ಬಿಜೆಪಿ ಅಷ್ಟಗಿ ರಾಜೀನಾಮೆ

ಧಾರವಾಡ, ಏ13: ಉತ್ತರ ಕರ್ನಾಟಕ ಭಾಗದ ಹೆಮ್ಮೆಯ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಂತಹವರಿಗೆ ಮೊದಲ ಪಟ್ಟಿಯಲ್ಲಿ ಟಿಕೇಟ್ ಘೋಷಣೆ ಮಾಡದಿರುವುದು. ಅವರನ್ನು ಸಕ್ರಿಯ ರಾಜಕಾರಣ ದಿಂದ ದೂರ ಇರುವಂತೆ ಮಾಡುವುದು ಸರಿಯಾದ ಬೆಳವಣಿಗೆ ಅಲ್ಲ. ಅವರು ಮುತ್ಸದಿ ರಾಜಕಾರಣಿಗಳು ಅವರನ್ನು ರಾಜಕೀಯವಾಗಿ ಅತಂತ್ರಗೊಳಿಸಲು ಹೊರಟಿವುದು ಸರಿಯಾದ ಬೆಳವಣಿಗೆ ಅಲ್ಲ. ಇದು ಪಕ್ಷದ ಮೇಲೆ ಗಂಭೀರವಾದ ಪರಿಣಾಮ ಬೀರಲಿದೆ ಎಂದು ಧಾರವಾಡ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ, ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತವನಪ್ಪ ಅಷ್ಟಗಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಹಂಚಿಕೆ ನಿರ್ಧಾರಕ್ಕೆ ಸಾವಿರಾರು ಕಾರ್ಯಕರ್ತರು, ಮುಖಂಡರಿಗೆ ಬೇಸರ ತಂದಿದೆ. ಅನೇಕರು
ಪಕ್ಷದ ಏಕಪಕ್ಷೀಯ ನಿರ್ಣಯಕ್ಕೆ ಮನನೋಂದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಬಯಲು ಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿ ಎಂದು ಒತ್ತಡ ಹೇರುತ್ತಿದ್ದಾರೆ. ಕೊನೆ ಕ್ಷಣದವರೆಗೆ ಟಿಕೇಟ್ ಬದಲಾವಣೆ ಖಂಡಿತ ಆಗುತ್ತದೆ ಎಂಬ ವಿಶ್ವಾಸ ನಮಗೆ ಅಷ್ಟೇ ಅಲ್ಲ ಎಲ್ಲರಿಗೂ ಇತ್ತು. ಆದರೆ ಕೊನೆ ಕ್ಷಣದಲ್ಲಿ ಹಾಲಿ ಶಾಸಕರಿಗೆ ಇಷ್ಟೋಂದು ವಿರೋಧದ ಮಧ್ಯೆ ಟಿಕೇಟ್ ನೀಡಿದ್ದರಿಂದ ಮುಂದೇನು ಮಾಡಬೇಕು ಎಂಬುದರ ಕುರಿತು ಶೀಘ್ರದಲ್ಲೇ ಬೆಂಬಲಿಗರ ಬೃಹತ್ ಪ್ರಮಾಣದ ಸಭೆ ಕರೆದು ಮುಂದಿನ ನಿರ್ಧಾರ ಪ್ರಕಟಿಸಲಾಗುವುದು.
ಹಾಲಿ ಶಾಸಕರು ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರ ವಿಶ್ವಾಸ ಕಳೆದುಕೊಂಡ ಪರಿಣಾಮ ನಾವು ಯಾರಿಗಾದರೂ ಹೊಸ ಮುಖಕ್ಕೆ ಮಣೆ ಹಾಕಲು ಕೇಳಿದ್ದೇವೆ. ಆದರೆ ಪಕ್ಷ ಯಾವುದೇ ರೀತಿಯ ಸಮೀಕ್ಷೆ, ಸರ್ವೆ ಹಾಗೂ ಕಾರ್ಯಕರ್ತರು ಮತ್ತು ಸಂಘ ಪರಿವಾರ ಕೂಡ ಬಯಸದ ಅಭ್ಯರ್ಥಿಯಾಗಿದ್ದರೂ ಅಂತಹವರಿಗೆ ಟಿಕೇಟ್ ನೀಡಿದರೆ ನಾವು ಯಾವಮುಖ ಇಟ್ಟುಕೊಂಡು ಅವರ ಬಳಿ ಮತಯಾಚನೆ ಮಾಡಬೇಕು ಎಂಬ ಪ್ರಶ್ನೆ ನಮಗೂ ಎದುರಾಗುತ್ತಿದೆ. ಹೀಗಾಗಿ ನಾವು ಪಕ್ಷ ತೊರೆಯುತ್ತಿಲ್ಲ. ಬದಲಿಗೆ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೀದ್ದೇವೆ ಎಂದು ಅವರು ಹೇಳಿದರು.
ಮಾಜಿ ಶಾಸಕಿ ಸೀಮಾ ಮಸೂತಿ ಅವರಿಗೆ ಮಹಿಳಾ ಕೋಟಾದಲ್ಲಿ ಟಿಕೇಟ್ ನೀಡುವಂತೆ ಕೋರಲಾಗಿತ್ತು. ನನಗೆ ಅವಿಭಜಿತ ಧಾರವಾಡ ಜಿಲ್ಲೆಯ 17 ವಿಧಾನಸಭಾ ಕ್ಷೇತ್ರದಿಂದ ಅಲ್ಪಸಂಖ್ಯಾತ ಹಾಗೂ ಜೈನ ಸಮುದಾಯದ ಟಿಕೇಟ್ ನೀಡುವಂತೆ ಕೇಳಲಾಗಿತ್ತು. ಅದೇ ರೀತಿ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಅವರು ಕೂಡ ಪಂಚಮಸಾಲಿ ಹಾಗೂ ಮಹಿಳಾ ಕೋಟಾದಲ್ಲಿ ಪರಿಗಣಿಸುವಂತೆ ಮನವಿ ಮಾಡಿದ್ದರು.
ಇನ್ನು ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಅವರು ಪಕ್ಷದಲ್ಲಿ ಇರದಿದ್ದರೂ ಅವರ ಸಾಮಾಜಿಕ ಹೋರಾಟ ಹಾಗೂ ವಿಶೇಷವಾಗಿ ಕಳೆದ ಚುನಾವಣೆ ಯಲ್ಲಿ ಪಕ್ಷದ ಗೆಲುವಿಗೆ ಕಾರಣವಾಗಿದ್ದ ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದ ಬಗ್ಗೆ ಸಾಕಷ್ಟು ಧ್ವನಿ ಎತ್ತಿದ್ದರಿಂದ ಎಲ್ಲರೂ ಕೂಡಿ ಗೆಲುವಿನ ದಡ ಸೇರಿದ್ದೇವು. ಬಸವರಾಜ ಕೊರವರ ಹೆಸರು ಕೂಡ ಟಿಕೇಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಕಡೆ ವರೆಗೆ ಇತ್ತು. ಸಂಘದಿಂದ ಹಾಗೂ ಪಕ್ಷದ ಕಾರ್ಯಕರ್ತರು ಕೂಡ ಅವರ ಹೆಸರು ಶಿಫಾರಸ್ಸು ಮಾಡಿದ್ದರು. ಆದರೆ ನಮ್ಮೆಲ್ಲರನ್ನು ಬಿಟ್ಟು ಅವರನ್ನೇ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎಂದು ಹೇಳಿದ್ದರಿಂದ ನಮಗಿಂತ ಇದು ಪಕ್ಷಕ್ಕೆ ಬಹಳಷ್ಟು ಹಿನ್ನಡೆ ಆಗುವ ಸಾಧ್ಯತೆ ಹೆಚ್ಚಾಗಿ ಇದೆ. ಹೀಗಾಗಿ ನಾವು ಸೋಲಿನ ಹೊಣೆ ಹೊರಲು ಸಿದ್ದರಿಲ್ಲ ಎಂದು ಅಷ್ಟಗಿ ಸ್ಪಷ್ಟಪಡಿಸಿದರು.