು. ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಿರಂತರ ಸಭೆಗಳನ್ನು ನಡೆಸಿದ್ದೇವೆ. ಇಂದು ಸಂಜೆ ಅಮಿತ್ ಶಾರವರ ಜತೆ ಅಂತಿಮ ಸುತ್ತಿನ ಸಭೆ ನಡೆಸಿ ಎಲ್ಲವನ್ನೂ ಇತ್ಯರ್ಥ ಮಾಡಲಾಗುವುದು ಎಂದರು.