ಬಿಜೆಪಿಯ ಮೂರನೇ ಪಟ್ಟಿಯಲ್ಲಿಯೂ ಪ್ರಕಟವಾಗದ  ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ಹೆಸರು!

ಶಿವಮೊಗ್ಗ, ಎ. 17: ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಪಕ್ಷ, 10
ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟಿಸಿದೆ. ಆದರೆ ಟಿ -20 ಕ್ರಿಕೆಟ್ ಮ್ಯಾಚ್ ನಷ್ಟೆ
ಕುತೂಹಲ ಕೆರಳಿಸಿರುವ, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು
ಘೋಷಣೆಯಾಗಿಲ್ಲ. ಇದರಿಂದ ಕುತೂಹಲ ಮುಂದುವರಿಯುವಂತಾಗಿದೆ!
ಪ್ರಸ್ತುತ ಶಿವಮೊಗ್ಗ ನಗರ ಹಾಗೂ ಮಾನ್ವಿ ವಿಧಾನಸಭಾ ಕ್ಷೇತ್ರಗಳಿಗೆ ಮಾತ್ರ, ಬಿಜೆಪಿ
ಪಕ್ಷ ಅಭ್ಯರ್ಥಿಗಳ ಹೆಸರು ಘೋಷಣೆ ಬಾಕಿ ಉಳಿಸಿಕೊಂಡಿದೆ. ಉಳಿದ ಎಲ್ಲ ಕ್ಷೇತ್ರಗಳಿಗೆ
ಕಣಕ್ಕಿಳಿಯುವ ಉಮೇದುವಾರರ ಹೆಸರು ಪ್ರಕಟಿಸಿದೆ.
ಕುತೂಹಲ: ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಸದ್ಯ ಬಿಜೆಪಿ ಟಿಕೆಟ್ ರೇಸ್ ನಲ್ಲಿ ಮಾಜಿ
ಸಚಿವ ಕೆ.ಎಸ್.ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್, ಬಿ.ಎಸ್.ಯಡಿಯೂರಪ್ಪ ಬೆಂಬಲಿಗ
ಎಸ್.ಎಸ್.ಜ್ಯೋತಿಪ್ರಕಾಶ್, ಮಹಾನಗರ ಪಾಲಿಕೆ ಸದಸ್ಯ ಎಸ್.ಎನ್.ಚನ್ನಬಸಪ್ಪ, ಡಾ.ಧನಂಜಯ
ಸರ್ಜಿ ಮೊದಲಾದವರ ಹೆಸರು ಮುಂಚೂಣಿಯಲ್ಲಿದೆ ಎಂದು ಹೇಳಲಾಗುತ್ತಿದೆ.
ಪಾಲಿಕೆ ಸದಸ್ಯ ಎಸ್.ಎನ್.ಚನ್ನಬಸಪ್ಪ ಅವರಿಗೆ ಟಿಕೆಟ್ ಖಚಿತ. ಹೆಸರು ಘೋಷಣೆಯಷ್ಟೆ
ಬಾಕಿಯಿದೆ. ಈಗಾಗಲೇ ವರಿಷ್ಠರಿಂದ ಅವರಿಗೆ ಸಂದೇಶ ರವಾನಿಯಾಗಿದೆ ಎಂಬೆಲ್ಲ
ಅಂತೆಕಂತೆಗಳು ಸ್ಥಳೀಯ ಬಿಜೆಪಿ ಪಾಳೇಯದಲ್ಲಿ ಹಬ್ಬಿದ್ದವು. ಈ ಕುರಿತಂತೆ ಚನ್ನಬಸಪ್ಪ
ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಮೂರನೇ ಹಂತದ ಅಭ್ಯರ್ಥಿಗಳ
ಪಟ್ಟಿಯಲ್ಲಿ ಅವರ ಹೆಸರು ಪ್ರಕಟವಾಗಿಲ್ಲ.
ಇದರಿಂದ ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ಕುರಿತಂತೆ ಮನೆ
ಮಾಡಿರುವ ಕುತೂಹಲ ಮುಂದುವರಿಯುವಂತಾಗಿದೆ. ಯಾರಿಗೆ ಬಿಜೆಪಿ ಟಿಕೆಟ್ ದೊರಕಲಿದೆ
ಎಂಬುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಪರಿಣಮಿಸಿದೆ.