ಬಿಜೆಪಿ ಅಧಿಕಾರಕ್ಕೆ : ಬಳ್ಳಾರಿ


ಬ್ಯಾಡಗಿ,ನ.16: ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ನೀಡುವ ಮೂಲಕ ಬಿಜೆಪಿ ಸರ್ಕಾರ ಜನಪರ ಆಡಳಿತಕ್ಕೆ ಮುಂದಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೇ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತವೆಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.
ತಾಲೂಕಿನ ಬನ್ನಿಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ 3ಕೋಟಿ ರೂಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಬನ್ನಿಹಳ್ಳಿ – ಕಾಗಿನೆಲೆ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಜನಸಂಕಲ್ಪ ಯಾತ್ರೆಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇತ್ತೀಚಿಗೆ ಬ್ಯಾಡಗಿಯಲ್ಲಿಯೂ ಸಹ ನಡೆದ ಜನಸಂಕಲ್ಪ ಯಾತ್ರೆಯು ಬಿಜೆಪಿಗೆ ಜನಬಲದ ಶಕ್ತಿಯನ್ನು ಹೆಚ್ಚಿಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಸಹದೇವಪ್ಪ ಬನ್ನಿಹಳ್ಳಿ ವಹಿಸಿದ್ದರು. ಗ್ರಾಪಂ ಸದಸ್ಯ ಶಿವಾನಂದ ಕದರಮಂಡಲಗಿ, ಮುಖಂಡರಾದ ಶಿವಾನಂದ ಕಡಗಿ, ಮಂಜಣ್ಣ ಗೊಂದಿ, ನಾಗೇಂದ್ರಪ್ಪ ಪೂಜಾರ, ನೀಲಪ್ಪ ಹಿರೇಹಳ್ಳಿ, ಅಲ್ಲಾಭಕ್ಷು ಬಳ್ಳಾರಿ, ಎಇಇ ಉಮೇಶ್ ನಾಯ್ಕ್, ಜೆಇ ಆನಂದ ದೊಡ್ಡಮನಿ, ಪಿಡಿಓ ಜಗದೀಶ ಮಣ್ಣಮ್ಮನವರ, ಗುತ್ತಿಗೆದಾರ ಎಫ್.ಬಿ.ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.