ಬಿಜೆಪಿ-ಜೆಡಿಎಸ್ ಪಕ್ಷಗಳಿಗೆ ಯಾವುದೇ ಸೈದ್ಧಾಂತಿಕ ನೆಲೆಗಟ್ಟಿಲ್ಲ

ಬೈಲಕುಪ್ಪೆ: ಜ.18:- ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಯಾವುದೇ ಸೈದ್ಧಾಂತಿಕ ನೆಲೆಗಟ್ಟಿಲ್ಲ ಆದ್ದರಿಂದ ಜನಸಾಮಾನ್ಯರ ಕಷ್ಟಗಳು ಅವರಿಗೆ ಅರಿವಾಗುತ್ತಿಲ್ಲ ಎಂದು ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಆರೋಪಿಸಿದರು.
ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಹೊನ್ನೂರು ಗ್ರಾಮದಲ್ಲಿ ಬೈಲುಕುಪ್ಪೆ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಜನಸಾಮಾನ್ಯರ ಭವಣೆಗಳನ್ನು ಅರ್ಥ ಮಾಡಿಕೊಳ್ಳದೆ ಸ್ವಾರ್ಥ ಮತ್ತು ಭ್ರಷ್ಟಾಚಾರ ಆಡಳಿತವನ್ನು ನಡೆಸಲು ಅವಹಣಿಸುತ್ತಿದೆ ಇದನ್ನು ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕು. ಈ ಎರಡು ಪಕ್ಷಗಳು ಸಂವಿಧಾನಾತ್ಮಕ ಮತ್ತು ಪ್ರಜಾಸತ್ತಾತ್ಮಕ ಸಿದ್ಧಾಂತಗಳನ್ನು ಗಾಳಿಗೆ ತೂರಿ ಆಡಳಿತವನ್ನು ನಡೆಸಿ ಜನಸಾಮಾನ್ಯರ ಮೇಲೆ ಇಲ್ಲಸಲ್ಲದ ಕಾಯ್ದೆಗಳನ್ನು ಜಾರಿ ಗೊಳಿಸಿ ಸಂಕಷ್ಟಕ್ಕೆ ದೂಡುತ್ತಿದ್ದಾರೆ.ಸ್ವಂತ ಬಲದಿಂದ ಅಧಿಕಾರಕ್ಕೆ ಬರದೆ ವಾಮ ಮಾರ್ಗಗಳ ಮೂಲಕ ಆಡಳಿತ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷ ಈ ಹಿಂದೆ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಜನಸಾಮಾನ್ಯರಿಗೆ, ರೈತರಿಗೆ ಹಾಗೂ ಕಾರ್ಮಿಕರಿಗೆ ಉಪಯುಕ್ತವಾದ ಯೋಜನೆಗಳನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ನೇತೃತ್ವದಲ್ಲಿ ಘೋಷಿಸಿ ಅನುಷ್ಠಾನ ಗೊಳಿಸಲಾಗಿತ್ತು. ಈ ಯೋಜನೆಗಳು ಇಂದಿಗೂ ಕೂಡ ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪುತ್ತಿದೆ.
ಮಾಜಿ ಶಾಸಕ ಕೆ. ವೆಂಕಟೇಶ್ ಕೂಡ ತಾಲೂಕಿನ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ಅನುದಾನವನ್ನು ತಂದಿದ್ದಾರೆ. ಈ ಅಭಿವೃದ್ಧಿ ಕಾರ್ಯಗಳಿಂದಾಗಿ ಕಳೆದ ಚುನಾವಣೆಯಲ್ಲಿ ಕೆ.ವೆಂಕಟೇಶ್ ಅವರು ಜಯ ಸಾಧಿಸಬೇಕಾಗಿತ್ತು. ಆದರೆ ಕಾರ್ಯಕರ್ತರ ಮೈ ಮರೆವಿನಿಂದಾಗಿ ಸೋಲನ್ನು ಅನುಭವಿಸಿ ಇಂದು ತಾಲೂಕಿನಲ್ಲಿ ಸಂಕಷ್ಟವನ್ನು ಅನುಭವಿಸಬೇಕಾಗಿದೆ. ಇಂತಹ ಪರಿಸ್ಥಿತಿ ಮುಂದೆ ಬರದಂತೆ ಜಾಗೃತಿವಹಿಸಬೇಕು.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಬಹುಮತ ಗಳಿಸಿ ಸರ್ಕಾರ ರಚಿಸುವುದು ಖಚಿತವಾಗಿದ್ದು ಮುಂದಿನ ಚುನಾವಣೆಯಲ್ಲಿ ಶಾಸಕ ಕೆ. ವೆಂಕಟೇಶ್ ರವರನ್ನು ಶಾಸಕರಾಗಿ ಆಯ್ಕೆ ಮಾಡಿ ಕಳಿಸಿದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಮಂತ್ರಿ ಮಾಡಿ ತಾಲೂಕಿನ ಅಭಿವೃದ್ಧಿಗೆ ಮತ್ತಷ್ಟು ಒತ್ತನ್ನು ನೀಡಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಭ್ರಷ್ಟ ಬಿಜೆಪಿ ಸರ್ಕಾರದ ದುರಾಡಳಿತದಿಂದ ಉಳ್ಳವರು ಮಾತ್ರ ಆರ್ಥಿಕ ಸದೃಢತೆ ಹೊಂದುತ್ತಿದ್ದು, ಜನಸಾಮಾನ್ಯರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಬಡವರ ಮತ್ತು ಕಾರ್ಮಿಕರ ಹಿತವನ್ನು ಕಾಯಲು ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.
ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷವು ಅವಕಾಶವಾದಿತನ ರಾಜಕಾರಣ ಮಾಡುತ್ತಿದೆ. ಇವರಿಗೆ ಕೇವಲ ಅಧಿಕಾರ ಮುಖ್ಯವಾಗಿದ್ದು ಜನಸಾಮಾನ್ಯರ ಬದುಕಿನ ಬಗ್ಗೆ ಕಾಳಜಿ ಇಲ್ಲದಾಗಿದೆ. ಆದ್ದರಿಂದ ರಾಜ್ಯಾದ್ಯಂತ ಮತದಾರರು ಈ ಎರಡು ಪಕ್ಷಗಳನ್ನು ಕಿತ್ತೋಗೆಯಲು ಮನಸ್ಸು ಮಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಆದ್ದರಿಂದ ಸ್ಥಳೀಯವಾಗಿ ಕೆ. ವೆಂಕಟೇಶ್ ರವರನ್ನು ಶಾಸಕರಾಗಿ ಆಯ್ಕೆ ಮಾಡಲು ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ. ವೆಂಕಟೇಶ್ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಭೂತನಹಳ್ಳಿ ಕರಿಗೌಡ ಮಾತನಾಡಿದರು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ಹಿರಿಯ ಕಾರ್ಯದರ್ಶಿ ಸಮಿವಲ್ಲ ಖಾನ್, ಟಿ.ಡಿ.ಗಣೇಶ್,ನಿತಿನ್ ವೆಂಕಟೇಶ್, ಡಿ.ಟಿ.ಸ್ವಾಮಿ,ಅನಿತಾ ತೋಟಪ್ಪ, ಶೆಟ್ಟಿ, ಕೆ.ಹೊಲದಪ್ಪ, ರೆಹಮತ್ತ್ ಜಾನ್ ಬಾಬು,ಸುಮಾ,ಗೀತಾ,ಕಲ್ಯಾಣಪ್ಪ, ಪಿ. ಮಹದೇವ್, ಜವರಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷ ಸುಮಾ ಪ್ರಭಾಕರ, ಉಪಾಧ್ಯಕ್ಷೆ ಗೀತಾ ರಾಮು, ಗ್ರಾಮ ಪಂಚಾಯತಿ ಸದಸ್ಯರಾದ ರಘು, ರಘು ಬಾಲಾಜಿ, ನಿಸಾರ್ ಅಹ್ಮದ್ ಮಂಜುನಾಥ್, ನವೀನ್, ಪಿ.ಪಿ.ಮಹದೇವ್ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಸೇರಿದಂತೆ ಮತ್ತಿತರರು ಹಾಜರಿದ್ದರು.