ಬಿಜೆಪಿಯ ವಿಕಸಿತ ಭಾರತ ಮಾಯ ಪೆಟ್ಟಿಯಂತೆ: ದೇವನೂರು ಲೇವಡಿ

ಸಂಜೆವಾಣಿ ನ್ಯೂಸ್
ಮೈಸೂರು,ಏ.19:- ನಗರದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ ವಿಕಸಿತ ಭಾರತದ ಪರಿಕಲ್ಪನೆ ಕೇವಲ ಜಾತ್ರೆ ವೇಳೆ ಮಾಯಾ ಪೆಟ್ಟಿಯಲ್ಲಿ ಬಾಂಬೆ ನೋಡು, ಕೋಲ್ಕತಾ ನೋಡು, ಮದ್ರಾಸ್ ನೋಡು ಎಂಬ ಚಿತ್ರ ತೋರಿಸಿದಂತಿದೆ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ಲೇವಡಿ ಮಾಡಿದರು.
ಪ್ರಗತಿಪರ ಸಂಘಟನೆಗಳು ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ಬಿಜೆಪಿ- ಜೆಡಿಎಸ್ ಮೈತ್ರಿಕೋಟವನ್ನು ಸೋಲಿಸಲೆಂಬ ಹಮ್ಮಿಕೊಂಡಿರುವ ಅಭಿಯಾನದ ಅಂಗವಾಗಿ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿಗೆ ರೈತರ ಆರ್ತನಾದ ಕೇಳಿಸಿಲ್ಲ. ನೀಡಿದ್ದ ಭರವಸೆಯಂತೆ ಸ್ವಾಮಿನಾಥನ್ ವರದಿ ಜಾರಿಗೊಳಿಸಿದ್ದಿದ್ದಲ್ಲಿ ರೈತರು ಜಮೀನು ಮಾರಿ ನಗರಗಳಿಗೆ ಕೂಲಿ ಕೆಲಸಕ್ಕಾಗಿ ಗುಳೇ ಬರುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಇದೇ ವೇಳೆ ಮೋದಿ ಅವರ ಪರಮಾಪ್ತರ ಆಸ್ತಿ ಮೌಲ್ಯ ಏರಿದವು. ಇನ್ನು, ಕಾಂಗ್ರೆಸ್ ತಾನು ಅಧಿಕಾರಕ್ಕೆ ಬಂದಲ್ಲಿ ಸ್ವಾಮಿನಾಥನ್ ವರದಿ ಜಾರಿ ಭರವಸೆ ನೀಡಿದೆ ಈ ಬಗ್ಗೆ ಗಮನ ಹರಿಸಬೇಕಾಗಿದೆ ಎಂದರು.
ಬಳಿಕ, ಈ ಬಾರಿಯ ಚುನಾವಣೆ ವೇಳೆ ಇಬ್ಬರು ಸಭ್ಯ ಅಭ್ಯರ್ಥಿಗಳನ್ನು ರಾಜಕೀಯಕ್ಕೆ ತಳ್ಳಲ್ಪಟ್ಟಿರುವುದನ್ನು ನೋಡಿದಲ್ಲಿ ಸಂಕಟವಾಗುತ್ತದೆ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಡಾ. ಮಂಜುನಾಥ್ ಇವರಾಗಿದ್ದಾರೆ. ಈ ಇಬ್ಬರು ಹಿಂದುತ್ವದ ಖೆಡ್ಡಾಕ್ಕೆ ಬೀಳಬಾರದಾಗಿತ್ತು, ಅದರಲ್ಲಿ ಪಳಗಬಾರದಾಗಿತ್ತು. ಹೀಗಾಗಿ ಇವರು ಸೋತಾದರೂ ಈ ಖೆಡ್ಡಾದಿಂದ ಹೊರ ಬರಲಿ ಎಂದು ಪ್ರಾರ್ಥಿಸುವುದಾಗಿ ವ್ಯಂಗ್ಯವಾಡಿದರು.
ಅಲ್ಲದೆ, ಪೆÇ್ರ. ನಂಜುಂಡಸ್ವಾಮಿ ಅವರು ಹೇಳಿದಂತೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಮ್ಮ ಮತದಾರರು ನಿಷ್ಠುರವಾಗಿ ಬಿಜೆಪಿ ಪಕ್ಷವನ್ನು ನಿರಾಕರಣೆ ಮಾಡಿದಲ್ಲಿ ಮತದಾರರು ಮಾತ್ರವಲ್ಲದೆ, ದೇಶವೂ ಉಳಿಯುತ್ತದೆಂದರು.
ಬಡಗಲಪುರ ನಾಗೇಂದ್ರ, ಚಾಮರಸ ಮಾಲಿ ಪಾಟೀಲ್, ಹೊಸೂರು ಕುಮಾರ್, ರವಿಕಿರಣ್, ವಿಜೇಂದ್ರ ಹಾಜರಿದ್ದರು.