ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡ ಅಷ್ಠಗಿಗೆ : ಶುಭ ಹಾರೈಸಿದ ಮಹಾಗಾಂವ ಶ್ರೀಗಳು

ಕಲಬುರಗಿ: ಮಾ. ೨೯: ಕಲ್ಯಾಣ ಕರ್ನಾಟಕ ಭಾಗದ ಕ್ರಿಯಾಶೀಲ ಯುವಕ, ದಲಿತ ಚಳವಳಿಯ ಹೋರಾಟಗಾರ, ಹಿಂದುಳಿದವರ, ಬಡವರ, ಮತ್ತು ನೊಂದವರ ಪರವಾಗಿ ಕೆಲಸ ಮಾಡುವ ಅಂಬಾರಾಯ ಅಷ್ಠಗಿಯವರನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ನೇಮಕ ಮಾಡಿರುವುದು ಸಂತಸ ತಂದಿದೆ ಎಂದು ಮಹಾಗಾಂವ ಕಳ್ಳಿಮಠದ ಗುರುಲಿಂಗ ಶಿವಾಚಾರ್ಯರು ನುಡಿದರು.

ಶ್ರೀಗಳ ಆಶೀರ್ವಾದ ಪಡೆಯಲು ಪಕ್ಷದ ಮುಖಂಡರೊಂದಿಗೆ ಶ್ರೀ ಮಠಕ್ಕೆ ಭೇಟಿ ನೀಡಿದ ಅಂಬಾರಾಯ ಅಷ್ಠಗಿಯವರನ್ನು ಆತ್ಮೀಯವಾಗಿ ಸನ್ಮಾನಿಸಿ, ಆಶೀರ್ವಚನ ನೀಡಿದ ಅವರು, ಅಷ್ಠಗಿಯವರು ತಮ್ಮ ಹೋರಾಟದ ದಿನಗಳಿಂದ ನಮ್ಮ ಹಾಗೂ ಅನೇಕ ಮಠಾಧೀಶರ ಜೊತೆಗೆ ನಿರಂತರ ಸಂಪರ್ಕ ಇಟ್ಟುಕೊಂಡವರು, ಈ ಭಾಗದಲ್ಲಿ ಬಡವರ, ನೊಂದವರ ಪರವಾಗಿ ಹೋರಾಟ ಮಾಡಿ ನ್ಯಾಯ ಒದಗಿಸಿದವರು. ನಂತರ ತಾಲ್ಲೂಕು, ಜಿಲ್ಲಾ ಪಂಚಾಯತ ಅಧ್ಯಕ್ಷರಾಗಿ ಅನೇಕ ಅಭಿವೃದ್ಧಿ ಕೆಲಸಗಳು ಮಾಡಿ ಜಿಲ್ಲೆಯಲ್ಲಿ ಹೆಸರುವಾಸಿಯಾಗಿ, ಅಲ್ಪ ಸಮಯದಲ್ಲೇ ಬಿಜೆಪಿಯ ವರಿಷ್ಠರ ವಿಶ್ವಾಸಗಳಿಸಿ ರಾಜ್ಯ ಮಟ್ಟದಲ್ಲಿ ಗುರುತಿಸುವಂತಾಗಿದ್ದಾರೆ.
ಮುಂದಿನ ದಿನಗಳಲ್ಲಿ ಪಕ್ಷ ನೀಡಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ ಇನ್ನೂ ಉತ್ತುಂಗಕ್ಕೆ ಏರಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಷ್ಠಗಿ ಇಂತಹ ಗುರುತರ ಜವಾಬ್ದಾರಿ ವಹಿಸಿದ ಪಕ್ಷದ ವರಿಷ್ಠರಿಗೆ ಧನ್ಯವಾದ ಸಲ್ಲಿಸಿ, ಯಶಸ್ವಿಯಾಗಿ ಬೇರು ಮಟ್ಟದಿಂದ ಪಕ್ಷದ ಸಂಘಟನೆ ಮಾಡುತ್ತೇನೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡಿರುವ ದಲಿತ ಪರವಾದ ಯೋಜನೆಗಳು, ಡಾ. ಬಿ.ಆರ್ ಅಂಬೇಡ್ಕರ್ ಅವರ ಬಗ್ಗೆ ನಮ್ಮ ಸರ್ಕಾರ ಹೊಂದಿರುವ ಗೌರವವನ್ನು, ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ೫ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿದ್ದನ್ನು ಹಳ್ಳಿ ಹಳ್ಳಿಗೆ ತಲುಪಿಸಬೇಕಿದೆ ಮತ್ತು ಬಿ ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ದಲಿತ ಪರ ಯೋಜನೆಗಳನ್ನು ದಲಿತ ಸಮುದಾಯಗಳಿಗೆ ತಲುಪಿಸಲು ಶ್ರಮಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ವಿವಿ ಸೆನೆಟ್ ಸದಸ್ಯ ರಾಜು ಕಗ್ಗನಮಡಿ, ಪ್ರೊ ಯಶವಂತರಾಯ್ ಅಷ್ಠಗಿ, ಡಾ. ಗುಂಡಪ್ಪ ಸಿಂಗೆ, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ, ಕಮಲಾಪುರ ಮಂಡಲ ಬಿಜೆಪಿ ಕಾರ್ಯದರ್ಶಿ ಅಂಬರೀಶ್ ಹರಸೂರ ಇದ್ದರು.