
ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಮೇ.04 : ತಾಲೂಕಿನ ಮೈಲಾರದಲ್ಲಿರುವ ಕಾಗಿನೆಲೆ ಶಾಖಾ ಮಠಕ್ಕೆ ನಾನು ಸಚಿವನಿದ್ದಾಗ 3 ಕೋಟಿ ಅನುದಾನ ನೀಡಿದ್ದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 10 ಕೋಟಿ ಅನುದಾನ ನೀಡಿ ವಸತಿ ಶಾಲೆ, ಯಾತ್ರಿ ನಿವಾಸ ಕಟ್ಟಿಸಿಕೊಟ್ಟಿದ್ದಾರೆ. ಕ್ಷೇತ್ರದ ಶಾಸಕರಾಗಿರುವ ಪಿ.ಟಿ.ಪರಮೇಶ್ವರನಾಯ್ಕ ನಮ್ಮ ಮಠಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.
ತಾಲೂಕಿನ ಹ್ಯಾರಡ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಕೃಷ್ಣನಾಯ್ಕ ಪರ ಮತಯಾಚಿಸಿ ಮಾತನಾಡಿದ ಅವರು, ಮೈಲಾರದಲ್ಲಿ ಕಾಗಿನೆಲೆ ಶಾಖಾ ಮಠ ಅಭಿವೃದ್ಧಿ ಪಥದಲ್ಲಿ ಸಾಗಿದೆ. ಮಠದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ಶಾಸಕ ಪಿ.ಟಿ.ಪರಮೇಶ್ವರನಾಯ್ಕ 20 ಲಕ್ಷ ಅನುದಾನದ ಭರವಸೆ ನೀಡಿ, ಈವರೆಗೆ ಅದನ್ನೂ ಕೊಟ್ಟಿಲ್ಲ ಎಂದು ಟೀಕಿಸಿದರು.
ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ವಿವಿಧ ಮಠಾಧೀಶರು ಮಾಡಿದ ಮನವಿಗೆ ಬಿಜೆಪಿ ಸರ್ಕಾರ ಸ್ಪಂದಿಸಿ, 39 ಹಿಂದುಳಿದ ಸಮುದಾಯಗಳ ಮಠಗಳ ಅಭಿವೃದ್ಧಿಗೆ 119 ಕೋಟಿ ರೂ. ಅನುದಾನ ನೀಡಿದೆ. ಕಾಂಗ್ರೆಸ್ ಪಕ್ಷ ಹಿಂದುಳಿದವರು, ದಲಿತರ ಬಗ್ಗೆ ಬರೀ ಬೊಗಳೆ ಬಿಡುತ್ತದೆ. ಆದರೆ, ಬಿಜೆಪಿ ಈ ಸಮುದಾಯಗಳ ಅಭಿವೃದ್ಧಿಗೆ ಬದ್ದತೆ ತೋರಿದೆ. ಪ್ರಧಾನಿ ಮೋದಿಯವರು ಈಚೆಗೆ 27 ಜನ ಹಿಂದುಳಿದವರು 10 ಜನ ದಲಿತರನ್ನು ಸಂಪುಟಕ್ಕೆ ಸೇರಿಸಿಕೊಂಡು ಬಿಜೆಪಿ ನಿರ್ಲಕ್ಷಿತ ಸಮುದಾಯಗಳಿಗೆ ಆದ್ಯತೆ ತೋರಿದೆ. ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದುಳಿದವರು, ದಲಿತರನ್ನು ರಾತ್ರೋ ರಾತ್ರಿ ಸಂಪುಟದಿಂದ ಕಿತ್ತು ಹಾಕಿ ಈ ಸಮುದಾಯಗಳನ್ನು ಅಪಮಾನಗೊಳಿಸಲಾಗಿತ್ತು ಎಂದು ಕಿಡಿ ಕಾರಿದರು.
ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಗೋಹತ್ಯೆ ನಿಷೇಧ ಕಾಯ್ದೆ ರದ್ದುಪಡಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಈ ವಿಷಯವನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿ ಮತ ಕೇಳಲಿ ಎಂದು ಸವಾಲು ಹಾಕಿದರು.
ಬಿಜೆಪಿ ಅಭ್ಯರ್ಥಿ ಕೃಷ್ಣನಾಯ್ಕ ಮಾತನಾಡಿ, ಶಾಸಕ ಪಿ.ಟಿ.ಪರಮೇಶ್ವರನಾಯ್ಕರ ದುರಾಡಳಿತಕ್ಕೆ ಬೇಸತ್ತಿರುವ ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ದುಡಿಯುವ ಸಂಕಲ್ಪ ಹೊಂದಿದ್ದು, ಚುನಾವಣೆಯಲ್ಲಿ ನನ್ನನ್ನು ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಮಾಜಿ ಶಾಸಕರಾದ ಬಿ.ಚಂದ್ರನಾಯ್ಕ ನಂದಿಹಳ್ಳಿ ಹಾಲಪ್ಪ, ಮುಖಂಡರಾದ ಓದೋ ಗಂಗಪ್ಪ, ಎಂ.ಪರಮೇಶ್ವರಪ್ಪ, ಎಂ.ಪಿ.ಸುಮಾ ವಿಜಯ್, ಬಿಜೆಪಿ ಮಂಡಲ ಅಧ್ಯಕ್ಷ ಎಸ್.ಸಂಜೀವರೆಡ್ಡಿ, ಈಟಿ ಲಿಂಗರಾಜ, ಎಂ.ಬಿ.ಬಸವರಾಜ ಇದ್ದರು.