ಬಿಜೆಪಿ ಜಿಲ್ಲಾ ಕಾರ್ಯಾಲಯ ಶೀಘ್ರ ಲೋಕಾರ್ಪಣೆ: ಸಚಿವ ಪ್ರಭು ಚವ್ಹಾಣ

ಬೀದರ :ಜು.22:ನಗರದ ನೌಬಾದ್‍ನಲ್ಲಿ ನಿರ್ಮಿಸಲಾಗುತ್ತಿರುವ ಭಾರತೀಯ ಜನತಾ ಪಕ್ಷದ ಜಿಲ್ಲಾ ಕಛೇರಿ ಕಟ್ಟಡಕ್ಕೆ ಪಶು ಸಂಗೋಪನೆ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ಜುಲೈ 21ರಂದು ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.

ಬಳಿಕ ಮಾತನಾಡಿದ ಸಚಿವರು, ಪಕ್ಷಕ್ಕಾಗಿ ಸ್ವಂತ ಕಟ್ಟಡವನ್ನು ನಿರ್ಮಿಸಬೇಕು ಎಂಬುದು ಪಕ್ಷದ ಕಾರ್ಯಕರ್ತರ ಬಹುದಿನಗಳ ಬೇಡಿಕೆಯಾಗಿತ್ತು. ಈ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ. ಪಕ್ಷದ ಜನಪ್ರತಿನಿಧಿಗಳು, ಹಿರಿಯ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಹಕಾರದಿಂದಾಗಿ ಬೀದರ ನಗರದಲ್ಲಿ ಪಕ್ಷದ ಭವ್ಯ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಕಾರ್ಯಾಲಯ ಸುಂದರವಾಗಿ ನಿರ್ಮಾಣಗೊಳ್ಳುತ್ತಿರುವುದು ಎಲ್ಲರಿಗೂ ಸಂತೋಷ ತಂದಿದೆ ಎಂದು ಹೇಳಿದರು.

ಇದೀಗ ನೂತನ ಕಾರ್ಯಲಯಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಕಛೇರಿಯ ಮೂರು ಅಂತಸ್ತುಗಳಲ್ಲಿನ ಎಲ್ಲ ಕೋಣೆಗಳಲ್ಲಿ ಸುತ್ತಾಡಿ ವೀಕ್ಷಿಸಿದ್ದೇನೆ. ಕಟ್ಟಡ ನಿರ್ಮಾಣ, ಕಲ್ಲುಗಳ ಹಾಸುವಿಕೆ ಸೇರಿದಂತೆ ಕಟ್ಟಡದ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ನಿರೀಕ್ಷೆಯಂತೆ ಪಕ್ಷದ ಕಛೇರಿ ಬಹಳಷ್ಟು ಸುಂದರವಾಗಿ ಮೂಡಿಬರಲು ಕಾರಣೀಕರ್ತರಾದ ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿವಾನಂದ ಮಂಠಾಳಕರ್ ಹಾಗೂ ಗುತ್ತಿಗೆದಾರರಿಗೆ ಧನ್ಯವಾದ ಸಲ್ಲಿಸಿದರು.

ಬಾಕಿ ಉಳಿದ ಎಲ್ಲ ಕೆಲಸಗಳು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕು ಮತ್ತು ಕಾಲಮಿತಿಯಲ್ಲಿ ಎಲ್ಲ ಕೆಲಸಗಳು ಪೂರ್ಣಗೊಳ್ಳುವ ನಿಟ್ಟಿನಲ್ಲಿ ನೋಡಿಕೊಳ್ಳಬೇಕಿದೆ ಎಂದ ಸಚಿವರು, ಕಟ್ಟಡ ನಿರ್ಮಾಣ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಸಣ್ಣ-ಪುಟ್ಟ ಕೆಲಸಗಳು ಮಾತ್ರ ಬಾಕಿ ಉಳಿದಿವೆ. ರಾಜ್ಯದ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಹಾಗೂ ಪಕ್ಷದ ವರಿಷ್ಠರ ಸಮಯ ಪಡೆದು ಬಿಜೆಪಿ ಪಕ್ಷದ ನೂತನ ಕಾರ್ಯಾಲಯವನ್ನು ಉದ್ಘಾಟಿಸಲಾಗುವುದು ಎಂದು ಸಚಿವರು ತಿಳಿಸಿದರು.

ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪಕ್ಷದ ಕಾರ್ಯಾಲಯವಿರಬೇಕೆಂಬ ಪಕ್ಷದ ವರಿಷ್ಟರ ನಿರೀಕ್ಷೆಯಂತೆ ಬೀದರ ಜಿಲ್ಲೆಯಲ್ಲಿ ಪಕ್ಷದ ಸ್ವಂತ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಪಕ್ಷದ ಜನಪ್ರತಿನಿಧಿಗಳು, ಹಿರಿಯ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ಒಂದೆಡೆ ಸೇರಿಸಿ ಭಾರತೀಯ ಜನತಾ ಪಕ್ಷವನ್ನು ಜಿಲ್ಲೆಯಲ್ಲಿ ಬೇರು ಮಟ್ಟದಿಂದ ಬಲಪಡಿಸುವಲ್ಲಿ ಈ ಕಾರ್ಯಾಲಯ ಬಹಳಷ್ಟು ಪ್ರಾಮುಖ್ಯತೆ ವಹಿಸಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿವಾನಂದ ಮಂಠಾಳಕರ್, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿಜಯಕುಮಾರ ಪಾಟೀಲ ಗಾದಗಿ, ಅರಹಂತ ಸಾವಳೆ, ಜಿಲ್ಲಾ ಕಾರ್ಯದರ್ಶಿ ಕಿರಣ ಪಾಟೀಲ, ಔರಾದ ಮಂಡಲ ಅಧ್ಯಕ್ಷರಾದ ರಾಮಶೆಟ್ಟಿ ಪನ್ನಾಳೆ, ಮುಖಂಡರಾದ ಪ್ರತೀಕ ಚವ್ಹಾಣ, ಸುರೇಶ ಭೋಸ್ಲೆ, ಸಚಿನ್ ರಾಠೋಡ, ವೀರೂ ರಾಜಪೂರೆ, ಯೋಗೇಶ ಪಾಟೀಲ ದಾಬಕಾ, ಖಂಡೋಬಾ ಕಂಗಟೆ, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.