
ಬೆಂಗಳೂರು, ಮಾ. 25-ರಾಜ್ಯ ಬಿಜೆಪಿ ಕೋರ್ ಕಮಿಟಿಯನ್ನು ಪುನರ್ ರಚಿಸಲಾಗಿದ್ದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಪುನರ್ರಚಿಸಿ ರಾಜ್ಯ ಬಿಜೆಪಿ ಉಸ್ತುವಾರಿ ಹಾಗೂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಆದೇಶ ಇಂದು ಹೊರಡಿಸಿದ್ದಾರೆ.
ರಾಜ್ಯ ಬಿಜೆಪಿ ಕೋರ್ ಕಮಿಟಿ ಪುನಾರಚನೆ ಮಾಡಲಾಗಿದೆ. ಈ ಹಿಂದೆ ಕೋರ್ ಕಮಿಟಿಯಲ್ಲಿ ಇದ್ದ ಹಿರಿಯ ಶಾಸಕ ಸಿ.ಎಂ. ಉದಾಸಿ ಹಾಗೂ ಸಚಿವ ಅರವಿಂದ ಲಿಂಬಾವಳಿ ಅವರನ್ನು ಕೈಬಿಡಲಾಗಿದೆ.
ನಳಿನ್ ಕುಮಾರ್ ಕಟೀಲ್ ನೇತೃತ್ವದ ಕೋರ್ ಕಮಿಟಿಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಡಿ.ವಿ ಸದಾನಂದ ಗೌಡ ಇದ್ದಾರೆ. ಸಚಿವರಾದ ಜಗದೀಶ್ ಶೆಟ್ಟರ್ , ಕೆ.ಎಸ್ ಈಶ್ವರಪ್ಪ, ಡಿಸಿಎಂಗಳಾದ ಗೋವಿಂದ ಕಾರಜೋಳ , ಸಿ.ಎನ್ ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿ, ಆರ್. ಅಶೋಕ್ , ಶ್ರೀರಾಮುಲು ಇದ್ದಾರೆ.
ಜೊತೆಗೆ ನಿರ್ಮಲ್ ಕುಮಾರ್ ಸುರಾನ ( ಬಿಜೆಪಿ ರಾಜ್ಯ ಉಪಾಧ್ಯಕ್ಷ) ಹಾಗೂ ಬಿಪಿ ಅರುಣ್ ಕುಮಾರ್ ( ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಘಟನೆ) ಇವರನ್ನು ಕೋರ್ ಕಮಿಟಿ ಒಳಗೊಂಡಿದೆ. ವಿಶೇಷ ಆಹ್ವಾನಿತರಾಗಿ ಅರುಣ್ ಸಿಂಗ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಡಿಕೆ ಅರುಣ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಇದ್ದಾರೆ.