ಬಿಜೆಪಿ ಕಿತ್ತೊಗೆಯಲು ಕೈ ನಾಯಕರ ಪಣ

ದಾವಣಗೆರೆ,ಆ.೪- ಬೆಣ್ಣೆ ನಗರಿ ದಾವಣಗೆರೆಯಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ೭೫ನೇ ಜನ್ಮದಿನದ ಅಮೃತ ಮಹೋತ್ಸವದಲ್ಲಿ ಕೋಮುವಾದಿ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವ ಸಂಕಲ್ಪವನ್ನು ಕಾಂಗ್ರೆಸ್ ನಾಯಕರು ತೊಟ್ಟರು. ಕಾಂಗ್ರೆಸ್‌ನ ಯುವರಾಜ ರಾಹುಲ್‌ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ನಾಯಕರು ಈ ಅಮೃತ ಮಹೋತ್ಸವದಲ್ಲಿ ಒಗ್ಗಟ್ಟು ಪ್ರದರ್ಶಿಸುವ ಜತೆಗೆ ಕಾಂಗ್ರೆಸ್‌ನ ವಿರಾಟ್ ಶಕ್ತಿ ಪ್ರದರ್ಶನದ ಅನಾವರಣವೂ ಆಯಿತು.
ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯರವರಿಗೆ ನಾಯಕತ್ವ ಎಂಬ ಸಂದೇಶ ರವಾನಿಸುವ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯರವರ ಅಭಿಮಾನಿಗಳು ಹಮ್ಮಿಕೊಂಡ ಅಮೃತೋತ್ಸವ ಸಿದ್ದರಾಮಯ್ಯರವರ ವೈಭವೀಕರಣದ ಜತೆಗೆ ಕಾಂಗ್ರೆಸ್ ಪಕ್ಷಕ್ಕೂ ನವಚೈತನ್ಯ ಹುರುಪು ತುಂಬುವುದರಲ್ಲಿ ಯಶಸ್ವಿಯಾಯಿತು.
ನಾಯಕತ್ವಕ್ಕಾಗಿ ಪೈಪೋಟಿ ನಡೆಸಿದ್ದ ಸಿದ್ದರಾಮಯ್ಯ ಹಾಗೂ ಕೆಪೆಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಮ್ಮ ಮಧ್ಯೆ ಏನೂ ಇಲ್ಲ ಎಂಬಂತೆ ಪರಸ್ಪರ ಆಲಂಗಿಸಿಕೊಂಡು ಒಗ್ಗಟ್ಟು ತೋರಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರಲು ಸಾಮೂಹಿಕ ನಾಯಕತ್ವದಲ್ಲಿ ಶ್ರಮಿಸುತ್ತೇವೆ ಎಂಬ ಸಂದೇಶವನ್ನು ನೀಡಿದರು.


ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ರವರ ನಡೆಯಿಂದ ಸಂತುಷ್ಟಗೊಂಡ ರಾಹುಲ್‌ಗಾಂಧಿ ಅವರು, ಸಿದ್ದರಾಮಯ್ಯ ಮತ್ತು ಡಿಕೆಶಿ ನಾಯಕತ್ವದಲ್ಲೇ ಮುಂದಿನ ಚುನಾವಣೆಗಳನ್ನು ಎದುರಿಸಲಾಗುವುದು ಎಂದು ಘೋಷಿಸಿ ಸಿದ್ದರಾಮಯ್ಯರವರ ವ್ಯಕ್ತಿತ್ವವನ್ನು ಇಷ್ಟಪಡುತ್ತೇನೆ, ಬಡವರ ಬಗೆಗಿನ ಅವರ ಕಳಕಳಿ, ಬದ್ಧತೆ ಬಗ್ಗೆ ಹೆಮ್ಮೆ ಇದೆ, ಅವರ ಆದರ್ಶಗಳನ್ನು ನಾನು ಸ್ವಾಗತಿಸುತ್ತೇನೆ ಎಂದರು. ಹಾಗೆಯೇ ಡಿ.ಕೆ ಶಿವಕುಮಾರ್‌ರವರ ಸಂಘಟನಾ ಶಕ್ತಿಯನ್ನು ಹೊಗಳಿದ ರಾಹುಲ್‌ಗಾಂಧಿ, ಡಿ.ಕೆ ಶಿವಕುಮಾರ್‌ರವರ ನೇತೃತ್ವದಲ್ಲಿ ಪಕ್ಷ ಉತ್ತಮವಾಗಿ ಮುನ್ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಅವರು ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆಶಿ ವೇದಿಕೆ ಮೇಲೆ ತಬ್ಬಿಕೊಂಡಿರುವುದು ನನಗೆ ಖುಷಿ ನೀಡಿದೆ ಎಂದರು.
ಬಿಜೆಪಿ ಭ್ರಷ್ಟ ಮತ್ತು ಕೋಮುವಾದಿ ಸರ್ಕಾರವನ್ನು ಕೊನೆಗಾಣಿಸಲು ರಾಜ್ಯದ ಜನತೆ ಪಣ ತೊಡುವಂತೆ ಸಿದ್ದರಾಮಯ್ಯರವರು ದಾವಣಗೆರೆಯಲ್ಲಿ ನಡೆದ ತಮ್ಮ ೭೫ನೆ ಹುಟ್ಟುಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಜನರಲ್ಲಿ ಮನವಿ ಮಾಡಿದರು.
ಜನ ಬದಲಾವಣೆ ಬಯಸುತ್ತಿದ್ದಾರೆ. ೨೦೨೩ರಲ್ಲಿ ರಾಜ್ಯದಲ್ಲಿ ಮತ್ತು ೨೦೨೪ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.
ಮುಂದಿನ ವಿಧಾನಸಭಾ ಚುನಾವಣೆಯನ್ನು ನಾವೆಲ್ಲ ಸಿದ್ದರಾಮಯ್ಯರವರ ಮುಂದಾಳತ್ವದಲ್ಲಿ ಸಾಮೂಹಿಕ ನಾಯಕತ್ವದಲ್ಲೇ ಎದುರಿಸಬೇಕು ಎಂಬ ತೀರ್ಮಾನ ಮಾಡಿದ್ದೇವೆ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಸಿದ್ದರಾಮಯ್ಯರವರ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆಯನ್ನು ಎದುರಿಸಿ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆದಾಗಲೇ ರಾಜ್ಯಕ್ಕೆ ನೆಮ್ಮದಿ ಎಂದರು.
ಅವಕಾಶ ನಿಮ್ಮ ಮನೆ ಬಾಗಿಲಿಗೆ ಬಂದಿದೆ, ಹೊಸ ಬೆಳಕು ಬರುತ್ತಿದೆ, ಅಧಿಕಾರದ ಲಕ್ಷ್ಮಿ ಮನೆ ಬಾಗಿಲಿಗೇ ಬರುತ್ತಿದೆ. ಎಲ್ಲರನ್ನೂ ಸೇರಿಸಿಕೊಂಡು ಇತಿಹಾಸ ಸೃಷ್ಟಿಸಬೇಕು, ಬಿಜೆಪಿ ಸರ್ಕಾರವನ್ನು ಕಿತ್ತುಹಾಕಿ, ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರೋಣ ಆಗಲೇ ಇಡೀ ರಾಜ್ಯಕ್ಕೆ ನೆಮ್ಮದಿ ಸಿಗಲಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.