ಬಿಜೆಪಿಯ ಸಾಮ್ರಾಟ್, ವಿಜಯ್ ಸಿನ್ಹಾಗೆ ಡಿಸಿಎಂ ಪಟ್ಟ

ಪಾಟ್ನಾ,ಜ.೨೮- ಆರ್ ಜೆಡಿ-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿ ಬಿಜೆಪಿ ಜೊತೆ ಸರ್ಕಾರ ರಚನೆಗೆ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಮುಂದಾಗಿದ್ದು ಬಿಜೆಪಿಯ ಸಾಮ್ರಾಟ್ ಚೌಧರಿ, ವಿಜಯ್ ಸಿನ್ಹಾ ಉಪಮುಖ್ಯಮಂತ್ರಿಗಳಾಗುವುದು ಬಹುತೇಕ ಖಚಿತವಾಗಿದೆ.

ನಿತೀಶ್ ಕುಮಾರ್ ಅವರು ಬಿಹಾರ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸುತ್ತಿದ್ದಂತೆ ಜೆಡಿಯು- ಬಿಜೆಪಿ ಮೈತ್ರಿ ಸರ್ಕಾರ ರಚನೆಗೆ ಪ್ರಕ್ರಿಯೆ ಶುರುವಾಗಿದೆ.

ಬಿಜೆಪಿಯಿಂದ ಇಬ್ಬರು ಉಪ ಮುಖ್ಯಮಂತ್ರಿಗಳು ಅಧಿಕಾರ ಸ್ವೀಕಾರ ಮಾಡಲಿದ್ದು ರಾಜ್ಯ ಬಿಜೆಪಿ ಮುಖ್ಯಸ್ಥ ಸಾಮ್ರಾಟ್ ಚೌಧರಿ ಮತ್ತು ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್ ಸಿನ್ಹಾ ಅವರಿಗೆ ಅದೃಷ್ಠ ಖುಲಾಯಿಸಲಿದೆ

ಬಿಹಾರದ ಶಾಸಕರು, ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಜೆಪಿ, ಜೆಡಿಯು ಮತ್ತು ಇತರ ಮಿತ್ರಪಕ್ಷಗಳೊಂದಿಗೆ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ರಚಿಸುವ ಪ್ರಸ್ತಾಪವನ್ನು ಸರ್ವಾನುಮತದಿಂದ ಅಂಗೀಕರಿಸಿದ ನಂತರ ಈ ಬೆಳವಣಿಗೆ ನಡೆದಿದೆ.

ಈ ನಡುವೆ ಬಿಜೆಪಿ ಶಾಸಕರ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ಸಾಮ್ರಾಟ್ ಚೌಧರಿ ಆಯ್ಕೆಯಾದರೆ, ಉಪನಾಯಕರಾಗಿ ವಿಜಯ್ ಸಿನ್ಹಾ ಆಯ್ಕೆಯಾಗಿದ್ದಾರೆ

ನಿತೀಶ್ ಕುಮಾರ್ ರಾಜೀನಾಮೆ ನೀಡುವುದಕ್ಕೂ ಮುಂಚಿತವಾಗಿ, ಬಿಜೆಪಿ ಪಕ್ಷದ ನಾಯಕರು ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಇತರ ಮಿತ್ರಪಕ್ಷಗಳೊಂದಿಗೆ ರಾಜ್ಯದಲ್ಲಿ ಸರ್ಕಾರ ರಚಿಸುವುದನ್ನು ಖಚಿತಪಡಿಸಿದೆ.

“ಬಿಜೆಪಿ ನನ್ನ ಬದುಕಿಗೆ ಐತಿಹಾಸಿಕ ಕೆಲಸ ಮಾಡಿದೆ. ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿ ಸರ್ಕಾರದ ಭಾಗವಾಗಿರುವುದು ನನಗೆ ಭಾವನಾತ್ಮಕ ಕ್ಷಣವಾಗಿದೆ” ಎಂದು ಸಾಮ್ರಾಟ್ ಚೌಧರಿ ಹೇಳಿದ್ದಾರೆ.

“ಬಿಹಾರದ ಅಭಿವೃದ್ಧಿಗಾಗಿ ಮತ್ತು ಲಾಲು ಯಾದವ್ ಅವರ ಭಯೋತ್ಪಾದನೆಯನ್ನು ಕೊನೆಗೊಳಿಸಲು ೨೦೨೦ ರಲ್ಲಿ ಪಡೆದ ಜನಾದೇಶ ಬಿಹಾರದಲ್ಲಿ ಜಂಗಲ್ ರಾಜ್ ಇಲ್ಲ ಎಂದು ಖಚಿತಪಡಿಸಿಕೊಳ್ಳಲು ಬಿಜೆಪಿಯು ನಿತೀಶ್ ಕುಮಾರ್ ಅವರಿಂದ ಪ್ರಸ್ತಾಪವನ್ನು ಸ್ವೀಕರಿಸಿದಾಗ, ಅದನ್ನು ಬೆಂಬಲಿಸಲು ನಿರ್ಧರಿಸಿದ್ದೇವೆ” ಎಂದು ಹೇಳಿದ್ಧಾರೆ

ನಿತೀಶ್ ಕುಮಾರ್ ಅವರು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ ಮರು ಸೇರ್ಪಡೆಯಾಗಿರುವುದು ಖುಷಿಕೊಟ್ಟಿದೆ ಎಂದು ಅವರು ಹೇಳಿದ್ದಾರೆ.