ಸಂಜೆವಾಣಿ ನ್ಯೂಸ್
ಮೈಸೂರು: ಜು.16:- ನಮಗಿರುವ ಮಾಹಿತಿ ಪ್ರಕಾರ ಮುಂಬರುವ ದಿನಗಳಲ್ಲಿ ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುವುದು ಶೇ.99ರಷ್ಟು ಖಾತರಿಯಾಗಿದೆ ಎಂದು ಜೆಡಿಎಸ್ ವಕ್ತಾರರೂ ಆಗಿರುವ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ಸೇನಾಪಡೆ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್‍ರ 229ನೇ ಜಯಂತಿ ಕಾರ್ಯಕ್ರಮದ ಅಂಗವಾಗಿ ಮಹಾರಾಜ ಪದವಿಪೂರ್ವ ಕಾಲೇಜಿನಲ್ಲಿರುವ ಮುಮ್ಮಡಿಯವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು. ಈ ವೇಳೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಬಿಜೆಪಿ ಬೆಂಬಲದೊಂದಿಗೆ ಎಚ್.ಡಿ.ಕುಮಾರಸ್ವಾಮಿಯವರನ್ನು ಆಯ್ಕೆ ಮಾಡುತ್ತಿರುವ ಚರ್ಚೆಗೆ ಮೇಲಿನಂತೆ ಪ್ರತಿಕ್ರಯಿಸಿದರು. ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುವುದು ಖಾತರಿಯಾಗಿದೆ ಎಂದರು.
ಮುಮ್ಮಡಿರವರ ಕೊಡುಗೆ ನಮ್ಮ ನಾಡಿಗೆ ಅಪಾರ. ಟಿಪ್ಪುವಿನ ಕಾಲಾನಂತರ ಬಹಳ ಕಷ್ಟದಲ್ಲಿದ್ದ ಮೈಸೂರು ಸಂಸ್ಥಾನವನ್ನು ಕಟ್ಟಿ ಬೆಳೆಸಿ ಶ್ರೀರಂಗಪಟ್ಟಣದಲ್ಲಿದ್ದ ರಾಜಧಾನಿಯನ್ನು ಮೈಸೂರಿಗೆ ತಂದರು. ಮೊಟ್ಟ ಮೊದಲು ಶಿಕ್ಷಣಕ್ಕೆ ಹೆಚ್ಚು ಒತ್ತುವರಿಯನ್ನು ಕೊಟ್ಟು ಬಹಳ ಶಿಕ್ಷಣ ಸಂಸ್ಥೆಗಳನ್ನು ತೆರೆದು, ಅದರಲ್ಲೂ ವಿಶೇಷವಾಗಿ ಮಹಾರಾಜ, ಮಹಾರಾಣಿ ಕಾಲೇಜುಗಳನ್ನು ಸ್ಥಾಪಿಸಿ ಎಲ್ಲಾ ರಂಗಕ್ಕೂ ಆದ್ಯತೆ ನೀಡಿದ ರಾಜರ ಸ್ಮರಣಾ ಕಾರ್ಯಕ್ರಮ ಸ್ವಾಗತಾರ್ಹ ಎಂದರು.
ಸಮಾಜ ಸೇವಕ ಡಾ.ರಘುರಾಂ ಕೆ ವಾಜಪೇಯಿ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ.ರಾಮು, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಲಯನ್ ಗೋಲ್ಡ್ ಸುರೇಶ್, ಡಾ.ಪಿ.ಶಾಂತರಾಜೇ ಅರಸ್, ಮಹಾರಾಜ ಕಾಲೇಜಿನ ಪ್ರಾಂಶುಪಾಲ ಉದಯಶಂಕರ್, ಪ್ರಾಧ್ಯಾಪಕರಾದ ಉಮೇಶ್, ಹೇಮಾವತಿ, ಜಗದೀಶ್‍ಗೌಡ, ವಿಜಯೇಂದ್ರ, ಕೃಷ್ಣಯ್ಯ, ಅನಿಲ್, ಚಂದ್ರು, ಅಂಬಾ ಅರಸ್, ನೇಹಾ, ಪ್ರಭಾಕರ್, ಶಿವಲಿಂಗಯ್ಯ, ಪದ್ಮ, ಎಳನೀರು ರಾಮಣ್ಣ, ದರ್ಶನ್ ಗೌಡ, ಮಹಾದೇವ ಸ್ವಾಮಿ, ರವಿ ನಾಯಕ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.