ಬಿಜೆಪಿ ಗೆಲುವಿಗೆ ಶಾ ರಣವ್ಯೂಹ

ಹುಬ್ಬಳ್ಳಿ, ಏ.೨೫: ನಿನ್ನೆಯಿಂದ ನಗರದಲ್ಲೇ ಬೀಡುಬಿಟ್ಟಿರುವ ಕೇಂದ್ರ ಗೃಹ ಸಚಿವ ಅಮೀತ ಷಾ ಅವರು ಇಂದೂ ಸಹ ಧಾರವಾಡ, ಗದಗ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಜಯಕ್ಕಾಗಿ ಅನುಸರಿಸಬೇಕಾದ ತಂತ್ರಗಳ ಕುರಿತಂತೆ ಸ್ಥಾನಿಕ ಧುರೀಣರು, ಉಸ್ತುವಾರಿಗಳು, ಅಭ್ಯರ್ಥಿಗಳು ಹಾಗೂ ನಿರ್ವಹಣಾ ಸಮಿತಿ ಸಂಚಾಲಕರೊಂದಿಗೆ ಚರ್ಚೆ ನಡೆಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಷಾ ಅವರು ಧಾರವಾಡ ಹಾಗೂ ಗದಗ ಜಿಲ್ಲೆಗಳ ಪ್ರತಿ ವಿಧಾನಸಭಾ ಕ್ಷೇತ್ರಗಳ ಇಂಚಿಂಚು ವಿವರಗಳನ್ನು ಸಂಗ್ರಹಿಸಿದರೆನ್ನಲಾಗಿದೆ.
ಈ ಎರಡೂ ಜಿಲ್ಲೆಗಳಲ್ಲಿನ ಕ್ಷೇತ್ರಗಳ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳ ಕುರಿತಂತೆ ಅವರು ಮಾಹಿತಿ ಕಲೆ ಹಾಕಿ ಎರಡೂ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ವ್ಯೂಹ ರಚನೆಯ ಮಾರ್ಗದರ್ಶನ ನೀಡಿದರೆಂದು ತಿಳಿದು ಬಂದಿದೆ.ಇಂದು ಮುಂಜಾನೆ ಸಹ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಜರಾತ್, ಮಹಾರಾಷ್ಟ್ರಗಳಿಂದ ಬಂದ ವಿಸ್ತಾರಕರು ಸೇರಿದಂತೆ ಸ್ಥಳಿಯ ಧುರೀಣರೊಂದಿಗೆ ಷಾ ಅವರ ಚರ್ಚೆ ನಡೆಯಿತು.
ಅಲ್ಲದೆ ಹೈವೋಲ್ಟೇಜ್ ಕ್ಷೇತ್ರವೆಂದೇ ಪರಿಣಮಿಸಿರುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಯಾವ ರೀತಿಯಾಗಿ ಚುನಾವಣಾ ಕಾರ್ಯತಂತ್ರ ರೂಪಿಸಬೇಕೆಂಬುದರ ಬಗ್ಗೆ ಚರ್ಚೆಗಳು ಕೂಡ ನಡೆದವು ಎಂದು ತಿಳಿದುಬಂದಿದೆ.
ಈ ಕ್ಷೇತ್ರದಿಂದಲೇ ೬ ಬಾರಿ ಬಿಜೆಪಿ ಪಕ್ಷದಿಂದ ಕಣಕ್ಕಿಳಿದಿದ್ದ ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು, ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ಷಾ ಕಾರ್ಯಕರ್ತರೊಂದಿಗೆ ಚರ್ಚೆಗಳನ್ನು ಸಹ ನಡೆಸಿದರೆನ್ನಲಾಗಿದೆ.
ಇಂದು ಶಾ ಪ್ರಚಾರ:
ಇಲ್ಲಿಂದ ಇಂದು ನೇರವಾಗಿ ಬಾಗಲಕೋಟೆ ಜಿಲ್ಲೆ ತೇರದಾಳಕ್ಕೆ ತೆರಳಿ ಮಧ್ಯಾಹ್ನ ಅಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವ ಷಾ ಮಧ್ಯಾಹ್ನ ೨ ಕ್ಕೆ ದೇವರ ಹಿಪ್ಪರಗಿಯಲ್ಲಿ ನಡೆಯುವ ಸಾರ್ವಜನಿಕ ಸಭಯನ್ನುದ್ದೇಶಿಸಿ ಮಾತನಾಡಿ ಸಂಜೆ ಯಾದಗಿರಿಯಲ್ಲಿ ರೋಡ್ ಶೋ ನಡೆಸಿ ಅಲ್ಲಿಂದ ಕಲಬುರ್ಗಿಗೆ ತೆರಳುವರು.