ಬಿಜೆಪಿ-ಜೆಡಿಎಸ್ ಮೈತ್ರಿ ಕುತೂಹಲಕ್ಕೆಡೆ

(ಸಂಜೆವಾಣಿ ಪ್ರತಿನಿಧಿಯಿಂದ)

ಬೆಂಗಳೂರು,ಸೆ.೨೧:ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಗ್ಗೆ ದೆಹಲಿಯಲ್ಲಿಂದು ಎರಡೂ ಪಕ್ಷಗಳ ವರಿಷ್ಠರ ಸಭೆ ನಡೆಯಲಿದ್ದು, ಇಂದೇ ಮೈತ್ರಿ ಅಂತಿಮಗೊಳ್ಳುವ ಸಾಧ್ಯತೆ ಇದೆ. ಜೆಡಿಎಸ್‌ಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಎಷ್ಟು ಸೀಟುಗಳನ್ನು ಬಿಜೆಪಿ ಬಿಟ್ಟುಕೊಡುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ ಕಣಕ್ಕಿಳಿಯಲು ಬಿಜೆಪಿ-ಜೆಡಿಎಸ್ ಮುಂದಾಗಿದ್ದು, ಅಂತಿಮವಾಗಿ ಮೈತ್ರಿ ಮಾತುಕತೆಗಳು ನಡೆದಿವೆ. ಜೆಡಿಎಸ್‌ನ ವರಿಷ್ಠ ಮಾಜಿ ಪ್ರಧಾನಿ ದೇವೇಗೌಡರು ಸಂಸತ್‌ನ ವಿಶೇಷ ಅಧಿವೇಶನದಲ್ಲಿ ಭಾಗಿಯಾಗಲು ಈಗಾಗಲೇ ದೆಹಲಿಯಲ್ಲಿದ್ದು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ದೆಹಲಿಗೆ ತೆರಳಿದ್ದು, ಸಂಜೆ ಈ ಇಬ್ಬರು ನಾಯಕರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹಾಗೂ ಕೇಂದ್ರ ಗಹ ಸಚಿವ ಅಮಿತ್‌ಶಾರವರ ಜತೆ ಮೈತ್ರಿ ಬಗ್ಗೆ ಚರ್ಚೆ ನಡೆಸುವರು. ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳ ನಡುವಿನ ಸೀಟು ಹಂಚಿಕೆ, ಹೊಂದಾಣಿಕೆಯ ಸ್ವರೂಪ, ಈ ಮೈತ್ರಿ ಲೋಕಸಭಾ ಚುನಾವಣೆಗೆ ಮಾತ್ರ ಸೀಮಿತವೇ? ಇಲ್ಲವೇ ಮುಂದಿನ ಚುನಾವಣೆವರೆಗೂ ಮೈತ್ರಿಯನ್ನು ಮುಂದುವರೆಸಬೇಕೆ ಎಂಬ ವಿಚಾರವೂ ಇಂದಿನ ಸಭೆಯಲ್ಲಿ ಇತ್ಯರ್ಥವಾಗುತ್ತದೆ. ಜೆಡಿಎಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ, ಹಾಸನ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಕೇಳಿದ್ದು, ಈ ಸಂಬಂಧವೂ ಇಂದೇ ತೀರ್ಮಾನವಾಗಲಿದೆ. ಇಂದೇ ಮೈತ್ರಿ ಮಾತುಕತೆಗಳು ಅಂತಿಮವಾದರೂ ಕೇಂದ್ರ ಬಿಜೆಪಿ ನಾಯಕರು ರಾಜ್ಯ ಬಿಜೆಪಿ ನಾಯಕರೊಂದಿಗೆ ಚರ್ಚಿಸಿದ ನಂತರವೇ ಮೈತ್ರಿ ಘೋಷಣೆಯಾಗುವ ಸಾಧ್ಯತೆ ಇದೆ. ಬಾಕ್ಸ್ ಸಂಜೆ ಸಭೆ ಬಿಜೆಪಿ ಜತೆಗಿನ ಮೈತ್ರಿ ಬಗ್ಗೆ ಇಂದು ಸಂಜೆ ದೆಹಲಿಯಲ್ಲಿ ಬಿಜೆಪಿ ನಾಯಕರ ಜತೆ ಸಭೆ ಇದೆ. ನಾಳೆ ಸಭೆಯ ವಿವರಗಳನ್ನು ನೀಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. ದೆಹಲಿಗೆ ತೆರಳುವ ಮುನ್ನ ಬೆಂಗಳೂರಿನ ಜೆಪಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಎಷ್ಟು ಸ್ಥಾನಗಳಲ್ಲಿ ಜೆಡಿಎಸ್ ಸ್ಪರ್ಧಿಸಬೇಕು ಎಂಬುದು ಇಲ್ಲಿಯವರೆಗೆ ತೀರ್ಮಾನಗಾಳಗಿಲ್ಲ. ಎಲ್ಲದರ ಬಗ್ಗೆಯೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಇವರ ಜತೆ ಚರ್ಚೆ ನಡೆಸುತ್ತೇವೆ. ಅಗತ್ಯವೆನಿಸಿದರೆ ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿ ಮೋದಿ ಅವರ ಜತೆಯೂ ಚರ್ಚಿಸುತ್ತಾರೆ ಎಂದು ಹೇಳಿದರು.