ಬಿಜೆಪಿ ಜಿಲ್ಲಾ ವಕ್ತಾರರಾಗಿ ಹಿರಿಯ ಪತ್ರಕರ್ತ ಸದಾನಂದ ಜೋಶಿ ನೇಮಕ

ಬೀದರ್:ಮಾ.2:ಹಿರಿಯ ಪತ್ರಕರ್ತ ಸದಾನಂದ ಜೋಶಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷದ ಸೇರ್ಪಡೆ ಬೆನ್ನಲ್ಲಿಯೇ ಜೋಶಿ ಅವರನ್ನು ಪಕ್ಷದ ಜಿಲ್ಲಾ ವಕ್ತಾರರನ್ನಾಗಿ ನೇಮಿಸಲಾಗಿದೆ.
ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ಬಿ.ವೈ.ವಿಜಯೇಂದ್ರ ಅವರ ನಿರ್ದೇಶನದಂತೆ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಸೋಮನಾಥ ಪಾಟೀಲ್ ಹುಡಗಿ ಅವರು ಸದಾನಂದ ಜೋಶಿ ಅವರನ್ನು ಜಿಲ್ಲಾ ವಕ್ತಾರರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.ಕೂಡಲೇ ಜವಾಬ್ದಾರಿಯನ್ನು ವಹಿಸಿಕೊಂಡು ಪಕ್ಷದ ಸಂಘಟನೆಯಲ್ಲಿ ತೊಡಗುವಂತೆ ಸೂಚಿಸಿದ್ದಾರೆ.

ಕಳೆದ 30 ವರ್ಷಗಳಿಂದ ಸದಾನಂದ ಜೋಶಿ ಅವರು ಪತ್ರಿಕಾ ರಂಗದ ಮುಖಾಂತರ ಬೀದರ್ ಜಿಲ್ಲೆಯ ಅಭಿವೃದ್ಧಿಗಾಗಿ ಹಾಗೂ ಉತ್ತಮ ಸಮಾಜ ನಿರ್ಮಾಣಕ್ಕೆ ಸಾಕಷ್ಟು ಶ್ರಮಿಸಿದ್ದಾರೆ. ಸಾಮಾಜಿಕ ಚಿಂತಕ ಜೊತೆಗೆ ಪ್ರಖರ ಲೇಖಕ, ಬರಹಗಾರರಾಗಿದ್ದಾರೆ. ಈ ಭಾಗದ ಪ್ರಮುಖ ರಾಜಕೀಯ ವಿಶ್ಲೇಷಕರೂ ಆಗಿದ್ದಾರೆ. ಹರಿತವಾದ ಸುದ್ದಿಗಳು, ವರದಿಗಳು, ಲೇಖನ ಮೂಲಕ ಸಮಾಜಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಪತ್ರಿಕಾ ರಂಗದಿಂದ ಸ್ವಯಂನಿವೃತ್ತಿ ಪಡೆದುಕೊಂಡು, ಭಾರತೀಯ ಜನತಾ ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿಕೊಂಡು ಬಿಜೆಪಿಗೆ ಸೇರಿದ್ದಾರೆ. ಪತ್ರಿಕಾ ರಂಗದಲ್ಲಿ ಸುದೀರ್ಘ ಅವಧಿ ಸಮಾಜಪರ ಚಿಂತನೆಯೊಂದಿಗೆ ಉತ್ತಮ ಸೇವೆ ಸಲ್ಲಿಸಿದ ಸದಾನಂದ ಜೋಶಿ ಅವರು ಬೇಷರತ್ ಬಿಜೆಪಿ ಸೇರಿರುವುದಕ್ಕೆ ಜಿಲ್ಲಾ ಬಿಜೆಪಿ ಹೃತ್ಪೂರ್ವಕವಾಗಿ ಸ್ವಾಗತಿಸಿದೆ ಎಂದು ಸೋಮನಾಥ ಪಾಟೀಲ್ ಅವರು ಹೇಳಿದ್ದಾರೆ.

ಶಾಸಕರ ಹರ್ಷ

ಹಿರಿಯ ಪತ್ರಕರ್ತ ಸದಾನಂದ ಜೋಶಿ ಅವರು ಬಿಜೆಪಿ ಸೇರಿರುವುದಕ್ಕೆ ಹಾಗೂ ಅವರನ್ನು ಜಿಲ್ಲಾ ವಕ್ತಾರರನ್ನಾಗಿ ನೇಮಿಸಿದ್ದಕ್ಕಾಗಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರೂ ಆದ ಬಿಜೆಪಿ ರಾಜ್ಯ ಕಾರ್ಯದರ್ಶಿ ಡಾ.ಶೈಲೇಂದ್ರ ಬೆಲ್ದಾಳೆ, ಮಾಜಿ ಸಚಿವರೂ ಆದ ಔರಾದ್ ಶಾಸಕ ಪ್ರಭು ಚವ್ಹಾಣ್, ಬಸವಕಲ್ಯಾಣ ಶಾಸಕ ಶರಣು ಸಲಗರ, ಹುಮನಾಬಾದ್ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಅವರು ಸ್ವಾಗತಿಸಿ, ಸಂತಸ ವ್ಯಕ್ತಪಡಿಸಿದ್ದಾರೆ. ಪತ್ರಕರ್ತರಾಗಿ ಜೋಶಿ ಅವರು ಜಿಲ್ಲೆಗೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಉತ್ತಮವಾದ ವ್ಯಕ್ತಿತ್ವ ಹೊಂದಿರುವ ಜತೆಗೆ ಸಮಾಜಕ್ಕೆ ನಿರಂತರ ಸೂಕ್ತ ಮಾರ್ಗದರ್ಶನ ಮಾಡುವ ಮೂಲಕ ಜಿಲ್ಲೆಯ ಅಭಿವೃದ್ಧಿಪರ ಚಿಂತಕರಾಗಿದ್ದಾರೆ. ಇವರು ಪಕ್ಷಕ್ಕೆ ಸೇರಿರುವುದರಿಂದ ಪಕ್ಷಕ್ಕೆ ಒಳ್ಳೆಯ ಸಲಹೆಗಾರರು ಸಿಕ್ಕಂತಾಗಿದೆ ಎಂದು ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ ಸೇರಿ ಹಲವು ಮುಖಂಡರು ಜೋಶಿ ಅವರು ಬಿಜೆಪಿ ಸೇರಿದ್ದನ್ನು ಸ್ವಾಗತಿಸಿದ್ದಾರೆ.

ದೇಶದ ಹಿತ, ಸಮಗ್ರ ಅಭಿವೃದ್ಧಿ ಮತ್ತು ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಬಿಜೆಪಿ ದುಡಿಯುತ್ತಿದೆ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗಬೇಕು, ಭಾರತ ವಿಶ್ವ ಗುರುವಾಗಿ ವಿಶ್ವಕ್ಕೆ ಮಾರ್ಗದರ್ಶನ ಮಾಡುವ ಕನಸು ನನಸಾಗಿಸುವ ಕಾರ್ಯದಲ್ಲಿ ಭಾಗಿಯಾಗಬೇಕೆಂಬ ಹಾಗೂ ಮುಂದೆ ಬಿ.ವೈ.ವಿಜಯೇಂದ್ರ ಸಾರಥ್ಯದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಬೇಕೆಂಬ ಧ್ಯೇಯದಿಂದ ಬಿಜೆಪಿ ಸೇರಿದ್ದೇನೆ. ಜಿಲ್ಲಾ ವಕ್ತಾರರನ್ನಾಗಿ ನೇಮಿಸಿದ್ದಕ್ಕಾಗಿ ಪಕ್ಷದ ಎಲ್ಲ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನಗೆ ನೀಡಿದ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಲು ಹಗಲಿರುಳು ದುಡಿಯುತ್ತೇನೆ. ಬರುವ ಲೋಕಸಭೆ ಚುನಾವಣೆಯಲ್ಲಿ ಬೀದರ್ ಕ್ಷೇತ್ರದ ಪಕ್ಷದ ಅಭ್ಯರ್ಥಿಯನ್ನು ಭರ್ಜರಿಯಾಗಿ ಗೆಲ್ಲಿಸುವುದೇ ಸದ್ಯದ ನಮ್ಮ ಗುರಿ.
-ಸದಾನಂದ ಜೋಶಿ
ಜಿಲ್ಲಾ ಬಿಜೆಪಿ ವಕ್ತಾರರು