ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ವಿರುದ್ದ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

ಕಲಬುರಗಿ:ಏ.22:ಮಾದರಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ ಚುನಾವಣೆಗೆ ಸಂಬಂಧಿಸಿದ ಅಪರಾಧ ಮಾಡಿರುವ ಕುರಿತು ಸಂಸದ ಹಾಗೂ ಕಲಬುರ್ಗಿ ಲೋಕಸಭೆಯ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ದೂರು ಸಲ್ಲಿಸಿದೆ.
ಕೋಮು ಬಣ್ಣ ಬಳಿಯುವ ಹೇಳಿಕೆಗಳ ಮೂಲಕ ಕಾಂಗ್ರೆಸ್ ಪಕ್ಷವನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಜಾಧವ್ ಸುಳ್ಳು ಆರೋಪ ಮಾಡಿದ್ದಾರೆ. ಇತ್ತೀಚಿನ ರ್ಯಾಲಿಯಲ್ಲಿ ಉಮೇಶ್ ಜಾಧವ್ ಅವರು ಸುಳ್ಳು ಆರೋಪ ಮಾಡಿದ್ದು, ಕಾಂಗ್ರೆಸ್ ಪಕ್ಷ ಸುಪ್ರಿಂಕೋರ್ಟ್‍ನಲ್ಲಿ ಅಫಿಡವಿಟ್ ಹಾಕುವ ಮೂಲಕ ಕಳೆದ 20 ವರ್ಷದಿಂದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವನ್ನು ತಡೆದಿತ್ತು. ಮುಂದುವರೆದು, ಕಾಂಗ್ರೆಸ್ ನಾಯಕರು ಕಪ್ಪು ಪಟ್ಟಿ ಧರಿಸುವ ಮೂಲಕ ಶ್ರೀ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಪ್ರತಿಭಟಿಸಿದ್ದರು. ಇದರ ಜೊತೆಗೆ ಕಾಂಗ್ರೆಸ್ ಪಕ್ಷ ಸನಾತನಧರ್ಮ ಹಾಗೂ ಹಿಂದೂ ಧರ್ಮದ ವಿರುದ್ದ ತುಷ್ಠಿಕರಣದಲ್ಲಿ ತೊಡಗಿದ್ದು ಕೀಳು ರಾಜಕೀಯ ಮಾಡುತ್ತಿದೆ ಎಂದು ಸುಳ್ಳು ಆರೋಪಿಸಿದ್ದರು. ಈ ಕುರಿತಂತೆ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿದ್ದು ಸದರಿ ಪತ್ರಿಕೆಗಳ ವರದಿಗಳ ಪ್ರತಿಗಳನ್ನು ಅವಾಗಾಹನೆಗಾಗಿ ಕಾಂಗ್ರೆಸ್ ಚುನಾವಣೆ ಆಯೋಗಕ್ಕೆ ಸಲ್ಲಿಸಿದೆ.
ಈ ರೀತಿ ಸುಳ್ಳು ಹಾಗೂ ಕೋಮುಭಾವನೆ ಹಾನಿ ಮಾಡುವ ಹೇಳಿಕೆಗಳಿಂದ ಉಮೇಶ್ ಜಾಧವ್ ಚುನಾವಣೆಗೆ ಸಂಬಂಧಿಸಿದ ವಿವಿಧ ರೀತಿಯ ಅಪರಾಧಗಳನ್ನು ಮಾಡಿದ್ದಾರೆ ಎಂದು ಕಾಂಗ್ರೆಸ್ ತನ್ನ ದೂರಿನಲ್ಲಿ ಉಲ್ಲೇಖಿಸಿದೆ.
ಉಮೇಶ್ ಜಾಧವ್ ಅವರ ಹೇಳಿಕೆಗಳು ಗಮನಿಸಿದರೆ ಕೋಮುಭಾವನೆ ಹಿನ್ನೆಲೆಯಲ್ಲಿ ಮತಗಳನ್ನು ಸೆಳೆಯಲು ಪ್ರಯತ್ನಿಸುತ್ತಿರುವುದು ತಿಳಿದುಬರುತ್ತದೆ. ಅವರ ಹೇಳಿಕೆಗಳು ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಶಾಂತಿ ಹಾಗೂ ಸಾರ್ವಜನಿಕ ನೆಮ್ಮದಿಗೆ ಭಂಗ ತರುವಂತಿವೆ. ಹಾಗಾಗಿ ಚುನಾವಣೆ ಮುಗಿಯುವವರೆಗೆ ಅಥವಾ 72-96 ತಾಸಿನವರೆಗೆ ಉಮೇಶ್ ಜಾಧವ್ ಯಾವುದೇ ಸಭೆ- ಸಮಾರಂಭ ಹಾಗೂ ಮೆರವಣಿಗೆ ಮಾಡದಂತೆ, ಸಾಮಾಜಿಕ ಜಾಲತಾಣದಲ್ಲಿ ಸಂವಾದ ನಡೆಸದಂತೆ ಅಥವಾ ಸಂದರ್ಶನ ನೀಡದಂತೆ ಬ್ಯಾನ್ ಮಾಡಬೇಕು ಎಂದು ಕಾಂಗ್ರೆಸ್ ನೀಡಿದ ದೂರಿನಲ್ಲಿ ಹೇಳಿದೆ.
ಉಮೇಶ್ ಜಾಧವ್ ಅವರು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಮಾಡುವುದರ ಜೊತೆಗೆ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 123(3) ಅಡಿಯಲ್ಲಿ ಚುನಾವಣೆಗೆ ಸಂಬಂಧಿಸಿದ ಅಪರಾಧ ಮಾಡಿರುತ್ತಾರೆ. ಉಮೇಶ್ ಜಾಧವ್ ಸನಾತನ ಧರ್ಮದ ವಿಚಾರ ಎಳೆದು ತರುವ ಮೂಲಕ ಕಾಂಗ್ರೆಸ್ ಪಕ್ಷ ವನ್ನು ಹಿಂದೂ ವಿರೋಧಿ ಎಂದು ಬಿಂಬಿಸಿ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡದಂತೆ ಚಿತಾವಣೆ ನೀಡಿದ್ದಾರೆ.ಹಾಗಾಗಿ ಸದರಿಯವರ ವಿರುದ್ದ ಕ್ರಿಮಿನಲ್ ಕ್ರಮ ಜರುಗಿಸುವಂತೆ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ದೂರಿನಲ್ಲಿ ಮನವಿ ಮಾಡಿದೆ.