ಬಿಜೆಪಿ ಕಾರ್ಯಕರ್ತರ ಪಕ್ಷ : ಕಟೀಲು

ಹುಬ್ಬಳ್ಳಿ, ಏ ೨೬: ನಮ್ಮದು ಕಾರ್ಯಕರ್ತರ ಪಕ್ಷ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ ಕಟೀಲು ಘಂಟಾಘೋಷವಾಗಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಪಕ್ಷದಲ್ಲಿ ೭೫ ಹೊಸ ಮುಖಗಳಿಗೆ ಅವಕಾಶ ಮಾಡಿ ಕೊಡಲಾಗಿದೆ ಎಂದು ತಿಳಿಸಿದರು.
ಈ ಬಾರಿ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಕೊಡಲಾಗಿದೆ. ಹುಬ್ಬಳ್ಳಿಯಂತಹ ಕ್ಷೇತ್ರದಲ್ಲಿ ಹತ್ತಾರು ವರ್ಷಕಾಲ ಕೆಲಸ ಮಾಡಿದ ಮಹೇಶ್ ಟೆಂಗಿನಕಾಯಿಯವರಿಗೆ ಟಿಕೆಟ್ ಕೊಡಲಾಗಿದೆ. ನರೇಂದ್ರ ಮೋದಿ ನೇತ್ವತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅನೇಕ ಜನಪರ ಯೋಜನೆಗಳು ಜಾರಿಯಾಗಿವೆ. ಜನರ ಅಭಿಪ್ರಾಯ ಬಿಜೆಪಿ ಪರ ಇದೆ ಎಂದು ಅವರು ನುಡಿದರು.
ಬಿಜೆಪಿ ಎಲ್ಲ ವರ್ಗಗಳ ಜೊತೆ ಸಂವಾದ ನಡೆಸಲಿದೆ. ಲಿಂಗಾಯತ ಸಮುದಾಯದ ಸಮಸ್ಯೆ ಬಗೆಹರಿಸಲೂ ಸಂವಾದ ಕೈಗೊಳ್ಳಲಿದೆ ಎಂದು ತಿಳಿಸಿದರು.
ಇಡೀ ರಾಜ್ಯದಲ್ಲಿ ಕೇಂದ್ರದ, ರಾಜ್ಯದ ನಾಯಕರು ಪ್ರಚಾರ ನಡೆಸಿದ್ದು ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಮತ್ತೊಮ್ಮೆ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದ ಅವರು, ಕಾಂಗ್ರೆಸ್ ೮೦ ಸಂಖ್ಯೆ ದಾಟದು, ಜೆಡಿಎಸ್ ಒಂದು ಜಿಲ್ಲೆಗೆ ಸೀಮಿತ. ಆದರೆ ಬಿಜೆಪಿ ಸರ್ವವ್ಯಾಪಿ ಎಂದು ನುಡಿದರು.