ದೇವದುರ್ಗ,ಮಾ.೨೭- ಸುಮಾರು ೩೬೮೦ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಗಬ್ಬೂರಿಗೆ ಆಗಮಿಸಿದ್ದ ಗೃಹ ಸಚಿವ ಅಮಿತ್ ಷಾ ಬಿಜೆಪಿ ಅದ್ಧೂರಿ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಸಾಕ್ಷಿಯಾದರು.
ಪಟ್ಟಣದ ಹೊರವಲಯದಲ್ಲಿ ಸುಮಾರು ೨೦ಎಕರೆ ಜಾಗದಲ್ಲಿ ನಿರ್ಮಿಸಿದ್ದ ಬೃಹತ್ ವೇದಿಕೆ ಮುಂಭಾಗದಲ್ಲಿ ಜನರು ಹಾಗೂ ಬಿಜೆಪಿ ಕಾರ್ಯಕರ್ತರು ಕಿಕ್ಕಿರಿದು ತುಂಬಿದ್ದರು. ಸುಮಾರು ೧.೧೦ಲಕ್ಷ ಆಸನ ವ್ಯವಸ್ಥೆ ಮಾಡಲಾಗಿದ್ದು ಮೈದಾನದ ತುಂಬೆಲ್ಲ ಜನರು ತುಂಬಿ ತುಳುಕುತ್ತಿದ್ದರು. ಗೃಹಸಚಿವ ಅಮಿತ್ ಷಾ, ಮೋದಿ, ಕೆ.ಶಿವನಗೌಡ ನಾಯಕ ಪರ ಘೋಷಣೆ ಕೂಗಿ ಸಂಭ್ರಮಿಸಿದರು.
ಸರಿಯಾಗಿ ಮಧ್ಯಾಹ್ನ ೧.೫೭ಕ್ಕೆ ವೇದಿಕೆಗೆ ಆಗಮಿಸಿದ ಗೃಹಸಚಿವ ಅಮಿತ್ ಷಾ ಜನರಿಗೆ ಕೈಸುತ್ತಾ ಕಾರ್ಯಕ್ರಮ ಉದ್ಘಾಟಿಸುವ ಜತೆಗೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕೆ.ಶಿವನಗೌಡ ನಾಯಕ, ಸಂಸದ ರಾಜಾ ಅಮರೇಶ್ವರ ನಾಯಕ ತಲಾ ಐದು ನಿಮಿಷ ಮಾತನಾಡಿದರೆ, ಅಮಿತ್ ಷಾ ೧೪ನಿಮಿಷ ಮಾತನಾಡಿದರು. ೪೦ನಿಮಿಷದಲ್ಲಿ ವೇದಿಕೆ ಕಾರ್ಯಕ್ರಮ ಪೂರ್ಣಗೊಂಡಿತು. ಸುಮಾರು ೧.೫ಲಕ್ಷಕ್ಕೂ ಅಧಿಕ ಜನರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಸರ್ಪಗಾವಲು
ವೇದಿಕೆ ಕಾರ್ಯಕ್ರಮದಿಂದ ಊಟದ ವ್ಯವಸ್ಥೆ, ಕುಡಿವ ನೀರು, ಪಾರ್ಕಿಂಗ್ ಸೇರಿ ಸ್ವಯಂ ಸೇವಕರು ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಕಂಡುಬಂದಿತು. ಎಲ್ಲೆಡೆ ಪೊಲೀಸ್ ಸರ್ಪಗಾವಲು ಹಾಕಿದ್ದು, ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರನ್ನೂ ತಪಾಸಣೆ ನಡೆಸಿ ಬಿಡಲಾಗುತ್ತಿತ್ತು. ವೇದಿಕೆ ಮುಂಭಾಗದಲ್ಲಿ ಸಾವಿರಾರು ಪೊಲೀಸರು ಕಾವಲಿಗೆ ನಿಂತಿದ್ದರೆ ಮುಖ್ಯರಸ್ತೆ, ಊಟ, ಪಾರ್ಕಿಂಗ್ ಜಾಗದಲ್ಲಿ ಆರಕ್ಷಕರು ಕಾವಲು ಕಾಯ್ದರು. ವೇದಿಕೆ ಕಾರ್ಯಕ್ರಮ ಒಂದೂವರೆ ಕಿಮೀ ದೂರದಲ್ಲೇ ವಾಹನ ಬಿಡಲಾಗಿತ್ತು. ಸಂಚಾರ ದಟ್ಟಣೆ ನಿವಾರಣೆಗೆ ಕಲ್ಮಲಾ ದೇವದುರ್ಗ ರಾಜ್ಯ ಹೆದ್ದಾರಿ ಬೆಳಗ್ಗೆ ೧೦ರಿಂದ ಮಧ್ಯಾಹ್ನ ೩ಗಂಟೆವರೆಗೆ ಬಂದ್ ಮಾಡಿ ಪರ್ಯಾಯ ವ್ಯವಸ್ಥೆ ಮಾಡಲಾಗಿತ್ತು.
ಅಚ್ಚುಕಟ್ಟು ಊಟ
ಸಮಾರಂಭಕ್ಕೆ ಆಗಮಿಸಿದ ಜನರಿಗೆ ಅಚ್ಚುಕಟ್ಟಾಗಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ೧೧ಗಂಟೆಯಿಂದಲೇ ಊಟ ಪ್ರಾರಂಭ ಮಾಡಲಾಗಿತ್ತು. ಲಾಡು, ಬದನೆಕಾಯಿ ಪಲ್ಲೆ, ಅನ್ನ, ಸಾಂಬರ್, ಖಾರಾಬೂಂದಿ ಜತೆ ಒಂದು, ಅರ್ಥಲೀಟರ್ ನೀರಿನ ಬಾಟಲ್ ನೀಡಲಾಯಿತು. ೨೦ಎಕರೆ ಜಾಗದಲ್ಲಿ ನಿರ್ಮಿಸಿದ್ದ ಊಟದ ಕೌಂಟರ್‌ನಲ್ಲಿ ನಾಲ್ಕಾರು ಕಡೆ ವ್ಯವಸ್ಥೆ ಮಾಡಲಾಗಿತ್ತು. ಮಹಿಳೆಯರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮೀಣ ಭಾಗದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬಿಸಿಲಿನ ತಾಪ ತಾಳದೆ ಹಲವರು ಪಕ್ಕದ ಬಲದಂಡೆ ಉಪಕಾಲುವೆ ಇಳಿದು ತಂಪುಮಾಡಿಕೊಂಡರು.
ಬಾಕ್ಸ್=====
ಟ್ರಾಫಿಕ್ ಜಾಮ್
ವೇದಿಕೆ ಕಾರ್ಯಕ್ರಮ ಆರಂಭಕ್ಕೆ ಮುನ್ನ ಅಚ್ಚುಕಟ್ಟಾಗಿದ್ದ ಸಂಚಾರ ವ್ಯವಸ್ಥೆ, ಸಮಾರಂಭ ಮುಗಿದನಂತರ ಅಸ್ತವ್ಯಸ್ತಗೊಂಡಿತು. ಎಲ್ಲ ಕಡೆಯಿಂದ ರಾಜ್ಯ ಹೆದ್ದಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಬಂದಿದ್ದರಿಂದ ಸುಮಾರು ಒಂದೂವರೆಗೆ ಗಂಟೆಗೂ ಹೆಚ್ಚುಕಾಲ ಟ್ರಾಫಿಕ್ ಸಮಸ್ಯೆ ಉಂಟಾಯಿತು. ಬಸ್‌ಗಿಂತ ಕ್ರೂಷನ್, ಬುಲೆರೋ ಪಿಕಪ್, ಆಟೋ, ಟಂಟಂ, ಬೈಕ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದು, ರಾಯಚೂರು ಮಾನ್ವಿ, ದೇವದುರ್ಗದ ವಾಹನಗಳ ಅಡ್ಡಾದಿಡ್ಡಿ ಓಡಾಟದಿಂದ ಸಂಚಾರ ಸಂಕಷ್ಟ ಎದುರಾಗಿತ್ತು. ಸಂಚಾರ ದಟ್ಟಣೆ ಹೆಚ್ಚಾಗಿದ್ದರಿಂದ ಪೊಲೀಸರು ನಿಸ್ಸಾಯಕರಾಗಿ ನಿಂತಿರುವುದು ಕಂಡುಬಂದಿತು.
ಬಾಕ್ಸ್=====
ತುಂಬಿ ತುಳುಕಾಟ
ಸಮಾವೇಶಕ್ಕೆ ನಿರೀಕ್ಷೆಯಂತೆ ಲಕ್ಷಾಂತರ ಜನರು ಬಂದಿದ್ದರಿಂದ ಗಬ್ಬೂರು ಪಟ್ಟಣ ಸುಮಾರು ನಾಲ್ಕುಗಂಟೆಗೂ ಹೆಚ್ಚುಕಾಲ ಜನರಿಂದ ತುಂಬಿತುಳುಕುತ್ತಿತ್ತು. ಪಟ್ಟಣದ ಅಂಗಡಿ ಮುಂಗಟ್ಟು, ವ್ಯಾಪಾರ ಮಳಿಗೆ, ಮುಖ್ಯರಸ್ತೆ ಸೇರಿ ಬಹುತೇಕ ರಸ್ತೆಗಳ ಇಕ್ಕೆಲುಗಳಲ್ಲಿ ಜನರು ತುಂಬಿದ್ದರು. ಹೋಟೆಲ್, ಅಂಗಡಿ, ತಳ್ಳುವ ಬಂಡಿ, ಪಾನ್‌ಶಾಪ್, ತಂಪುಪಾನೀಯ ಸೇರಿ ವಿವಿಧ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಯಿತು. ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ದೊಡ್ಡಮಟ್ಟದ ಕಾರ್ಯಕ್ರಮ ನಡೆದಿದ್ದು, ಕೇಂದ್ರ ಗೃಹಸಚಿವ ಅಮಿತ್ ಷಾ ಆಗಮಿಸಿದ್ದು ಮತ್ತಷ್ಟು ಮೆರಗುತಂದಿತ್ತು.