ಬಿಜೆಪಿ ಜತೆಗಿನ ಮೈತ್ರಿಯಿಂದ ಕುಮಾರಸ್ವಾಮಿಯಿಂದ ದಾರಿ ತಪ್ಪಿದ ಹೇಳಿಕೆ: ಸಚಿವ ಎಂ.ಬಿ. ಪಾಟೀಲ

ವಿಜಯಪುರ, ಏ.15:ಗ್ಯಾರಂಟಿ ಯೋಜನೆಗಳಿಂದ ಹಳ್ಳಿ ಮಹಿಳೆಯರು ದಾರಿ ತಪ್ಪಿದ್ದಾರೆ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು,
ಮಹಿಳೆಯರು ದಾರಿ ತಪ್ಪಿದ್ದಾರೆ ಎಂದರೆ ಏನು ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಲಿ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಹಣದಿಂದ ಮಕ್ಕಳನ್ನು ಶಾಲೆಗೆ ಕಳುಹಿಸುವುದು ದಾರಿ ತಪ್ಪಿದಂತೆ ಆಗುತ್ತಾ?
ಅನ್ನಭಾಗ್ಯದಿಂದ ಹಸಿದ ಹೊಟ್ಟೆಗೆ ಊಟ ಮಾಡಿದ್ದು ದಾರಿ ತಪ್ಪಿದಂತೆ ಆಗುತ್ತಾ?
ಒಳ್ಳೆಯ ಬಟ್ಟೆ ಹಾಕಿಕೊಂಡಿದ್ದು ದಾರಿ ತಪ್ಪಿದಂತೆ ಆಗುತ್ತಾ?
ಗ್ಯಾಸ್ ಸಿಲೆಂಡರ್ ಹಾಗೂ ಇತರೆ ವಸ್ತುಗಳ ಬೆಲೆ ಏರಿಕೆ ಮಧ್ಯೆ ಸಮಾಧಾನ ಪಟ್ಟು ಮನೆ ನಡೆಸಿದ್ದು ದಾರಿ ತಪ್ಪಿದಂತೆ ಹೇಗಾಗುತ್ತದೆ ಎಂದು ಕೇಳಿದರು.
ಕುಮಾರಸ್ವಾಮಿ ಬಿಜೆಪಿಗೆ ಜೊತೆ ಮೈತ್ರಿ ಮಾಡಿಕೊಂಡು ದಾರಿ ತಪ್ಪಿದ್ದಾರೆ. ದಾರಿ ತಪ್ಪಿದ ಮೇಲೆ ದಾರಿ ತಪ್ಪಿದ ಹೇಳಿಕೆಗಳನ್ನು ಕೊಡುತ್ತಿದ್ದಾರೆಂದು ಎಂ.ಬಿ. ಪಾಟೀಲ ಕಿಡಿ ಕಾರಿದರು.