ಬಿಜೆಪಿ ಅಸಂಘಟಿತ ಕಾರ್ಮಿಕರ ಪ್ರಕೋಷ್ಠದ ಸಭೆ

ತುಮಕೂರು, ಸೆ. ೨೨- ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಸಂಘಟಿತ ಕಾರ್ಮಿಕರ ಪ್ರಕೋಷ್ಠದ ಜಿಲ್ಲಾ ಮಟ್ಟದ ಸಭೆಯನ್ನು ರಾಜ್ಯ ಸಂಚಾಲಕ ಬ್ಯಾಟರಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಭಾರತಮಾತಾ, ಬಿಜೆಪಿ ಪಕ್ಷದ ಸಂಸ್ಥಾಪಕರಾದ ಪಂಡಿತ್ ದೀನ ದಯಾಳ್ ಉಪಾಧ್ಯಾಯ ಹಾಗೂ ಶಾಮ ಪ್ರಕಾಶ್ ಮುಖರ್ಜಿ ಅವರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಸಭೆಗೆ ಚಾಲನೆ ನೀಡಲಾಯಿತು.
ರಾಜ್ಯ ಸಂಚಾಲಕ ಬ್ಯಾಟರಂಗೇಗೌಡ ಮಾತನಾಡಿ, ಬಿಜೆಪಿಯ ಅಸಂಘಟಿತ ಕಾರ್ಮಿಕರ ಪ್ರಕೋಷ್ಠ ರಾಜ್ಯದ ೩೭ ವಿಭಾಗ, ೩೧೦ ಮಂಡಲಗಳಲ್ಲಿಯೂ ನಮ್ಮ ಚಟುವಟಿಕೆಯನ್ನು ವಿಸ್ತರಿಸುತ್ತಿದ್ದು, ಅದರ ನಿಟ್ಟಿನಲ್ಲಿ ದಕ್ಷಿಣ ಕರ್ನಾಟಕದ ಎರಡು ದಿನದ ಕಾರ್ಯಾಗಾರವನ್ನು ದೇವನಹಳ್ಳಿಯಲ್ಲಿ ಸೆ. ೨೬ ಮತ್ತು ೨೭ ರಂದು ನಡೆಯಲಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್, ರಾಜ್ಯ ಕಾರ್ಯದರ್ಶಿ ಅರುಣ್ ಕುಮಾರ್ ಮತ್ತು ಪಕ್ಷದ ವಿವಿಧ ಮುಖಂಡರು ಭಾಗವಹಿಸಿ, ಇಡೀ ದಕ್ಷಿಣ ಪ್ರಾಂತ್ಯಕ್ಕೆ ಬರುವ ಮಂಡಲ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಮಾರ್ಗದರ್ಶನ ಮಾಡುವ ಕೆಲಸ ಮಾಡಲಿದ್ದಾರೆ. ತುಮಕೂರಿನ ಎಲ್ಲಾ ಮಂಡಲಗಳ ಅಧ್ಯಕ್ಷರು ಸಹ ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಶೇ. ೫೦ ರಷ್ಟು ಜನಸಂಖ್ಯೆಯನ್ನು ಹೊಂದಿರುವ ಅಸಂಘಟಿತ ಕಾರ್ಮಿಕರ ಪ್ರಕೋಷ್ಠದಲ್ಲಿ ಕುಂಬಾರರು, ಚಮ್ಮಾರರು, ನೇಕಾರರ, ಸಮಿತಾ ಸಮಾಜ, ಮಡಿವಾಳ ಸಮಾಜ, ಕೃಷಿ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಆಟೋ ಚಾಲಕರು, ಗಾರ್ಮೆಂಟ್ಸ್, ರಸ್ತೆ ಬದಿ ವ್ಯಾಪಾರಿಗಳು ಸೇರಿದಂತೆ ದುಡಿಯುವ ವರ್ಗದ ಜನರನ್ನು ಸಂಘಟಿಸುವ ಕೆಲಸವನ್ನು ಪಕ್ಷ ನನಗೆ ನೀಡಿದೆ. ರಾಜ್ಯಾದ್ಯಂತ ಪ್ರವಾಸ ಮಾಡಿ, ಪಕ್ಷವನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
ತುಮಕೂರು ಜಿಲ್ಲಾ ಅಸಂಘಟಿತ ಕಾರ್ಮಿಕರ ಪ್ರಕೋಷ್ಠದ ಸಂಚಾಲಕ ಕೆ.ವಿ. ಪ್ರಕಾಶ್ ಭಾರದ್ವಾಜ್ ಮಾತನಾಡಿ, ಎಲ್ಲಾ ಮಂಡಲಗಳ ಪದಾಧಿಕಾರಿಗಳು ಕೊಟ್ಟಿರುವ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಸಹ ಸಂಚಾಲಕ ಶಿವಕುಮಾರ್ (ಆಟೋ ಯಡಿಯೂರಪ್ಪ)ರವರು ಪಕ್ಷ ಸಂಘಟನೆಯ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಕೆ.ವಿ.ಪ್ರಕಾಶ್ ಭಾರದ್ವಜ್, ಸದಸ್ಯರಾದ ನಟರಾಜ್, ಮಮತ, ರಾಮಾಂಜಿನಪ್ಪ, ವಿನಯ್, ಪರಮೇಶ್, ಶ್ರೀನಿವಾಸ ಮೂರ್ತಿ, ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನೂತನವಾಗಿ ಬಿಜೆಪಿ ಕಚೇರಿಗೆ ಆಗಮಿಸಿದ ರಾಜ್ಯ ಸಂಚಾಲಕ ಬ್ಯಾಟರಂಗೇಗೌಡ ಅವರನ್ನು ಅಭಿನಂದಿಸಲಾಯಿತು.