ಬಿಜೆಪಿ, ಜೆಡಿಎಸ್‍ಗೆ ಜನಪರ ಕಾಳಜಿ ಇಲ್ಲ: ಎಚ್.ಸಿ.ಎಂ ಕಿಡಿ

ಸಂಜೆವಾಣಿ ವಾರ್ತೆ
ತಿ.ನರಸೀಪುರ: ಆ.17:- ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಮೂರು ತಿಂಗಳಷ್ಟೇ ಕಳೆದಿದ್ದು, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸರ್ಕಾರಕ್ಕೆ ಜನಪರ ಕೆಲಸ ಮಾಡಲು ಅವಕಾಶ ನೀಡದೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿವೆ. ಆ ಪಕ್ಷಗಳಿಗೆ ಜನಪರ ಕಾಳಜಿಯಿಲ್ಲ ಎಂಬುದು ಅವರ ಕೀಳುಮಟ್ಟದ ನಡವಳಿಕೆಯಿಂದ ಗೊತ್ತಾಗುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಮತ್ತು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಕಿಡಿಕಾರಿದರು.
ಬನ್ನೂರಿನ ಎಪಿಎಂಸಿ ಆವರಣದಲ್ಲಿ ಹಮ್ಮಿಕೊಂಡಿದ್ದ ಬನ್ನೂರು ಕಾಂಗ್ರೆಸ್ ಕಾರ್ಯಕರ್ತರ ಕೃತಜ್ಞತಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಪ್ರಣಾಳಿಕೆಯಲ್ಲಿದ್ದ ಐದು ಗ್ಯಾರಂಟಿ ಭರವಸೆಗಳನ್ನು ಬಹುತೇಕ ಈಡೇರಿಸುವತ್ತ ದಾಪುಗಾಲು ಹಾಕಿದೆ.ಆದರೆ, ಅಧಿಕಾರ ವಂಚಿತ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹತಾಶೆಯಿಂದ ಸರ್ಕಾರದ ವಿರುದ್ಧ ಟೀಕೆಟಿಪ್ಪಣಿ ಮಾಡುವ ಮುಖೇನ ಕ್ಷುಲ್ಲಕ ರಾಜಕಾರಣಕ್ಕೆ ಮುಂದಾಗಿವೆ.ಜನಪರ ಕಾಳಜಿ ಇಲ್ಲದ ಆ ಪಕ್ಷಗಳಿಗೆ ರಾಜ್ಯದ ಜನತೆ ಜನಾದೇಶ ಕೊಟ್ಟಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಿದೆ ಎಂದರು.
ರಾಜ್ಯದ ಎಲ್ಲ ಬಡ ಜನತೆಗೆ ಪ್ರತಿ ತಿಂಗಳು 4000-5000 ಸಾವಿರ ರೂಗಳ ವರಮಾನ ಬರುವಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ.ಇದರಿಂದ ಪ್ರತಿ ಕುಟುಂಬಕ್ಕೆ ವಾರ್ಷಿಕ 52000 ಸಾವಿರ ರೂಗಳ ಆದಾಯ ಸಿಗಲಿದೆ.1.32 ಕೋಟಿ ಕುಟುಂಬಗಳು ಇದರ ಲಾಭ ಪಡೆಯಲಿವೆ.ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ 56 ಸಾವಿರ ಕೋಟಿಗಳನ್ನು ವ್ಯಯಿಸಲು ನಿರ್ಧರಿಸಿದೆ. ಶಕ್ತಿಯೋಜನೆಯಿಂದ ದಿನನಿತ್ಯ ಓಡಾಡುವ ಮಹಿಳೆಯರಿಗೆ ನೆಮ್ಮದಿ ಸಿಕ್ಕಿದೆ.ಅನ್ನಭಾಗ್ಯದಿಂದ ಹಸಿದವರ ಹೊಟ್ಟೆ ತುಂಬಿದೆ,ಗೃಹ ಜ್ಯೋತಿಯಿಂದ ಬಡವರ ಬಾಳಿಗೆ ಬೆಳಕು ಬರಲಿದೆ ಎಂದರು.
ಬನ್ನೂರಿನ ಜನತೆ ಸ್ವಲ್ಪ ವಿಭಿನ್ನ.ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲೇಬೇಕು ಎಂದು ಹಠ ತೊಟ್ಟಿದ್ದರು.ಹಾಗಾಗಿ ಬನ್ನೂರು ಭಾಗದ ಒಕ್ಕಲಿಗ ಬಹುಸಂಖ್ಯಾತ 79 ಬೂತ್ ಗಳಲ್ಲಿ 40% ಕ್ಕಿಂತಲೂ ಹೆಚ್ಚು ಮತಗಳು ಕಾಂಗ್ರೆಸ್ ಪಕ್ಷದ ಪರವಾಗಿ ಬಂದಿದೆ.ಒಕ್ಕಲಿಗರು ಜೆಡಿಎಸ್ ಪಕ್ಷಕ್ಕೆ ಮಾತ್ರ ಸೀಮಿತವಲ್ಲ ಎಂಬುದನ್ನು ಈ ಚುನಾವಣೆಯಲ್ಲಿ ಅವರು ತೋರಿಸಿದ್ದಾರೆ ಎಂದರು.
ಜನತೆ ಕೊಟ್ಟಿರುವ ಅಧಿಕಾರವನ್ನು ಜನಪ್ರತಿನಿಧಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು.ಕಾನೂನು ಅರಿವು ಬೆಳೆಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು.ರೈತ,ಬಡವ, ದುರ್ಬಲ ಪರವಾಗಿ ದುಡಿಯಬೇಕು.ಈ ಭಾರೀ ಕಡಿಮೆ ಮಳೆ ಕಡಿಮೆಯಾಗಿರುವುದರಿಂದ ಈ ಭಾಗದ ಜಲಾಶಯಗಳಲ್ಲಿ ನೀರಿನಮಟ್ಟ ಕುಸಿದಿದ್ದು, ಈ ನಡುವೆಯೂ ರೈತರ ಬೇಸಾಯಕ್ಕಾಗಿ 15 ದಿನಕ್ಕೊಮ್ಮೆ ಕಟ್ಟುನೀರು ಬಿಡಲು ನಿರ್ಧರಿಸಲಾಗಿದೆ ಎಂದರು.
ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಬರುವವರನ್ನು ಆಹ್ವಾನಿಸಬೇಕು. ಸಂಸತ್,ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಎಲ್ಲ ಕಾರ್ಯಕರ್ತರು ಶ್ರಮಪಟ್ಟು ದುಡಿಯಬೇಕು.ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆಯನ್ನು ಕಾಂಗ್ರೆಸ್ ಪಕ್ಷ ಜಾರಿಗೆ ತಂದಿದ್ದು,ಬಜೆಟ್ ನಲ್ಲಿ ಪರಿಶಿಷ್ಟ ಜಾತಿ/ಪಂಗಡದವರಿಗೆ ಮೀಸಲಿಟ್ಟಿದ್ದ ಹಣವನ್ನು ಬೇರೆ ಯೋಜನೆಗಳಿಗೆ ಬಳಸುವುದಿಲ್ಲ ಎಂದರು.
ಮಾಜಿ ಶಾಸಕಿ ಸುನಿತಾ ವೀರಪ್ಪಗೌಡ ಮಾತನಾಡಿ,2023ರ ತಿ.ನರಸೀಪುರ ಮೀಸಲು ವಿಧಾನಸಭಾ ಚುನಾವಣೆಯಲ್ಲಿ ಹಬ್ಬದ ವಾತಾವರಣ ಇತ್ತು.ಕ್ಷೇತ್ರದ ಬಹುತೇಕ ಮತದಾರರು ಸ್ವಯಂಪ್ರೇರಿತರಾಗಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದರು.ಒಕ್ಕಲಿಗ ಸಮಾಜ ಜೆಡಿಎಸ್ ಪಕ್ಷಕ್ಕೆ ಸೀಮಿತವಾಗಬಾರದು,ನಮ್ಮ ಬೆಂಬಲ ಒಂದು ಪಕ್ಷಕ್ಕೆ ಸೀಮಿತವಾಗದೆ ಕ್ಷೇತ್ರದ ಅಭಿವೃದ್ಧಿ ಮಾಡುವವರನ್ನು ಬೆಂಬಲಿಸಬೇಕು.ಮಂತ್ರಿಗಳು ಬನ್ನೂರು ಭಾಗದಲ್ಲಿ ಉದ್ಯೋಗ ಸೃಷ್ಟಿ ಮಾಡಬೇಕು ಎಂದರು.
ಕೆಡಿಪಿ ಸದಸ್ಯ ಸುನಿಲ್ ಬೋಸ್ ಮಾತನಾಡಿ,ಹಲವು ಕಾರಣಗಳಿಂದ ಬನ್ನೂರಿನಲ್ಲಿ ಕೃತಜ್ಞತಾ ಸಭೆ ನಡೆಸಲು ತಡವಾಯಿತು.2023ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಎಲ್ಲ ಮತದಾರರು ಬನ್ನೂರು ಮತದಾರ ನಿರ್ಣಯವನ್ನು ಗಮನಿಸುತ್ತಿದ್ದರು.ಬನ್ನೂರಿನ ಮತದಾರರ ನಿರ್ಣಯವನ್ನು ಇತರೆ ಹೋಬಳಿಗಳ ಮತದಾರರು ಗೌರವಿಸಿದ್ದಾರೆ.ಹಾಗಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದೆ.ಬನ್ನೂರಿನ ಜನತೆ ಈ ಬಾರಿ ಜಾತೀಯತೆಯನ್ನು ಮೀರಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ನೀಡಿದ್ದಾರೆ.ಕಾಂಗ್ರೆಸ್ ಪಕ್ಷಕ್ಕೆ ದುಡಿದ ಎಲ್ಲ ಕಾರ್ಯಕರ್ತರಿಗೆ ಸಮಾನ ಮಾನ್ಯತೆ ನೀಡಬೇಕಾಗುತ್ತದೆ.ಎಲ್ಲ ಕಾರ್ಯಕರ್ತರು ಒಗ್ಗಟ್ಟಿನಿಂದ ಕ್ಷೇತ್ರದ ಅಭಿವೃದ್ಧಿಯತ್ತ ಗಮನಹರಿಸಬೇಕು.ಭಿನ್ನಾಭಿಪ್ರಾಯಗಳನ್ನು ಮರೆತು ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವತ್ತ ಗಮನಹರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ. ವಿಜಯಕುಮಾರ್, ಮೈಮುಲ್ ನಿರ್ದೇಶಕ ಕೆ.ಆರ್.ಚೆಲುವರಾಜು,ರಾಜ್ಯ ಒಕ್ಕಲಿಗ ಸಂಘದ ಕಾರ್ಯದರ್ಶಿ ಡಾ.ಕೆ.ಮಹದೇವ್,ಬನ್ನೂರು ಪುರಸಭೆ ಅಧ್ಯಕ್ಷೆ ಸೌಮ್ಯಶ್ರೀ ಕೃಷ್ಣ,ಮಾಜಿ ಜಿ.ಪಂ.ಸದಸ್ಯರಾದ ಸುಧೀರ್, ಹೊನ್ನನಾಯಕ, ಸುಧಾ ಮಹಾದೇವಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚನ್ನಕೇಶವ, ಹಿರಿಯ ಸಹಕಾರಿ ವೈ.ಎನ್. ಶಂಕರೇಗೌಡ,ಕೆಪಿಸಿಸಿ ಸದಸ್ಯೆ ವೀಣಾ, ಎಸ್. ಸಿ /ಎಸ್.ಟಿ.ಗುತ್ತಿಗೆದಾರ ಸಂಘದ ಜಿಲ್ಲಾಧ್ಯಕ್ಷ ಹೊಸಪುರ ಮಲ್ಲು, ಮಾಜಿ ಪಿಕಾರ್ಡ್ ಅಧ್ಯಕ್ಷ ವಜ್ರೇ ಗೌಡ, ಕೆಪಿಸಿಸಿ ಸದಸ್ಯ ಉಕ್ಕಲಗೆರೆ ಬಸವಣ್ಣ, ಹಿಂದುಳಿದ ವರ್ಗಗಳ ಅಧ್ಯಕ್ಷ ಎ. ಎನ್.ಸ್ವಾಮಿ, ಮಾಜಿ ತಾ. ಪಂ.ಅಧ್ಯಕ್ಷೆ ಗಾಯತ್ರಿ ಸ್ವಾಮೀಗೌಡ,ಮಾಜಿ ತಾ. ಪಂ.ಅಧ್ಯಕ್ಷ ಚಾಮೇಗೌಡ,ಸದಸ್ಯ ದೊಡ್ಡೇಬಾಗಿಲು ಮಲ್ಲಿಕಾರ್ಜುನಸ್ವಾಮಿ, ಬೆನಕನಹಳ್ಳಿ ಶಿವಸ್ವಾಮಿ, ಅಕ್ಕಿ ರಮೇಶ್, ಬನ್ನೂರು ಕಾಂಗ್ರೆಸ್ ಅಧ್ಯಕ್ಷ ಮುನಾವರ್ ಪಾಷ, ಪುರಸಭೆ ಸದಸ್ಯ ರಾದ ಶಿವಣ್ಣ, ಲೋಕಾಂಬಿಕಾ, ಮಹೇಶ್, ಮಾಜಿ ಪುರಸಭೆ ಸದಸ್ಯ ಪದ್ಮನಾಭ, ಅತ್ತಹಳ್ಳಿ ಗ್ರಾ. ಪಂ.ಅಧ್ಯಕ್ಷ ಡಿ. ಸುನಿಲ್ ಕುಮಾರ್, ಜ್ಞಾನಪ್ರಕಾಶ್, ಡಾ.ಮಹೇಂದ್ರ ಸಿಂಗ್ ಕಾಳಪ್ಪ, ಮೇಗಳಕೊಪ್ಪಲು ಸಿದ್ದೇಗೌಡ, ಸೋಸಲೆ ಮಹದೇವಸ್ವಾಮಿ, ದೊಡ್ಡಪುರ ನಂಜುಂಡಸ್ವಾಮಿ, ನಂಜಪುರ ಶಿವಣ್ಣ, ದೊಡ್ಡಮಲಗೂಡು ರವಿ, ಕೇತುಪುರ ಪ್ರಭಾಕರ್, ತಲಕಾಡು ವಿಜಯಕುಮಾರ್, ಮಾಜಿ ಪುರಸಭೆ ಉಪಾಧ್ಯಕ್ಷ ಬಿ. ಸಿ.ಪಾರ್ಥಸಾರಥಿ, ಬನ್ನೂರು ಸುನಿಲ್, ಗದ್ದೆಮೋಳೆ ಸಿದ್ದರಾಜು ಇತರರು ಹಾಜರಿದ್ದರು.