
ಬೆಂಗಳೂರು,ಮೇ.23-ರಾಜ್ಯದಲ್ಲಿ ಕಳೆದ ಮೂರುವರೆ ವರ್ಷದ ಡಬಲ್ ಎಂಜಿನ್ ಸರಕಾರದ ಆಳ್ವಿಕೆಯಲ್ಲಿ ಉತ್ತಮ ಆಡಳಿತ ಮಾಯವಾಗಿ, ಭ್ರಷ್ಟಾಚಾರದ ರಾಜಧಾನಿ ಎಂಬ ಕಳಂಕ ಬಂದಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಂದಿಲ್ಲಿ ಹೇಳಿದ್ದಾರೆ.
ಡಬಲ್ ಇಂಜಿನ್ ಸರಕಾರ ಇದ್ದರೂ, 26 ಬಿಜೆಪಿ ಎಂಪಿಗಳು ಇದ್ದರೂ, ರಾಜ್ಯದವರೇ ಕೇಂದ್ರದಲ್ಲಿ ಹಣಕಾಸು ಸಚಿವರಾಗಿದ್ದರೂ ನಮಗೆ ಅನ್ಯಾಯವಾಗಿದೆ. ಆಡಳಿತ ವಿಫಲವಾಗಿದೆ ಎಂದಿದ್ದಾರೆ.
ಸರಕಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯಕ್ಕೆ ಅಂಟಿರುವ ಕಳಂಕವನ್ನು ತೊಳೆದು ಹಾಕಲು ನೀವು ನಮ್ಮ ಜತೆ ಕೈ ಜೋಡಿಸಬೇಕು. ರಾಜ್ಯದಲ್ಲಿ ಬದಲಾವಣೆ ಕಾಣುವಂತಹ ಆಳ್ವಿಕೆ ನೀಡಬೇಕು. ನಿಮ್ಮಿಂದ ಪಾಸಿಟಿವ್ ಸಂದೇಶ ತಾಲೂಕು, ಗ್ರಾಮ ಮಟ್ಟದವರೆಗೂ ಹೋಗಬೇಕು ಎಂದು ಹೇಳಿದರು.
ರಾಜಕೀಯ ದ್ವೇಷದಿಂದ ನನ್ನ ಮೇಲೆ ಸಿಬಿಐ ಸೇರಿದಂತೆ ತನಿಖಾ ಸಂಸ್ಥೆಗಳನ್ನು ಪ್ರಯೋಗ ಮಾಡಲಾಗಿದೆ. ಚುನಾವಣೆ ಸಮಯದವರೆಗೂ ಈ ಕಾಟ ತಪ್ಪಲಿಲ್ಲ. ಆದರೆ ಜನ ನಮ್ಮ ಪರ ನಿಂತಿದ್ದಾರೆ ಎಂದು ಹೇಳಿದ್ದಾರೆ.
ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ನಾವು ಉತ್ತಮ ಆಡಳಿತ, ಸರಕಾರ ನೀಡಲು ಬದ್ಧರಾಗಿದ್ದೇವೆ. ಅದರಲ್ಲಿ ನಿಮ್ಮ ಪಾಲೂ ಇದೆ.ಕೇಂದ್ರ ಸರಕಾರ ಏನೆಲ್ಲ ಪ್ರಯೋಗ ಮಾಡಿದರೂ ಜನ ನಮ್ಮ ಮೇಲೆ ಪ್ರೀತಿ, ವಿಶ್ವಾಸ ಇಟ್ಟಿದ್ದಾರೆ ಎಂದಿದ್ದಾರೆ.
ದೇಶ ಮಾತ್ರವಲ್ಲ. ಇಡೀ ಜಗತ್ತು ಬೆಂಗಳೂರು ಮೂಲಕ ಭಾರತವನ್ನು ನೋಡುತ್ತಿದೆ. ಅನ್ಯ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಸಂಪನ್ಮೂಲ, ಪ್ರತಿಭೆ, ಆಳ್ವಿಕೆ ಮಾದರಿ ಆದದ್ದು. ದೇವರಾಜ ಅರಸು, ವೀರೇಂದ್ರ ಪಾಟೀಲರ ಕಾಲದಿಂದ ಸಿದ್ದರಾಮಯ್ಯನವರ ಸರಕಾರದ ಅವಧಿವರೆಗೂ ಕರ್ನಾಟಕದ ಆಡಳಿತ ಯಾರೊಬ್ಬರೂ ಬೆರಳು ತೋರಿಸದಷ್ಟು ಉತ್ತಮವಾಗಿತ್ತು ಎಂದರು