ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ.20 :- ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕೇಶ ವಿ ನಾಯಕ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ಆಗಮಿಸುತ್ತಿದ್ದ ಹಾರಕಭಾವಿ ಗ್ರಾಮದ ಬಿಜೆಪಿ ಸಕ್ರಿಯ ಕಾರ್ಯಕರ್ತ ಹಡಪದ ತಿಪ್ಪೇಸ್ವಾಮಿಗೆ ಹೃದಯಾಘಾತವಾಗಿದ್ದು ಕೂಡ್ಲಿಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಿನ್ನೆ ಜರುಗಿದೆ ಎಂದು ಗ್ರಾಮದ ಬಿಜೆಪಿ ಮುಖಂಡ ಸಂಗಳ್ ಕೊಟ್ರೇಶ ತಿಳಿಸಿದರು.
ಹಾರಕಭಾವಿಯ ಸಕ್ರಿಯ ಬಿಜೆಪಿ ಕಾರ್ಯಕರ್ತನಾಗಿದ್ದ ಹಡಪದ ತಿಪ್ಪೇಸ್ವಾಮಿ (48) ಹೃದಯಾಘಾತದಿಂದ ಸಾವನ್ನಪ್ಪಿರುವ ದುರ್ದೈವಿಯಾಗಿದ್ದು ಈತನು ಬುಧವಾರ ಬೆಳಿಗ್ಗೆ ಹಾರಕಭಾವಿ ಗ್ರಾಮದಿಂದ ವಾಹನದಲ್ಲಿ ಕೂಡ್ಲಿಗಿ ಬಿಜೆಪಿ ಅಭ್ಯರ್ಥಿ ಲೋಕೇಶ ನಾಯಕ ನಾಮಪತ್ರ ಸಲ್ಲಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಗ್ರಾಮದ ಜನರೊಂದಿಗೆ ಬಂದಿದ್ದು ಮೊರಬದ ಕ್ರಾಸ್ ಬಳಿ ಬೇರೆ ವಾಹನ ಹತ್ತುವಾಗ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದು ತಕ್ಷಣ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ತಿಪ್ಪೇಸ್ವಾಮಿ ಮೃತದೇಹವನ್ನು ಹಾರಕಭಾವಿ ಗ್ರಾಮಕ್ಕೆ ಕೊಂಡೊಯ್ಯೋದಿದ್ದು ಇಂದು ಅಂತ್ಯಕ್ರಿಯೆ ನಡೆಯಲಿದೆ .
ಲೋಕೇಶ್ ವಿ ನಾಯಕ ಸಾಂತ್ವನ : ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ಆಗಮಿಸುತ್ತಿದ್ದ ಬಿಜೆಪಿ ಸಕ್ರಿಯ ಕಾರ್ಯಕರ್ತ ಹಾರಕಭಾವಿ ತಿಪ್ಪೇಸ್ವಾಮಿಯ ಹೃದಯಾಘಾತದ ಸಾವಿನ ಸುದ್ದಿ ತಿಳಿದ ಬಿಜೆಪಿ ಅಭ್ಯರ್ಥಿ ಲೋಕೇಶ ವಿ ನಾಯಕ ಕಂಬನಿ ಮಿಡಿದರು ಹಾಗೂ ಗ್ರಾಮದ ಅವರ ಮನೆಗೆ ಭೇಟಿ ನೀಡಿ ಪತ್ನಿ ಹಾಗೂ ಅವರ ಕುಟುಂಬಕ್ಕೆ ಸಾಂತ್ವನ ನೀಡಿದರು. ಈ ಸಂದರ್ಭದಲ್ಲಿ ಹಾರಕಭಾವಿ ಬಿಜೆಪಿ ಮುಖಂಡ ಸಂಗಳ್ ಕೊಟ್ರೇಶ, ಚಿತ್ರೇಶ, ಹೆಚ್ ರಮೇಶ, ಪಂಚಮಸಾಲಿ ಸಮುದಾಯದ ತಾಲೂಕು ಅಧ್ಯಕ್ಷ ಹೆಚ್ ರೇವಣ್ಣ, ಕೂಡ್ಲಿಗಿ ಗುಳಿಗಿ ವೀರೇಂದ್ರ, ಹುಡೇಂ ಪಾಪನಾಯಕ, ಹುಲಿಕೆರೆ ರಮೇಶ ಹಾಗೂ ಇತರರು ಇದ್ದರು.