ಬಿಜೆಪಿ ಎಂದರೇ ಭ್ರಷ್ಟಾಚಾರ ಪಕ್ಷ – ಸಿದ್ದರಾಮಯ್ಯ ಆರೋಪ

ರಾಯಚೂರು.ಏ.೧೧- ಮಸ್ಕಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಹಣ ಹಂಚುವಿಕೆ ಪ್ರಕರಣಕ್ಕೆ ಸಂಬಂಧಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದರು.
ಅವರಿಂದು ಮುದುಗಲ್‌ನಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಬಿಜೆಪಿ ಎಂದರೇ ಭ್ರಷ್ಟಚಾರ ಜನತಾ ಪಕ್ಷವಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಎದುರಿಸಲಾಗದೇ, ಹಣ ಹಂಚುವ ಮೂಲಕ ಚುನಾವಣಾ ಅಕ್ರಮಕ್ಕೆ ನಿಂತಿದೆ. ಈ ಬಗ್ಗೆ ದಾಖಲೆ ಸಮೇತ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಸುಳ್ಳು ಹೇಳುವುದರಲ್ಲಿ ನಿಸ್ಸಿಮರು ಎಂದು ತೀವ್ರವಾಗಿ ಟೀಕಿಸಿದ ಅವರು, ಮಸ್ಕಿ ಸೇರಿದಂತೆ ಬೆಳಗಾವಿ, ಬಸವಕಲ್ಯಾಣ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತವೆಂದರು.
ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸುಲಭವಾಗಿ ಗೆಲ್ಲುವುದಾಗಿದ್ದರೇ, ರಾಜ್ಯದ ಸಂಪುಟ ಸಚಿವರೇ ಇಲ್ಲಿ ಕೂರುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ ಅವರು, ಈ ಉಪ ಚುನಾವಣೆಯಲ್ಲಿ ಜನ ಬಿಜೆಪಿಯನ್ನು ನಂಬುತ್ತಿಲ್ಲ ಎನ್ನುವ ಕಾರಣಕ್ಕೆ ಇಡೀ ಸರ್ಕಾರವೇ ಮಸ್ಕಿಯಲ್ಲಿ ಬೀಡು ಬಿಟ್ಟಿದೆಂದರು. ಆರನೇ ವೇತನ ಆಯೋಗ ಅನುಷ್ಠಾನಕ್ಕೆ ಒತ್ತಾಯಿಸಿ, ಮುಷ್ಕರದಲ್ಲಿ ತೊಡಗಿದ ಸಾರಿಗೆ ಇಲಾಖೆಯ ನೌಕರರ ವಿರುದ್ಧ ಎಸ್ಮಾ ಜಾರಿ ಸರ್ಕಾರದ ಮೂರ್ಖತನದ ಪ್ರತೀಕ. ಎಲ್ಲವನ್ನೂ ಕಾನೂನು ಮೂಲಕ ಪರಿಹರಿಸುವುದು ಸಾಧ್ಯವಿಲ್ಲ. ಮಾತುಕತೆ ಮೂಲಕ ಈ ಸಮಸ್ಯೆ ಪರಿಹರಿಸಿಕೊಳ್ಳುವತ್ತ ಗಮನ ಹರಿಸಬೇಕೆಂದು ಹೇಳಿದರು.