ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆ ಆಗುತ್ತದೆ-ಸಚಿವ ತಂಗಡಗಿ

ಸಂಜೆವಾಣಿ ವಾರ್ತೆ
ಸಿಂಧನೂರು.ಮಾ.೨೬- ದೇಶದಲ್ಲಿ ಅಧಿಕಾರ ಮಾಡುತ್ತಿರುವ ಪ್ರಧಾನಿ ಮೋದಿ ಇ.ಡಿ, ಸಿಬಿಐ ಸೇರಿದಂತೆ ಸ್ವತಂತ್ರ ಸಂಸ್ಥೆಗಳನ್ನು ಬಳಸಿಕೊಂಡು ವಿಪಕ್ಷಗಳನ್ನು ದಮನ ಮಾಡಲು ಹೊರಟಿದ್ದಾರೆ. ಈ ಬಾರಿ ಮೋದಿ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯುವು ದಿಲ್ಲ ,ಅದರ ಕಗ್ಗೊಲೆ ಆಗುತ್ತದೆ ಎಂದು ಹಿಂದುಳಿದ ವರ್ಗಗಳ ಸಚಿವ ಶಿವರಾಜ ತಂಗಡಗಿ ಆರೋಪಿಸಿದರು.
ನಗರದ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬ್ಲಾಕ್ ಕಾಂಗ್ರೆಸ್‌ನಿಂದ ಏರ್ಪಡಿಸಿದ್ದ ಕಾಂಗ್ರೆಸ್ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಚೀನಾ ಅಧ್ಯಕ್ಷರ ರೀತಿಯಲ್ಲಿ ಆಡಳಿತ ನಡೆಸಲು ಮುಂದಾಗಿದ್ದಾರೆ. ತಮಗೆ ಬೇಕಾದ ರೀತಿಯಲ್ಲಿ ಕಾನೂನು ಜಾರಿಗೆ ತಂದು ವಿಪಕ್ಷದ ನಾಯಕರನ್ನು ಜೈಲಿಗಟ್ಟುವ ಕೆಲಸ ಮಾಡುತ್ತಾರೆ. ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿ ಹಿಟ್ಲರ್ ಆಡಳಿತ ನಡೆಸಲಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರಲು ಏನೂ ಬೇಕಾದರೂ ಮಾಡುತ್ತದೆ. ನಂಬಿದವರನ್ನು ಕತ್ತು ಕೊಯ್ಯುವ ಕೆಲಸ ಮಾಡುತ್ತದೆ. ಅದಕ್ಕೆ ತಾಜಾ ಉದಾಹರಣೆ ಕೆ.ಎಸ್.ಈಶ್ವರಪ್ಪ .ಪ್ರಸ್ತುತ ಅವರ ಪರಿಸ್ಥಿತಿ ಏನಾಗಿದೆ? ಮೋದಿ ಅವರನ್ನು ಸದಾ ಹೊಗಳುತ್ತಿದ್ದ ಸಂಗಣ್ಣಗೆ ಟಿಕೆಟ್ ಕೊಡಲಿಲ್ಲ ಎಂದು ಆಪಾದಿಸಿದರು.
ಬಿಜೆಪಿ ಅನುದಾನ ನೀಡದೆ ಯೋಜನೆಗಳನ್ನು ಘೋಷಿಸುತ್ತಾರೆ. ಆದರೆ ಕಾಂಗ್ರೆಸ್ ಅನುದಾನ ನೀಡಿ, ಯೋಜನೆಗಳನ್ನು ರೂಪಿಸುತ್ತದೆ. ಇದು ಬಿಜೆಪಿ-ಕಾಂಗ್ರೆಸ್‌ಗೆ ಇರುವ ಅಂತರ. ಕಳೆದ ಬಾರಿಯ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಗೆಲ್ಲಬೇಕಿತ್ತು. ಆದರೆ ಅಲ್ಪ ಮತಗಳ ಅಂತರದಲ್ಲಿ ಸೋತರು. ವಿಧಾನಸಭಾ ಚುನಾವಣೆಯಲ್ಲಿ ಬಾದರ್ಲಿ ಗೌಡರು ಇಪ್ಪತ್ತೇರಡು ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಸಿಂಧನೂರಿನಿಂದ ೩೦ ಸಾವಿರ ಅಂತರ ನೀಡಬೇಕು. ನನ್ನ ಕನಕಗಿರಿ ಕ್ಷೇತ್ರದಿಂದ ೫೦ ಸಾವಿರ ಲೀಡ್ ಕೋಡುತ್ತೇನೆ. ಈ ಬಾರಿ ಒಂದೂವರೆ ಲಕ್ಷದಿಂದ ಎರಡು ಲಕ್ಷ ಅಂತರದಲ್ಲಿ ಹಿಟ್ನಾಳ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಪ್ರಜಾಪ್ರಭುತ್ವ ಉಳಿಯಬೇಕು. ಜನತೆ ನೆಮ್ಮದಿಯಿಂದ ಬದುಕಬೇಕು ಎಂದರೆ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಪಿ.ವಿ.ನರಸಿಂಹರಾವ್, ಮನಮೋಹನ ಸಿಂಗ್ ಪ್ರಧಾನಮಂತ್ರಿಯಾಗಿದ್ದಾಗ ಮಾಡಿದ ಯೋಜನೆಗಳು ಇಂದು ದೇಶದಲ್ಲಿ ಆರ್ಥಿಕ ಭದ್ರತೆ ಕಾಣುತ್ತೇವೆ. ಚುನಾವಣೆ ಬಂದಿದೆ ಎಂದು ಪೆಟ್ರೋಲ್, ಗ್ಯಾಸ್ ಬೆಲೆ ಅಲ್ಪ ಕಡಿಮೆ ಮಾಡಿರುವುದೇ ಬಿಜೆಪಿ ಸಾಧನೆ. ರಾಜ್ಯದಲ್ಲಿ ಭೀಕರ ಬರಗಾಲದ ನಡುವೆಯೂ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಈ ಬಾರಿ ರಾಜ್ಯದಲ್ಲಿ ಮೋಲೆ ಅಲೆ ನಡೆಯಲ್ಲ. ಗ್ಯಾರಂಟಿ ಜಾರಿಯಿಂದ ಸಿದ್ದರಾಮಯ್ಯನವರ ಬಿರುಗಾಳಿ ಇದೆ. ನಮ್ಮ ಅಭ್ಯರ್ಥಿಗಳ ಗೆಲುವಿಗೆ ಗ್ಯಾರಂಟಿ ಸಹಕಾರಿಯಾಗಲಿದೆ. ನಮ್ಮ ಸಿಂಧನೂರು ಕ್ಷೇತ್ರದಿಂದ ಹೆಚ್ಚಿನ ಅಂತರ ಸಿಗಲಿದೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಮಾತನಾಡಿ ಮತಯಾಚಿಸಿದರು. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಕೆಪಿಸಿಸಿ ಸದಸ್ಯರಾದ ತಿಮ್ಮಯ್ಯ ನಾಯಕ, ಮುಖಂಡರಾದ ಎಂ.ಕಾಳಿಂಗಪ್ಪ, ನಲ್ಲಾ ವೆಂಕಟೇಶ್ವರ ರಾವ್, ಅಶೋಕ ಉಮಲೂಟಿ, ಶ್ರೇಣಿಕರಾಜ, ಸಿದ್ರಾಮಪ್ಪ ಮಾಡಶಿರವಾರ, ಲೋಕನಗೌಡ, ರಾಮನಗೌಡ, ಸತ್ಯನಗೌಡ ವಳಬಳ್ಳಾರಿ, ಹನುಮಂತಪ್ಪ ಮುದ್ದಾಪುರ, ಖಾಜಿ ಮಲಿಕ್, ಅನಿಲಕುಮಾರ ವೈ ಸೇರಿದಂತೆ ಅನೇಕರು ಇದ್ದರು.