ಬಿಜೆಪಿ ಕಚೇರಿಯಿಂದ ಬಸವ ಫೋಟೋ ತೆಗೆದಿದ್ದಕ್ಕೆ ಪ್ರೀಯಾಂಕ್ ಕಿಡಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಏ.೧೩:ಬಿಜೆಪಿ ಕಚೇರಿಯಿಂದ ಬಸವಣ್ಣ, ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ವಾಲ್ಮೀಕಿ ಅವರ ಫೋಟೊವನ್ನು ತೆಗೆದು ಎಸೆದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ಖರ್ಗೆ ಅವರು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಎಂಬ ಮನುವಾದದ ಕೂಸುಗಳಿಗೆ ಬುದ್ಧ, ಬಸವ,ಅಂಬೇಡ್ಕರ್ ಅವರು ಬೆಂಕಿಯಂತೆ ಭಾಸವಾಗುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು ಬಸವಣ್ಣ, ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ವಾಲ್ಮೀಕಿ ಅವರ ಫೋಟೊವನ್ನು ಬಿಜೆಪಿ ಕಚೇರಿಯಿಂದ ತೆಗೆದು ಎಸೆದ ಕೇಂದ್ರ ಸಚಿವ ಪ್ರಹ್ಲಾದ್‌ಜೋಶಿ ಅವರ ಮೂಲಕ ಇಡೀ ಬಿಜೆಪಿಯ ಸಮಾನತೆಯ ವಿರೋಧಿ ಮನಃಸ್ಥಿತಿ ಅನಾವರಣವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಗೆ ಲಿಂಗಾಯತರ, ದಲಿತರ, ಹಿಂದುಳಿದ ವರ್ಗದವರ,ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಏಳಿಗೆಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಅಂಬೇಡ್ಕರ್‌ಅವರ ಸಂವಿಧಾನದ ನೆರವಿನಲ್ಲೇ ಬದುಕುತ್ತಿರುವ ಜೋಶಿ ಅವರು, ಅದೇ ಅಂಬೇಡ್ಕರ್ ಅವರ ಫೋಟೊವನ್ನು ಕಿತ್ತೆಸೆದಿದ್ದು, ಉಂಡ ತಟ್ಟೆಯಲ್ಲಿ ಮಣ್ಣು ಹಾಕಿದಂತೆ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ಜೋಶಿ ಅವರೇ ಬಸವಣ್ಣ ಅಂಬೇಡ್ಕರ್ ಹಾಗೂ ವಾಲ್ಮೀಕಿ ಅವರಿಗೆ ಮಾಡಿದ ಈ ಮಹಾ ಅವಮಾನಕ್ಕೆ ಕನ್ನಡಿಗರು ನಿಮ್ಮನ್ನು ಮಾತ್ರವಲ್ಲ ಇಡಿ ಬಿಜೆಪಿಯನ್ನು ನಾಮಾವಶೇಷ ಮಾಡಲಿದ್ದಾರೆ ಎಂದು ಪ್ರಿಯಾಂಕಖರ್ಗೆ ಟ್ವೀಟ್‌ನಲ್ಲಿ ಹೇಳಿದ್ದಾರೆ.