ಬೆಂಗಳೂರು, ಏ.2-ಬಿಜೆಪಿ ಸರ್ಕಾರ ರಾಜ್ಯದ ಜನರನ್ನು ಫೂಲ್ ಮಾಡುತ್ತಲೇ ಬಂದಿದೆ. ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ಮಾತ್ರವಲ್ಲ, ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದ ಅಷ್ಟೂ ಭರವಸೆಗಳು ರಾಜ್ಯದ ಜನರನ್ನು ಮೂರ್ಖರನ್ನಾಗಿ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬೋವಿ ಸಮಾಜದವರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡಲಾಗುವುದು ಎಂದು ಚುನಾವಣೆ ಸಮಯದಲ್ಲಿ ಭರವಸೆ ನೀಡಿದ್ದರು. ಆದರೆ ಮಾಡಲಿಲ್ಲ. ಈ ಕಾರಣಕ್ಕೆ ಬಾಬುರಾವ್ ಚಿಂಚನಸೂರ್ ಅವರು ಬಿಜೆಪಿಯಲ್ಲಿ ನ್ಯಾಯ ಸಿಗುವುದಿಲ್ಲ ಎಂದು ಮತ್ತೆ ನಮ್ಮ ಪಕ್ಷಕ್ಕೆ ಮರಳಿದ್ದಾರೆ ಎಂದು ತಿಳಿಸಿದರು.
ಒಕ್ಕಲಿಗರು ಹಾಗೂ ಲಿಂಗಾಯತರು ಕೂಡ ಕ್ರಮವಾಗಿ 12% ಹಾಗೂ 15% ಮೀಸಲಾತಿ ಹೆಚ್ಚಳಕ್ಕೆ ಆಗ್ರಹ ಮಾಡಿದ್ದು, ಕೇವಲ 2% ನೀಡುವುದಾಗಿ ಸರಕಾರ ಹೇಳಿದೆ. ಅಲ್ಪಸಂಖ್ಯಾತರ ಮೀಸಲಾತಿ ಕಿತ್ತು ಬೇರೆಯವರಿಗೆ ಕೊಟ್ಟಿದ್ದಾರೆ. 2 % ಮೀಸಲಾತಿ ಹೆಚ್ಚಳ ನಾವು ಒಪ್ಪುವುದಿಲ್ಲ. ನಮಗೆ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕೊಡಬೇಕು. ಹೀಗಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಆದೇಶ ವಜಾ ಮಾಡುತ್ತೇವೆ ಎಂದು ಹೇಳಿದರು.ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಮಾಡಿರುವ ಮೀಸಲಾತಿ ಹೆಚ್ಚಳ ಕಾನೂನು ಸಂವಿಧಾನದ 9 ನೇ ಶೆಡ್ಯೂಲ್ ಗೆ ಸೇರಿಸಿಲ್ಲ. ಇವರು ಯಾವುದನ್ನು ಕಾನೂನು ಪ್ರಕಾರ ಮಾಡಿಲ್ಲ ಎಂದು ಅವರು ಟೀಕಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಕ್ಷೇತ್ರದಲ್ಲಿ ಜನ ಗಲಾಟೆ ಮಾಡುತ್ತಿದ್ದಾರೆ ಎಂದರೆ ಸರ್ಕಾರದ ಈ ನಿರ್ಧಾರ ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಅರ್ಥ. ಸರ್ಕಾರ ಇತ್ತೀಚೆಗೆ ತೆಗೆದುಕೊಂಡಿರುವ ಎಲ್ಲಾ ನಿರ್ಧಾರಗಳು ಜನರನ್ನು ಮೂರ್ಖರನ್ನಾಗಿಸುವ ಕ್ರಮ. ಇದರ ಪರಿಣಾಮ ಮುಂದಿನ ಚುನಾವಣೆಯಲ್ಲಿ ತಿಳಿಯಲಿದೆ. ಜನ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಈ ಸರ್ಕಾರದ ತಪ್ಪುಗಳನ್ನು ನಮ್ಮ ಸರ್ಕಾರ ಸರಿಪಡಿಸಿ, ಎಲ್ಲರಿಗೂ ನ್ಯಾಯ ಒದಗಿಸಲಿದೆ ಎಂದು ಭರವಸೆ ನೀಡಿದರು.ಏಪ್ರಿಲ್ 4 ರಂದು ಸಿಇಸಿ ಸಭೆ ನಡೆಯಲಿದ್ದು, ನಾವು ದೆಹಲಿಗೆ ತೆರಳುತ್ತೇವೆ. 2ನೇ ಪಟ್ಟಿಯನ್ನು ನಾನು ಪ್ರಕಟಿಸುವುದಿಲ್ಲ. ಸಭೆಯಲ್ಲಿ ಚರ್ಚೆ ಮಾಡಿ ಮಲ್ಲಿಕಾರ್ಜುನ ಖರ್ಗೆ ಅವರು ತೀರ್ಮಾನ ಮಾಡಲಿದ್ದಾರೆ ಎಂದು ತಿಳಿಸಿದರು.ಪಕ್ಷದಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಯಾವುದೇ ಗೊಂದಲ ಇಲ್ಲ. ಬೇರೆ ಪಕ್ಷಗಳಲ್ಲಿ ಬೆದರಿಕೆ ತಂತ್ರ ನಡೆಯಬಹುದು, ಕಾಂಗ್ರೆಸ್ ಪಕ್ಷದಲ್ಲಿ ನಡೆಯುವುದಿಲ್ಲ. ಬಿಜೆಪಿಯಲ್ಲಿ ಬೆದರಿಕೆ ಇಲ್ಲವೇ? ಅವರು ಪಟ್ಟಿ ಪ್ರಕಟಿಸದಿರುವುದೇಕೆ? ದಿನಾಂಕ ಮುಂದೂಡುತ್ತಿರುವುದೇಕೆ? ಅವರ ಪಕ್ಷದಲ್ಲಿ ಆಂತರಿಕ ಸಮಸ್ಯೆ ಇದೆ. ಜೆಡಿಎಸ್ ನಲ್ಲೂ ಆಂತರಿಕ ಸಮಸ್ಯೆ ಇದೇ ಕಾರಣಕ್ಕೆ ಅನೇಕ ನಾಯಕರು ಕಾಂಗ್ರೆಸ್ ಸೇರಿದ್ದಾರೆ. ಬಿಜೆಪಿಯನ್ನು ಜನ ತಿರಸ್ಕರಿಸಲಿದ್ದಾರೆ ಎಂದು ತಿಳಿಸಿದರು.
ಸಚಿವ ಮುನಿರತ್ನ ಅವರ ಹೊಡೀರಿ ಬಡೀರಿ ಹೇಳಿಕೆ ಬಗ್ಗೆ ಪ್ರತಿಕ್ರಯಿಸಿದ ಅವರು,ಕಾಂಗ್ರೆಸ್ ಪಕ್ಷದಿಂದ ಯಾರೇ ಮತ ಕೇಳಲು ಬಂದರೂ ಹೊಡೆದು ಓಡಿಸಿ ಎಂದು ಹೇಳಿದ್ದಾರೆ. ಈ ಬಗ್ಗೆ ಸಂಸದರು ದೂರು ನೀಡಿದ್ದು, ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ನೋಡೋಣ ಎಂದು ತಿಳಿಸಿದರು.