ಕಲಬುರಗಿ,ಮಾ.24: ಆಳಂದ್ ತಾಲ್ಲೂಕಿನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಜೀವ ಬೆದರಿಕೆ ಹಾಕಿ ಗೂಂಡಾ ವರ್ತನೆ ತೋರಿದ ಮಾಜಿ ಶಾಸಕ ಬಿ.ಆರ್. ಪಾಟೀಲ್ ಅವರ ಬೆಂಬಲಿಗ ಗುರುಶರಣ್ ಪಾಟೀಲ್ ಅವರನ್ನು ಕೂಡಲೇ ಬಂಧಿಸಿ ಕಾನೂನಿನ ಶಿಕ್ಷೆಗೆ ಒಳಪಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ಬಿಜೆಪಿ ಯುವ ಮುಖಂಡ ಹರ್ಷಾನಂದ್ ಗುತ್ತೇದಾರ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆಳಂದ್ ತಾಲ್ಲೂಕಿನ ಬಿಜೆಪಿ ಕಾರ್ಯಕರ್ತರಾದ ಕೋರಹಳ್ಳಿ ತಾಂಡಾದ ದಿನೇಶ್ ತಂದೆ ಸೇವು ಪವಾರ್ ಹಾಗೂ ಶಶಿಕಾಂತ್ ತಂದೆ ಶಾಮರಾವ್ ಪವಾರ್ ಅವರಿಗೆ ಮೊಬೈಲ್ ಕರೆಯ ಮೂಲಕ ಗುರುಶರಣ್ ಪಾಟೀಲ್ ಅವರು ಜೀವ ಬೆದರಿಕೆ ಹಾಕಿರುವ ಕುರಿತು ಧ್ವನಿಸುರುಳಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಕಳೆದ 20ರಂದು ಸೋಮವಾರ ರಾತ್ರಿ 8 ಗಂಟೆಗೆ ಕೊರಳ್ಳಿ ಗ್ರಾಮದ ಗುರುಶರಣ್ ಪಾಟೀಲ್ ಅವರು ದಿನೇಶ್ ಸೇವು ಪವಾರ್ ಅವರಿಗೆ ಮೊಬೈಲ್ ಕರೆ ಮಾಡಿ ಬಿಜೆಪಿ ಕಾರ್ಯಕ್ರಮಕ್ಕೆ ನೀನು ಶಶಿಕಾಂತ್ ಪವಾರ್‍ಗೆ ಏಕೆ ಕರೆದುಕೊಂಡು ಹೋಗಿದ್ದಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಿನ್ನ ಮೇಲೆ ಪ್ರಕರಣ ದಾಖಲಿಸಿ ನಿನ್ನ ಆಸ್ತಿಪಾಸ್ತಿ ಹಾಳಾಗುವಂತೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಲ್ಲದೇ ನಿನ್ನನ್ನು ಹೊಸಕಿ ಹಾಕುತ್ತೇನೆ ಎಂದು ಜೀವ ಭಯ ಒಡ್ಡಿದ್ದಾರೆ ಎಂದು ದೂರಿದರು.
ಶಶಿಕಾಂತ್ ಪವಾರ್ ಅವರಿಗೆ ಮಾರ್ಚ್ 21ರಂದು ಬೆಳಿಗ್ಗೆ 11-30 ಗಂಟೆಗೆ ಕೊರಳ್ಳಿ ತಾಂಡಾದಿಂದ ಕೊಡಲ ಹಂಗರಗಾ ಮಾರ್ಗವಾಗಿ ಆಳಂದ್‍ಕ್ಕೆ ಬರುವಾಗ ರಾಜ್ಯ ಹೆದ್ದಾರಿಯಲ್ಲಿ ಗಾಡಿ ನಿಲ್ಲಿಸಿ ಆ ಬಿಜೆಪಿಯ ವೀರಶೈವ ಸಮಾಜದ ಕಾರ್ಯಕ್ರಮಕ್ಕೆ ನೀನು ಏಕೆ ಹೋಗಿದ್ದಿ ಎಂದು ಕೇಳಿದರು. ಅದಕ್ಕೆ ಅವರು ಗೌಡ್ರೇ ನಿಮ್ಮಿಂದ ನಮ್ಮ ಓಣಿಗೆ ಯಾವುದೇ ರೀತಿಯ ಕೆಲಸ ಆಗಿಲ್ಲ. ಆದ್ದರಿಂದ ನಮಗೆ ಯಾರು ಸಹಾಯ ಮಾಡುತ್ತಾರೋ ಅವರ ಕಡೆ ಹೋಗುತ್ತೇನೆ ಎಂದಿದ್ದಕ್ಕೆ ಅವಾಚ್ಯ ಹಾಗೂ ಅಶ್ಲೀಲವಾಗಿ ಬೈದು ಹಲ್ಲೆಗೆ ಮುಂದಾದರು. ಅಲ್ಲದೇ ಜೀವ ಭಯ ಹಾಕಿ, ನಾಲ್ಕು ವರ್ಷಗಳಲ್ಲಿ ನಿನ್ನ ಮೇಲೆ ಪ್ರಕರಣ ದಾಖಲಿಸಿ ನಿನ್ನ ಆಸ್ತಿ, ಪಾಸ್ತಿ ಹಾಳಾಗುವಂತೆ ಮಾಡುತ್ತೇನೆ ಎಂಬ ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದರು.
ಮಾಜಿ ಶಾಸಕ ಬಿ.ಆರ್. ಪಾಟೀಲ್ ಅವರು ಮುಂಬರುವ ಚುನಾವಣೆಯಲ್ಲಿ ಸೋಲುವ ಭೀತಿಯಿಂದಾಗಿ ಅವರ ಬೆಂಬಲಿಗರು ಬಿಜೆಪಿ ಕಾರ್ಯಕರ್ತರ ಮೇಲೆ ಗೂಂಡಾ ವರ್ತನೆ ತೋರುತ್ತಿದ್ದಾರೆ. ಈಗಾಗಲೇ ಜೀವ ಬೆದರಿಕೆ ಹಾಕಿರುವ ಕುರಿತಂತೆ ಪೋಲಿಸರಿಗೆ ದೂರು ಸಲ್ಲಿಸಿದ್ದೇವೆ. ಎರಡು ಪ್ರತ್ಯೇಕ ದೂರುಗಳನ್ನು ಸಲ್ಲಿಸಲು ಹೇಳಿದ್ದು ಅವರು ಆ ದೂರುಗಳನ್ನು ಕೊಡಲಿದ್ದಾರೆ. ಆದ್ದರಿಂದ ಜೀವ ಬೆದರಿಕೆ ಹಾಕಿರುವ ಗುರುಶಾಂತ್ ಪಾಟೀಲ್ ಅವರನ್ನು ಕೂಡಲೇ ಬಂಧಿಸುವಂತೆ ಹಾಗೂ ಜೀವ ಭಯದಲ್ಲಿರುವ ಬಿಜೆಪಿ ಕಾರ್ಯಕರ್ತರಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಮಾಜಿ ಶಾಸಕ ಬಿ.ಆರ್. ಪಾಟೀಲ್ ಅವರು ಕೂಡಲೇ ಗೂಂಡಾ ವರ್ತನೆಯ ಗುರುಶರಣ್ ಪಾಟೀಲ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತ್ತುಗೊಳಿಸಬೇಕು. ಇಲ್ಲದೇ ಹೋದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ಮಾತನಾಡುವ ನೈತಿಕ ಹಕ್ಕು ಕಳೆದುಕೊಂಡಂತೆ ಆಗುತ್ತದೆ ಎಂದು ಅವರು ಎಚ್ಚರಿಸಿದರು.