ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಗೆಲ್ಲಿಸಿ: ಮಲ್ಲಿಕಾರ್ಜುನಪ್ಪ

ಚಾಮರಾಜನಗರ, ನ.30:- ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನಪರ ಯೋಜನೆಗಳ ಅನುಷ್ಠಾನ ಹಾಗೂ ಗ್ರಾಮ ಪಂಚಾಯಿತಿಗಳ ಸರ್ವತೋಮುಖ ಅಭಿವೃದ್ದಿಗಾಗಿ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಅವರನ್ನು ಗೆಲ್ಲಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ. ಕೆ.ಆರ್.ಮಲ್ಲಿಕಾರ್ಜುನಪ್ಪ ತಿಳಿಸಿದರು.
ತಾಲೂಕಿನ ಹೆಗ್ಗೋಠಾರ, ನಂಜೇದೇವನಪುರ, ಉಡಿಗಾಲ ಹಾಗೂ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಆರ್. ರಘು ಕೌಟಿಲ್ಯ ಪರವಾಗಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗು ಸದಸ್ಯರು ಮತ್ತು ಮುಖಂಡರನ್ನು ಭೇಟಿ ಮಾಡಿ ಮತಯಾಚನೆ ಮಾಡಿ ಅವರು ಮಾತನಾಡಿದರು.
ಕೇಂದ್ರ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಮತ್ತು ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರ ಜನಪರ ಕಾರ್ಯಕ್ರಮಗಳು ಮೆಚ್ಚಿ ತಾವೆಲ್ಲರು ಇಂದು ಬಿಜೆಪಿ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯ ಮತವನ್ನು ನೀಡಿ, ಅಧಿಕ ಮತಗಳ ಅಂತರದಲ್ಲಿ ಗೆಲುವಂತೆ ಮಾಡಬೇಕಾಗಿದೆ. ಈ ಹಿಂದೆ ದೆಹಲಿಯಲ್ಲಿ ಬಿಡುಗಡೆಯಾದ ಹಣ ಗ್ರಾಮ ಪಂಚಾಯಿಗೆ ತಲುಪುವುದು ಕಷ್ಟವಾಗುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ನೇರವಾಗಿ ಗ್ರಾಮ ಪಂಚಾಯಿತಿಗಳ ಖಾತೆಗೆ ಹಣವನ್ನು ಹಾಕುವ ಮೂಲಕ ಒಂದು ಪೈಸೆ ಸಹ ಬೇರೆಡೆ ಹೋಗದಂತೆ ಮಾಡಿದರು. ಪ್ರತಿ ಮನೆಗೂ ಸಹ ನಲ್ಲಿ ನೀರು ಸಂಪರ್ಕ ಕಲ್ಪಿಸಲು ಯೋಜನೆಯನ್ನು ಜಾರಿ ಮಾಡಿದ್ದಾರೆ. ಗ್ರಾಮಪಂಚಾಯತಿಗಳಲ್ಲಿ ಇನ್ನು ಮುಂದೆ ಒಬ್ಬ ಮಹಿಳೆಯು ಸಹ ಮನೆಯಿಂದ ಹೊರ ಹೋಗಿ ನೀರು ತರುವಂತೆ ಇಲ್ಲ. ಮನೆ ಮುಂಭಾಗದಲ್ಲಿಯೇ ನಲ್ಲಿ ಅಳವಡಿಕೆ ಮಾಡಿ ಪ್ರತಿ ಮನೆಗೆ ನೀರು ಬರುವಂತೆ ಕೇಂದ್ರ ಸರ್ಕಾರ ಮಾಡಿದೆ. ಗ್ರಾಮ ಪಂಚಾಯಿತಿ ಸದಸ್ಯರ ಗೌರವವನ್ನು ಹೆಚ್ಚಿಸುವ ಕೆಲಸವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡುತ್ತಿದೆ ಎಂದರು.
ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರ ರೈತ ಪರ ಹೋರಾಟ ಮತ್ತು ಯೋಜನೆಗಳು ಇನ್ನು ಸಹ ಜನ ಮಾನಸದಲ್ಲಿ ಇದೆ. ಹರವೆ ಭಾಗದ 20 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅವರ ಶ್ರಮದ ಫಲವಾಗಿದೆ. 2008ರಲ್ಲಿ ಯೋಜನೆಗೆ ಚಾಲನೆ ನೀಡಿ, 20 ಕೆರೆಗಳಿಗೆ ಕಬಿನಿನಿಂದ ನೀರು ತುಂಬಿಸುವ ಪರಿಣಾಮ ಈ ಭಾಗದಲ್ಲಿ ಅಂತರ್‍ಜಲ ವೃದ್ದಿಯಾಗಿ ಜನರು ಸಮೃದ್ದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತಿದೆ, ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಒತ್ತು ನೀಡಿದ್ದು, ಅತ್ಯಂತ ಹಿಂದುಳಿದ ಸಮುದಾಯಕ್ಕೆ ಸೇರಿದ ರಘು ಆರ್ ಕೌಟಿಲ್ಯ ಅವರಿಗೆ 2 ಬಾರಿ ಸ್ಪರ್ಧೇಗೆ ಅವಕಾಶ ಮಾಡಿದೆ. ರಘು ಅವರು ಈ ಭಾಗದಲ್ಲಿ ಗೆದ್ದು ವಿಧಾನ ಪರಿಷತ್ ಸದಸ್ಯರಾದರೆ ನಮ್ಮ ಪಕ್ಷದಲ್ಲಿ ಶಾಸಕರು ಇಲ್ಲ ಎಂಬ ನೋವು ಹೋಗುತ್ತದೆ. ನಿಮ್ಮೆಲ್ಲರ ಪ್ರತಿನಿಧಿಯಾಗಿ ಕೆಲಚ ಮಾಡುವ ಜೊತೆಗೆ ಮುಂಬರುವ ವಿಧಾನಸಭೆ ಗೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಸಹಕಾರಿಯಾಗುತ್ತದೆ ಎಂದು ಮಲ್ಲಿಕಾರ್ಜುನಪ್ಪ ತಿಳಿಸಿದರು.
ಸಭೆಯಲ್ಲಿ ಉಡಿಗಾಲ, ಹೆಗ್ಗೋಠಾರ, ನಂಜೇದೇವನಪುರ ಹಾಗೂ ಶಿವಪುರ ಗ್ರಾಮಪಂಚಾಯಿತಿ ಸದಸ್ಯರಾದ ದೀಪಾ, ಉಮಾಶಂಕರ್, ಪ್ರಕಾಶ್, ಮಾದಪ್ಪ, ರಮೇಶ್, ಮಂಜು, ಹೆಗ್ಗೋಠಾರ ಮಾದಪ್ಪ, ಚಂದ್ರಶೇಖರ್, ಶಿವಕುಮಾರ್, ಗೀರಿಶ್, ಪಣ್ಯದಹುಂಡಿ ಸತೀಶ್, ಮುತ್ತಿಗೆ ಮೂರ್ತಿ, ಸಂತೋಷ ಮೊದಲಾದವರು ಇದ್ದರು.