ಬಿಜೆಪಿಯ ಸಂಸ್ಥಾಪನಾ ದಿನ ಸವಿನೆನಪು

ಮೈಸೂರು:ಏ:06: ಭಾರತೀಯ ಜನತಾ ಪಕ್ಷವು ವಿಶ್ವದಲ್ಲೇ ಒಂದು ದೊಡ್ಡ ರಾಜಕೀಯ ಪಕ್ಷವಾಗಿದೆ ಎಂದು ಭಾರತೀಯ ಜನತಾ ಪಕ್ಷದ ಮಯಸೂರು ನಗರ ಅಧ್ಯಕ್ಷ ಟಿ.ಎಸ್. ಶ್ರೀವತ್ಸ ಅಭಿಪ್ರಾಯಪಟ್ಟರು.
ಅವರು ಇಂದು ಬೆಳಿಗ್ಗೆ ನಗರದ ಚಾಮರಾಜಪುರಂನಲ್ಲಿರುವ ಭಾಜಪಾ ಕಛೇರಿಯಲ್ಲಿ ಭಾಜಪಾ ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಭಾರತೀಯ ಜನತಾ ಪಕ್ಷ ಮೈಸೂರು ನಗರ (ಜಿಲ್ಲಾ) ಹಾಗೂ ಮೈಸೂರು ನಗರ ವ್ಯಾಪಾರಿ ಮತ್ತು ವಾಣಿಜ್ಯ ಪ್ರಕೋಷ್ಠ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪಕ್ಷದ ಹಳೆಯ ಕಾರ್ಯಕರ್ತರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಭಾಜಪಕ್ಷವು 1980ರ ಎಪ್ರಿಲ್ 6 ರಂದು ಅಸ್ತಿತ್ವಕ್ಕೆ ಬಂದಿದ್ದು, ಆ ಹಿನ್ನಲೆಯಲ್ಲಿ ಇಂದು ಪಕ್ಷದ ಹಳೆಯ ಹಿರಿಯರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.
ಭಾರತೀಯ ಜನತಾ ಪಕ್ಷವು ಜನ್ಮ ತಳೆಯಲು ಪ್ರಮುಖ ಕಾರಣಕರ್ತರಾದ ದಿ|| ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ, ದಿ|| ಜಯಪ್ರಕಾಶ್ ನಾರಾಯಣ ಇವರುಗಳು 1975ರಲ್ಲಿ ಇಡೀ ದೇಶಾದ್ಯಂತ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಘೋಷಿಸಿದ್ದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಅವರ ವಿರುದ್ಧ ಹೋರಾಟ ನಡೆಸುವುದರ ಮೂಲಕ ದೇಶವನ್ನು ತುರ್ತು ಪರಿಸ್ಥಿತಿಯಿಂದ ಬಿಡುಗಡೆಗೊಳಿಸಿದರು. ಇವರುಗಳೊಂದಿಗೆ ಇನ್ನೂ 3 ಪಕ್ಷಗಳು ಕೈಗೂಡಿಸಿದ್ದವು ಎಂಬುದನ್ನು ನೆನಪು ಮಾಡಿಕೊಂಡರು.
1977ರಲ್ಲಿ ಮೊಟ್ಟಮೊದಲ ವಾರಿಗೆ ಭಾರತ ದೇಶದಲ್ಲಿ ಕಾಂಗ್ರೆಸ್ ಬದಲಿ ಸರ್ಕಾರ ದೇಶದ ಆಡಳಿತ ಚುಕ್ಕಾಣಿಯನ್ನು ಹಿಡಿದ ಭಾಜಪ ತನ್ನ ಶಕ್ತಿಯನ್ನು ದಿನದಿಂದ ದಿನಕ್ಕೆ ವೃದ್ಧಿಸಿಕೊಳ್ಳುತ್ತಾ ಸ್ವತಂತ್ರವಾಗಿ ಇಂದು ಕೇಂದ್ರದಲ್ಲಿ ತನ್ನ ಅಧಿಕಾರವನ್ನ ಸ್ಥಾಪಿಸಿದೆ. ಇದೆಲ್ಲದರ ಹಿಂದೆ ಪಕ್ಷಕ್ಕಾಗಿ ಹೋರಾಡಿದ ದಿ|| ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಲಾಲಕೃಷ್ಣಅದ್ವಾನಿ ಹಾಗೂ ಇನ್ನಿತರ ಮುಖಂಡರೊಂದಿಗೆ ಹಾಲಿ ಪ್ರಧಾನಿ ನರೇಂದ್ರ ಮೋದಿ ಸಹ ಪಕ್ಷವನ್ನು ಬಲಿಷ್ಠಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ನರೇಂದ್ರ ಮೋದಿಯವರ ಕಾರ್ಯವೈಖರಿಯನ್ನು ಮೆಚ್ಚಿದ ಇಡೀ ರಾಷ್ಟ್ರದ ಜನತೆ ಅವರನ್ನು ಎರಡನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡಿರುವುದು ಪಕ್ಷದ ಘನತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದ ಶ್ರೀವತ್ಸ ಇಂದು ಪಕ್ಷದ ಎಲ್ಲರೂ ಒಂದೇ ಕುಟುಂಬದ ಸದಸ್ಯರು ಎಂಬ ಮನೋಭಾವದಿಂದ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮೆಲ್ಲರ ಕನಸು ನನಸಾಗಲಿದೆ ಎಂದರು.
ಪಕ್ಷದ ಹಳೆಯ ಹಾಗೂ ಹಿರಿಯ ಕಾರ್ಯಕರ್ತರಾದ ಬಾಲಸುಬ್ರಮಣ್ಯಂ, ಪಾರ್ಥಸಾರಥಿ, ಎನ್.ಆರ್. ಚಂದ್ರಶೇಖರ್, ಬಸವಣ್ಣ, ಶಿವರಾಮಪೇಟೆಯ ದ್ವಾರಕಕೃಷ್, ಕ್ಯಾತಮಾರನಹಳ್ಳಿಯ ಟೆಂಟ್ ಆನಂದ್ ಮತ್ತು ಮಹಿಳಾ ಕಾರ್ಯಕರ್ತೆ ವಿಜಯಮಂಜುನಾಥ್‍ರವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರುಗಳಾದ ಮೈ.ವಿ. ರವಿಶಂಕರ್, ಸೋಮಸುಂದರ್, ಎನ್.ಆರ್. ಚಂದ್ರು, ಮೈಸೂರು ನಗರ ವ್ಯಾಪಾರಿ ಹಾಗೂ ವಾಣಿಜ್ಯ ಪ್ರಕೋಷ್ಠದ ಸಂಚಾಲಕ ಸುರೇಶ್, ಸಹ ಸಂಚಾಲಕ ರಾ. ಪರಮೇಶಗೌಡ ಸೇರಿದಂತೆ ಉಪಸ್ಥಿತರಿದ್ದರು.