ಬಿಜೆಪಿಯ ಮಹಾ ಕೊಳಕು ರಾಜಕೀಯ ದಿನೇಶ್ ಟೀಕೆ

ಬೆಂಗಳೂರು, ಜೂ. ೨೩- ಮಹಾರಾಷ್ಟ್ರದಲ್ಲಿ ಮತ್ತೆ ಕೊಳಕು ರಾಜಕೀಯ ಶುರು ಮಾಡಿರುವ ಬಿಜೆಪಿ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬರುವ ಯತ್ನ ಮಾಡುತ್ತಿದೆ. ಆಪರೇಷನ್ ಕಮಲ ಬಿಜೆಪಿಯವರ ಅನಿಷ್ಠ ಕೂಸು ಎಂದು ಮಾಜಿ ಸಚಿವ ಹಾಗೂ ಎಐಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.
ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಮಧ್ಯ ಪ್ರದೇಶ ಕರ್ನಾಟಕದಲ್ಲಿ ಈಗಾಗಲೇ ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದಿರುವ ಬಿಜೆಪಿ, ಮಹಾರಾಷ್ಟ್ರದಲ್ಲೂ ಹೀನ ರಾಜಕಾರಣ ಮಾಡುತ್ತಿದೆ. ಬಿಜೆಪಿಯ ವರ್ತನೆ ಸಂವಿಧಾನಬಾಹಿರ ಎಂದು ಅವರು ಟ್ವೀಟರ್‌ನಲ್ಲಿ ಟೀಕಿಸಿದ್ದಾರೆ.
ನಾ ಖಾವೂಂಗ,ನಾ ಖಾನೇ ದೂಂಗಾ ಎಂದು ಭಾಷಣ ಬಿಗಿಯುವ ಪ್ರಧಾನಿ ಮೋದಿ ಅವರು ಆಪರೇಷನ್ ಕಮಲಕ್ಕೆ ಸುರಿಯುವ ಸಾವಿರಾರು ಕೋಟಿ ಹಣವನ್ನು ಯಾರು ತಿಂದಿ ವಿಸರ್ಜಿಸಿದ್ದು ಎಂದು ಹೇಳುತ್ತಾರೆಯೇ ಎಂದು ಪ್ರಶ್ನಿಸಿರುವ ದಿನೇಶ್‌ಗುಂಡೂರಾವ್, ಮೋದಿ ಅವರು ಪ್ರಾಮಾಣಿಕರಾಗಿದ್ದರೆ ಮಹಾರಾಷ್ಟ್ರದಲ್ಲಿ ಈಗ ನಡೆಯುತ್ತಿರುವ ಆಪರೇಷನ್ ಕಮಲದಲ್ಲಿ ಕೈ ಬದಲಾಗುವ ಹಣದ ಮೂಲದ ಬಗ್ಗೆ ಇಡಿ ತನಿಖೆಗೆ ಆದೇಶಿಸುತ್ತಾರಾ ಎಂದು ಟ್ವೀಟರ್‌ನಲ್ಲಿ ಪ್ರಶ್ನಿಸಿದ್ದಾರೆ.
ಬಿಜೆಪಿ ಅಧಿಕಾರಕ್ಕಾಗಿ ಎಷ್ಟು ಕೀಳು ಮಟ್ಟಕ್ಕಾದರೂ ಇಳಿಯುತ್ತದೆ ಎಂಬುದಕ್ಕೆ ಮಹಾರಾಷ್ಟ್ರದ ಇಂದಿನ ರಾಜಕೀಯ ಬೆಳವಣಿಗೆಗಳು ಉದಾಹರಣೆ. ಸಂವಿಧಾನಕ್ಕೆ ಸದಾ ಅಪಚಾರ ಎಸಗುತ್ತಾ ಪ್ರಜಾಪ್ರಭುತ್ವ ಮೌಲ್ಯಗಳ ಕತ್ತು ಹಿಸುಕುತ್ತಾ ಬಂದಿರುವ ಬಿಜೆಪಿ, ಈಗ ಮಹಾರಾಷ್ಟ್ರದಲ್ಲೂ ಅನೈತಿಕ ರಾಜಕಾರಣ ಮೂಲಕ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ ಎಂದು ಅವರು ಬಿಜೆಪಿ ವಿರುದ್ಧ ಟ್ವೀಟರ್‌ನಲ್ಲಿ ಕಿಡಿಕಾರಿದ್ದಾರೆ.
ಸಂವಿಧಾನಬದ್ಧವಾಗಿ ಅಸ್ತಿತ್ವದಲ್ಲಿರುವ ಸರ್ಕಾರವನ್ನು ಅಸಂವಿಧಾನಿಕವಾಗಿ ಉರುಳಿಸುವ ಕೆಟ್ಟ ಸಂಪ್ರದಾಯ ಆರಂಭವಾಗಿದ್ದೇ ಕರ್ನಾಟಕದಲ್ಲಿ ಆಪರೇಷನ್ ಕಮಲದ ಜನಕ ಯಡಿಯೂರಪ್ಪ ಎಂದು ಅವರು ಟೀಕಿಸಿದ್ದಾರೆ.
ಯಡಿಯೂರಪ್ಪ ಅವರು ಸೃಷ್ಟಿಸಿದ ಪಿಡುಗನ್ನು ಇಂದು ದೇಶಾದ್ಯಂತ ಬಿಜೆಪಿಯವರು ಹಬ್ಬಿಸಿ ರಾಜಕೀಯ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದ್ದಾರೆ. ಇಂತಹ ಪಿಡುಗಿಗೆ ಜನರೇ ಕಡಿವಾಣ ಹಾಕಬೇಕು ಎಂದು ಅವರು ಟ್ವೀಟರ್‌ನಲ್ಲಿ ಹೇಳಿದ್ದಾರೆ.